ಮಾನವೀಯ ಮೌಲ್ಯಗಳಿಗೆ ಉದಾಹರಣೆ ವಾಜಪೇಯಿ : ಸದಾನಂದಗೌಡ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

Sadanandagowda

ಬೆಂಗಳೂರು, ಡಿ.25- ಮಾನವೀಯ ಮೌಲ್ಯಗಳಿಗೆ ಜ್ವಲಂತ ಉದಾಹರಣೆಯಾಗಿರುವವರು ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬಣ್ಣಿಸಿದರು. ಬಿಜೆಪಿ ಕಚೇರಿಯಲ್ಲಿ ವಾಜಪೇಯಿಯವರ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸುಶಾಸನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮಾನವೀಯ ಮೌಲ್ಯಗಳನ್ನು ಮರೆಯಬಾರದು. ಅದಕ್ಕೆ ಜ್ವಲಂತ ಉದಾಹರಣೆಯಾಗಿ ನಮ್ಮ ವಾಜಪೇಯಿಯವರು ಸಾಕ್ಷಿಯಾಗಿದ್ದಾರೆ ಎಂದರು. ಜಾತಿ, ಭಾಷೆ, ಧರ್ಮಗಳ ನಡುವೆ ಸಂಘರ್ಷಗಳು ನಡೆಯುತ್ತಿದ್ದು, ಸಾಮರಸ್ಯದ ಕೊರತೆ ಕಾಡುತ್ತಿರುವ ಈ ಸನ್ನಿವೇಶದಲ್ಲಿ ವಾಜಪೇಯಿಯವರ ನಡೆ-ನುಡಿ ಪ್ರಸ್ತುತವಾಗಿದೆ. ಅವರು ನಡೆದು ಬಂದ ದಾರಿಯನ್ನು ಅವಲೋಕನ ಮಾಡಿಕೊಂಡು ಮುನ್ನಡೆಯಬೇಕಾದ ಅಗತ್ಯತೆ ಇದೆ. ವಾಜಪೇಯಿಯವರ ಬದುಕಿನ ರೀತಿ ನಮ್ಮ ಬಿಜೆಪಿಯ ಪರಿಕಲ್ಪನೆಯಾಗಿದೆ ಎಂದು ಸದಾನಂದಗೌಡರು ಹೇಳಿದರು.

ವಾಜಪೇಯಿಯವರ ಹುಟ್ಟುಹಬ್ಬದ ದಿನ ಬಿಜೆಪಿ ಕಾರ್ಯಕರ್ತರಿಗೆ ಪವಿತ್ರವಾದ ದಿನವಾಗಿದೆ. ದೇಶಾದ್ಯಂತ ಎಲ್ಲರೂ ಈ ದಿನವನ್ನು ಆಚರಿಸುತ್ತಾರೆ ಎಂದರೆ ಅವರು ಯಾವ ರೀತಿ ಬದುಕಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗುತ್ತದೆ ಎಂದು ಸದಾನಂದಗೌಡರು ಹೇಳಿದರು. ಅವರ ಕವಿತೆ ಮತ್ತು ನಡವಳಿಕೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಜನಸಂಘದ ಮೂಲಕ ಸಂಸತ್ ಪ್ರವೇಶಿಸಿದ ವಾಜಪೇಯಿಯವರು ಕೇವಲ ಎರಡು ಸೀಟುಗಳು ಬಂದಾಗ ಇನ್ನೇನು ನಾವು ಬಿದ್ದೇ ಬಿಟ್ಟೆವು ಎಂದು ತಿಳಿದುಕೊಂಡಿದ್ದರು. ಆದರೆ, ಮತ್ತೆ ನಾವು ಎದ್ದು ಬರುತ್ತೇವೆ ಎಂಬುದನ್ನು ತೋರಿಸಿಕೊಟ್ಟವರು ವಾಜಪೇಯಿಯವರು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಸಾಧಿಸುವುದು ಸಾಧ್ಯ ಎಂಬುದನ್ನು ವಾಜಪೇಯಿಯವರು ಸಾಕ್ಷೀಕರಿಸಿದರು.
ಯಾವುದೇ ವ್ಯಕ್ತಿ ದೇಶಕ್ಕಿಂತ ದೊಡ್ಡವನಲ್ಲ. ಅಂತಹ ಭಾವನೆ ಮೊದಲು ತೊಲಗಬೇಕು ಎಂದು ಹೇಳಿದರು. 1957ರಲ್ಲಿ ಸಂಸದರಾದಾಗ ವಿದೇಶಾಂಗ ನೀತಿ ಬಗ್ಗೆ ಮೊದಲು ವಾಜಪೇಯಿಯವರು ಸಂಸತ್ತಿನಲ್ಲಿ ಮೊದಲು ಮಾತನಾಡಿದಾಗ ಪ್ರಧಾನಿಯಾಗಿದ್ದ ಜವಾಹರ್‍ಲಾಲ್ ನೆಹರು ಅವರು ವಾಜಪೇಯಿಯವರಿಗೆ ಮತ್ತೆ ಮಾತನಾಡಲು ಅವಕಾಶ ನೀಡಿದರು. ಅಷ್ಟು ನಿರರ್ಗಳವಾಗಿ ಮಾತನಾಡಿದರು ಎಂದು ಹೇಳಿದರು.

ಆದರೆ, ಈಗ ಸಂಸತ್‍ನಲ್ಲಿ ವಿಚಾರಗಳನ್ನು ಬಿಟ್ಟು ಕೇವಲ ಪ್ರಚಾರಕ್ಕಾಗಿ ಕಲಾಪದ ಸಮಯವನ್ನು ಹಾಳು ಮಾಡುತ್ತಿರುವುದು ದುರದೃಷ್ಟಕರ ಎಂದು ಸದಾನಂದಗೌಡರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎನ್.ರವಿಕುಮಾರ್, ತೇಜಸ್ವಿನಿಗೌಡ, ಸಿ.ಸೋಮಶೇಖರ್, ಅಬ್ದುಲ್‍ಅಜೀಂ, ಪಿ.ಸಿ.ಮೋಹನ್ ಮುಂತಾದವರು ಪಾಲ್ಗೊಂಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin