ಮಾನವ ಸಹಿತ ನೌಕೆ ಉಡಾವಣೆ ಯಶಸ್ವಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಮಹತ್ವದ ಸಾಧನೆ

ಈ ಸುದ್ದಿಯನ್ನು ಶೇರ್ ಮಾಡಿ

China-Space

ಬೀಜಿಂಗ್, ಅ.17-ಇಬ್ಬರು ಖಗೋಳಯಾತ್ರಿಗಳನ್ನು ಹೊಂದಿರುವ ಅಂತರಿಕ್ಷ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಚೀನಾ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ವಾಯುವ್ಯ ಚೀನಾದ ಗೋಬಿ ಮರುಭೂಮಿ ಬಳಿ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ 50 ವರ್ಷದ ಜಿಂಗ್ ಹೈಪೆಂಗ್ ಮತ್ತು 37ರ ಹರೆಯದ ಚೆನ್ ಡಾಂಗ್ ಅವರಿದ್ದ ಶೆಂಝೌ-11 (ಚೀನಿ ಭಾಷೆಯಲ್ಲಿ ಸ್ವರ್ಗ ನೌಕೆ) ಗಗನನೌಕೆಯನ್ನು ಸ್ಥಳೀಯ ಕಾಲಾಮಾನ ಬೆಳಿಗ್ಗೆ 7.30ರಲ್ಲಿ ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿಸಲಾಯಿತು.
ಉಡಾವಣೆ ನಂತರ ಲಾಂಗ್ ಮಾರ್ಚ್-2ಎಫ್ ಕ್ಯಾರಿಯರ್ ರಾಕೆಟ್‍ನಿಂದ ಈ ಗಗನನೌಕೆ ಅಂತರಿಕ್ಷ ಕಕ್ಷೆಗೆ ಸೇರ್ಪಡೆಯಾಗಲಿದೆ.

ಮಾನವಸಹಿತ ನೌಕೆಯನ್ನು ಉಡಾವಣೆ ಮಾಡುವ ಮೂಲಕ 2022ರ ವೇಳೆಗೆ ತನ್ನದೇ ಆದ ಶಾಶ್ವತ ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಯ ಕನಸನ್ನು ಸಾಕಾರಗೊಳಿಸುವ ದಿಕ್ಕಿನತ್ತ ಚೀನಾ ಸಾಗಿದೆ. ಟಿಯಾಂಗಾಂಗ್-2 ಎಂಬ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ನೌಕೆ ಎರಡು ದಿನಗಳಲ್ಲಿ ಇಳಿಯಲಿದೆ. ನಂತರ ಇಬ್ಬರು ಗಗನಯಾತ್ರಿಗಳು 30 ದಿನಗಳವರೆಗೆ ಲ್ಯಾಬ್‍ನಲ್ಲಿ ಇರುವರು. ಪ್ರಯೋಗಾಲಯದಲ್ಲಿ ಇವರನ್ನು ಇಳಿಸಿದ ನಂತರ ಒಂದು ದಿನದ ಒಳಗಾಗಿ ಅಂತರಿಕ್ಷ ನೌಕೆಯು ಭೂಮಿಗೆ ಹಿಂದಿರುಗಲಿದೆ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಎಂಜಿನಿಯರಿಂಗ್ ಕಾರ್ಯಾಲಯದ ಉಪ ನಿರ್ದೇಶಕ ವು ಪಿಂಗ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin