ಮಾಧ್ಯಮದವರ ಮೇಲಿನ ಹಲ್ಲೆ ಖಂಡನೀಯ

ಈ ಸುದ್ದಿಯನ್ನು ಶೇರ್ ಮಾಡಿ

media

ಚಿಕ್ಕಮಗಳೂರು, ಅ.18– ರಾಜ್ಯದ ವಿವಿಧ ಭಾಗಗಳಲ್ಲಿ ಮಾಧ್ಯಮದವರ ಮೇಲೆ ಪದೇಪದೇ ಹಲ್ಲೆ ನಡೆಯುತ್ತಿರುವುದರ ಬಗ್ಗೆ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಕಳವಳ ವ್ಯಕ್ತಪಡಿಸಿದೆ.ಅಪರ ಜಿಲ್ಲಾಧಿಕಾರಿ ವೈಶಾಲಿ ರವರ ಮೂಲಕ ರಾಜ್ಯದ ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಅ.9ರಂದು ಬೆಂಗಳೂರಿನ ಹೊಸಕೋಟೆಯಲ್ಲಿನ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟಿವಿ ವರದಿಗಾರ ಆನಂದ್ ಎಂಬುವವರು ಅಕ್ರಮ ಭೂ ಮಾಫಿಯ ಬಗ್ಗೆ ವರದಿ ಮಾಡಲು ತೆರಳಿ ಚಿತ್ರೀಕರಣದಲ್ಲಿ ತೊಡಗಿದ್ದಾಗ ಕೆಲವರು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರಿಗೆ ಜೀವ ಬೆದರಿಕೆ ಹಾಕಿ ಅವರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿದೆ.
ಮನವಿಯಲ್ಲಿ ಈ ವಿಷಯವನ್ನು ತಿಳಿಸಿರುವ ಜಿಲ್ಲಾಧ್ಯಕ್ಷ ಕೆ.ಜಯಕುಮಾರ್, ಪೊಲೀಸರು ಸುಮಾರು 8 ಗಂಟೆಗಳ ಕಾಲ ಆನಂದ್ ಅವರ ಕೈಗೆ ಕೋಳ ಹಾಕಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು ರಾಜಕಾರಣಿಗಳು ಹಾಗೂ ಭೂ ಮಾಫಿಯಾದ ಪರವಾಗಿ ಕಾರ್ಯ ನಿರ್ವಹಿಸಿ ಚಿತ್ರಹಿಂಸೆ ನೀಡಿರುವುದು ಖಂಡನೀಯ ಎಂದಿದ್ದಾರೆ.ಇಂತಹ ಪ್ರಕರಣಗಳು ನಿರಂತರ ನಡೆಯುತ್ತಲೇ ಬಂದಿದೆ ಎಂದಿರುವ ಅವರು, ಅ.17ರಂದು ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದ ಮಾಧ್ಯಮದವರ ಮೇಲೆಯೂ ಕಿಡಿಗೇಡಿಗಳು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸುವ ಮೂಲಕ ರಾಜ್ಯದಲ್ಲಿ ನಿರ್ಭೀತವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ತಿಳಿಸಿ ಆತಂಕ ವ್ಯಕ್ತಪಡಿಸಿದ್ದಾರೆ.ಈ ರೀತಿಯ ಘಟನೆಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಕೂಡಲೇ ರಾಜ್ಯದ ಮುಖ್ಯ ಮಂತ್ರಿಗಳು ಈ ರೀತಿಯ ಘಟನೆಗಳು ಇನ್ನು ಮುಂದೆಯಾದರೂ ನಡೆಯದಂತೆ ಸೂಕ್ತ ಕ್ರಮವಹಿಸಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಬೇಕು ಎಂದವರು ಒತ್ತಾಯಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin