ಮಾರ್ಕೆಟ್ ಬಂದ ಗಣೇಶ : ರೋಡ್ ಸೈಡಲ್ಲಿ ಗಣೇಶ ಮೂರ್ತಿಯ ಬುಕ್ಕಿಂಗ್ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

gsdgsdgsdgಬೆಂಗಳೂರು, ಆ.4- ನಗರದ ಲಾಲ್‍ಬಗ್ ಪಶ್ಚಿಮ ದ್ವಾರದಿಂದ ಮಿನರ್ವ ವೃತ್ತದವರೆಗೆ ಇರುವ ಆರ್‍ವಿ ರಸ್ತೆಯ ಇಕ್ಕೆಲಗಳಲ್ಲಿ  ಗಣೇಶ ಮೂರ್ತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ.   ಹತ್ತಾರು ವ್ಯಾಪಾರಿಗಳು ನೂರಾರು ಮೂರ್ತಿಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂ. ಆದಾಯವನ್ನು ಈ ಸಂದರ್ಭ ಗಳಿಸುತ್ತಾರೆ. ಈಗಾಗಲೇ ಸಾರ್ವಜನಿಕರಿಂದ ಗಣೇಶ ಮೂರ್ತಿಯ ಬುಕ್ಕಿಂಗ್ ಕಾರ್ಯ ಆರಂಭವಾಗಿದೆ. ಹಬ್ಬದ ದಿನ ಅಥವಾ ಮುನ್ನಾ ದಿನ ಒಯ್ಯುವ ಗಣೇಶನನ್ನು ಆಯ್ಕೆ ಮಾಡಿಕೊಳ್ಳುವ ಹಾಗೂ ತಮಗೆ ಬೇಕಾದ ಮಾದರಿಯ ಗಣಪನ ವಿಗ್ರಹವನ್ನು ಸಿದ್ಧಪಡಿಸುವಂತೆ ಮುಂಗಡ ನೀಡುವ ಕೆಲಸ ನಿರಂತರವಾಗಿ ಸಾಗಿದೆ.
ಆರ್‍ವಿ ರಸ್ತೆಯ ಇಕ್ಕೆಲದಲ್ಲೂ ನೂರಾರು ಮಾದರಿಯ ಗಣೇಶ ವಿಗ್ರಹಗಳನ್ನು ನಿಲ್ಲಿಸಲಾಗಿದ್ದು, ಹಬ್ಬಕ್ಕೆ ತಿಂಗಳು ಮುನ್ನವೇ ಪ್ಲಾಸ್ಟಿಕ್ ಹೊದಿಗೆ ಹೊದ್ದು ನಿಂತಿರುವ ಗಣೇಶನ ವಿಗ್ರಹಗಳು ಮಾರ್ಗದಲ್ಲಿ ಸಾಗುವವರನ್ನು ಸೆಳೆಯುತ್ತಿದ್ದಾನೆ. ವಿವಿಧ ಬಣ್ಣದ ಗಣೇಶನ ವಿಗ್ರಹಗಳು ಅರ್ಧ ಅಡಿಯಿಂದ 10 ಅಡಿವರೆಗೂ ಸಿದ್ಧಗೊಂಡು ನಿಂತಿವೆ.  ನಗರದೆಲ್ಲೆಡೆ ಮಾರಾಟವಾಗುವ ಜತೆಗೆ ಇಲ್ಲಿನ ಗಣೇಶ ವಿಗ್ರಹಗಳು ಅಕ್ಕಪಕ್ಕದ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹೊಸೂರು ಸೇರಿದಂತೆ ಹಲವೆಡೆ ಗ್ರಾಹಕರನ್ನು ಹೊಂದಿದೆ. ಈ ಭಾಗದ ಯುವಕರು, ಯುವಕ ಮಂಡಳಿ, ಬಡಾವಣೆ ನಾಗರಿಕರ ಕ್ಷೇಮಾಭಿವೃದ್ಧಿ ಸಂಘಗಳು ಗಣೇಶ ಮೂರ್ತಿಗಳನ್ನು ಇಲ್ಲಿಂದಲೇ ಒಯ್ಯುತ್ತಾರೆ.

ಬಯಸುವುದು ಬಣ್ಣದ ಗಣೇಶ:
ಸರ್ಕಾರ, ಬಿಬಿಎಂಪಿ ಯಾವುದೇ ಆದೇಶ ಹೊರಡಿಸಲಿ, ಯುವಕರು ಬಯಸುವುದು ಬಣ್ಣದ ಗಣೇಶನನ್ನು. ವಿವಿಧ ಬಣ್ಣಗಳಲ್ಲಿ ಭರ್ಜರಿ ಕಣ್ಣು ಸೆಳೆಯುವ ಆಳೆತ್ತರದ ಮೂರ್ತಿಯನ್ನು ತಮ್ಮ ಬಡಾವಣೆಯ ನಡುರಸ್ತೆಯಲ್ಲಿ ಪೆಂಡಾಲ್ ಹಾಕಿ ಕೂರಿಸಿ, ಬಣ್ಣ ಬಣ್ಣದ ಬೆಳಕನ್ನು ಮೂರ್ತಿ ಮೇಲೆ ಬೀಳುವಂತೆ ಮಾಡಿ, ತರಹೇವಾರಿ ಅಲಂಕಾರವನ್ನು ಗಣಪನಿಗೆ ಮಾಡಿ ಪೂಜಿಸಿದಾಗಲೇ ಜನರಿಗೆ ಸಮಾಧಾನ.
ಮಿನುಗುತ್ತಿರುವ ಗಣೇಶನ ಮುಂದೆ ಜನ ಭಕ್ತಿಯಿಂದ ಕೈಮುಗಿಯುತ್ತಿದ್ದರೆ, ಆರ್ಕೆಸ್ಟ್ರಾ ಹಾಡುಗಳು, ನೃತ್ಯ ವೈಭವಿಸಿದರೆ ಆ ವರ್ಷಕ್ಕೆ ಹಬ್ಬ ಅದ್ದೂರಿ ಅಂತಲೇ ಅರ್ಥ. ಇದರಿಂದ ಯುವ ಪೀಳಿಗೆ ಆಳೆತ್ತರದ  ಬಣ್ಣದ ಗಣೇಶನನ್ನೇ ಬಯಸುವುದು. ಅಲ್ಲದೇ ಮಣ್ಣಿನಿಂದ ಮಾಡಿದ ದೊಡ್ಡ ವಿಗ್ರಹವನ್ನು ಎತ್ತುವುದು ಸಹ ಕಷ್ಟವಾಗಿರುವುದರಿಂದ ಜನ ಪಿಒಪಿ, ಹುಲ್ಲಿನಿಂದ ಮಾಡಿದ ಜೇಡಿಮಣ್ಣು ಲೇಪಿತ ಗಣೇಶನಿಗೆ ಮೊರೆ ಹೋಗುವುದೇ ಹೆಚ್ಚು.
ಎಲ್ಲಾ ವಿಧದ ವಿಗ್ರಹ ಲಭ್ಯ:
ನಾವು ಪಿಒಪಿ, ಹುಲ್ಲು, ಮಣ್ಣಿನಿಂದ ಸಿದ್ಧಪಡಿಸಿದ ಎಲ್ಲಾ ವಿಧದ ಗಣೇಶನನ್ನೂ ಮಾರಾಟ ಮಾಡುತ್ತೇವೆ. ಜನರಲ್ಲಿ ಜಾಗೃತಿ ಮೂಡಿದೆ. ಆದರೂ ಬಣ್ಣದ ಗಣೇಶನನ್ನು ಬಯಸುವವರು ಹೆಚ್ಚು. ವರ್ಷಕ್ಕೊಮ್ಮೆ ಹಬ್ಬ ಮಾಡುವಾಗ ಅದ್ಧೂರಿಯಾಗಿರಬೇಕೆಂದು ಬಯಸುತ್ತಾರೆ.   ಇನ್ನು ನೀರು ಕಲುಶಿತವಾಗುತ್ತದೆ. ರಾಸಾಯನಿಕಗಳಿಂದ ಅಪಾಯ ಆಗುತ್ತದೆ ಎನ್ನುವುದು ಬೆಂಗಳೂರಿಗೆ ಮಾತ್ರ. ನಾವು ಮಾರುವ ಶೇ. 80ರಷ್ಟು ವಿಗ್ರಹಗಳು ಗ್ರಾಮೀಣ ಭಾಗಕ್ಕೆ ತೆರಳುವಂತವು. ಅಲ್ಲಿ ಹರಿಯುವ ನೀರಲ್ಲಿ ಬಿಡುವುದರಿಂದ ನೀರು ಕಲ್ಮಶಗೊಳ್ಳುತ್ತದೆ.   ಹಾನಿ ಆಗುತ್ತದೆ ಎನ್ನುವ ಮಾತು ಬರಲ್ಲ. ನಾವು ಗ್ರಾಹಕರು ಬಯಸುವುದನ್ನು ನೀಡಬೇಕು. ಪರಿಸರ ಗಣಪನನ್ನು ಕೊಳ್ಳುವವರೂ ಇದ್ದಾರೆ. ಅವರಿಗೂ ಬಯಸಿದಷ್ಟು ಮೂರ್ತಿ ಸಿದ್ಧಪಡಿಸಿ ನೀಡುತ್ತೇವೆ ಎನ್ನುತ್ತಾರೆ ಆರ್.ವಿ.ರಸ್ತೆಯ ಗಣೇಶ ವಿಗ್ರಹ ಮಾರಾಟ ಮಾಡುವ ವ್ಯಾಪಾರಿ ತೀರ್ಥಗಿರಿ ಮಾವಳ್ಳಿ.
ಮಣ್ಣಿನ ವಿಗ್ರಹ ಕಷ್ಟ:
ಸಂಪೂರ್ಣ ಜೇಡಿಮಣ್ಣಿನಿಂದ ಮಾಡಿದ ವಿಗ್ರಹಗಳು ಒಣಗಿದಾಗ ಅಥವಾ ಕೆಲ ದಿನ ಬಿಟ್ಟು ಬಿರುಕು ಬಿಡುವುದು ಹೆಚ್ಚು. ಪೂಜೆಗೆ ಮನೆಗೆ ಕೊಂಡೊಯ್ದ ವಿಗ್ರಹ ಭಿನ್ನವಾಗಿದ್ದರೆ ಯಾರು ತಾನೆ ಪೂಜೆ ಮಾಡಲು ಬಯಸುತ್ತಾರೆ. ಇದನ್ನು ಸರ್ಕಾರಗಳು ಮನಗಾಣಬೇಕು.  ವರ್ಷಕ್ಕೊಮ್ಮೆ ಬರುವ ಹಬ್ಬಕ್ಕೆ ನಿರ್ಬಂಧ ಹೇರುವ ಕೆಲಸ ಮಾಡಬಾರದು. ಇವರು ಪ್ರಯತ್ನಿಸಿದರೂ ಹಿಂದುಗಳ ಹಬ್ಬಕ್ಕೆ ಸರ್ಕಾರ ಹಾಕುವ ನಿರ್ಬಂಧ ಎಂದು ಪರಿಗಣನೆಯಾಗಿ ಬೇರೆ ಸಂದೇಶ ರವಾನೆ ಆಗಬಹುದು. ಅಲ್ಲದೇ ಜನ ಇಂತ ನಿರ್ಬಂಧಕ್ಕೆ ಬೆಲೆ ಕೊಡಲ್ಲ.  ಈ ವರ್ಷವೂ ಬಣ್ಣದ ಗಣೇಶನಿಗೇ ಬೇಡಿಕೆ ಇದೆ. ಅದೇ ಹೆಚ್ಚು ಮಾರಾಟವಾಗುತ್ತೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸಿದ ಮತ್ತೋರ್ವ ವ್ಯಾಪಾರಿ.
-ವೈ.ಎಸ್.ರವೀಂದ್ರ

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin