ವಾಯುಮಾಲಿನ್ಯದ ಮರಣ ಮೃದಂಗ, ಪ್ರತಿ ವರ್ಷ 7 ಲಕ್ಷ ಮಕ್ಕಳ ಸಾವು…!

ಈ ಸುದ್ದಿಯನ್ನು ಶೇರ್ ಮಾಡಿ

ವಾಯುಮಾಲಿನ್ಯದಿಂದಾಗಿ ಐದು ವರ್ಷದೊಳಗಿನ ಸುಮಾರು 700,000 ಮಕ್ಕಳು ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರಲ್ಲದೆ ಲಕ್ಷಾಂತರ ಚಿಣ್ಣರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಷಕಾರಿ ವಾಯು ಸೇವನೆಯಿಂದ ಹೆಚ್ಚಾಗಿ ಪುಟ್ಟಮಕ್ಕಳ ಮೆದುಳಿನ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಮಾರಣಾಂತಿಕ ಕಾಯಿಲೆಗೂ ಕಂದಮ್ಮಗಳು ಬಲಿಯಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಆತಂಕ ವ್ಯಕ್ತಪಡಿಸಿದೆ. ಪ್ರಪಂಚದ 1.8 ಶತಕೋಟಿ ಮಕ್ಕಳ ಪೈಕಿ ಶೆ.93ರಷ್ಟು ಮಕ್ಕಳು ವಿಷಯುಕ್ತ ಗಾಳಿ ಸೇವಿಸುತ್ತಿದ್ದಾರೆ.

ಇದರಲ್ಲಿ 630 ದಶಲಕ್ಷ ಮಕ್ಕಳು(ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ) ಬಾಧಿತರಾಗುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಸುರಕ್ಷಿತ ಮಿತಿಗಿಂತ ಹೆಚ್ಚಿನ ಅಪಾಯದ ಗಾಳಿಯನ್ನು ಸೇವಿಸುತ್ತಿರುವುದರಿಂದ ಗಂಭೀರ ಅನಾರೋಗ್ಯಕರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ. 98ರಷ್ಟು ಮಕ್ಕಳು ವಿಷಕಾರಿ ವಾಯುವಿಗೆ ಬಲಿಯಾಗುತ್ತಿದ್ದಾರೆ ಎಂಬುದು ಆಘಾತಕಾರಿ ಸಂಗತಿ. ಮಕ್ಕಳಿಗೆ ಹೆಚ್ಚು ಗಂಡಾಂತರ ಯಾವುದೇ ಸೋಂಕು ಚಿಕ್ಕಮಕ್ಕಳಿಗೆ ಬೇಗ ತಗಲುತ್ತವೆ.

ದೊಡ್ಡವರಿಗಿಂತ ದೇಹ ತೂಕದ ಪ್ರತಿ ಯೂನಿಟ್‍ಗೆ ಹೆಚ್ಚು ವಾಯುವನ್ನು ಅವರು ಉಸಿರಾಡುತ್ತಾರೆ. ಮಕ್ಕಳು ಉಸಿರಾಡುವಾಗ ಗಾಳಿಯಲ್ಲಿರುವ ಕೂದಲಿನಷ್ಟೇ ತೆಳುವಾದ ಮಾಲಿನ್ಯಕಣಗಳು ಅವರ ಶ್ವಾಸಕೋಶಗಳನ್ನು ಪ್ರವೇಶಿಸಿ ನಂತರ ಮೆದುಳು ತಲುಪುತ್ತವೆ. ಹಾನಿಕಾರಕ ಸೂಕ್ಷ್ಮ ವಸ್ತುಗಳಿಂದ ರಕ್ಷಿಸುವ ಮೆದುಳಿನ ಪೊರೆಗಳಿಗೆ ಅದು ಹಾನಿಯನ್ನುಂಟು ಮಾಡುತ್ತವೆ.

ನಗರವಾಸಿಗಳಲ್ಲೇ ಈ ಸಮಸ್ಯೆ ಹೆಚ್ಚಾಗಿದ್ದು, ಉನ್ನತ ಮಟ್ಟದ ಮ್ಯಾಗ್ನಟೆಡ್ ಕಣಗಳಲ್ಲಿರುವ ಗಾಳಿ ಸೇವನೆಯಿಂದ ನರ ಸಂಬಂಧಿ ರೋಗಗಳು, ಸೂಕ್ಷ್ಮ ನರಗಳ ಅವನತಿ ಹಾಗೂ ಮೆದುಳಿನ ಕಾಯಿಲೆಗಳಿಗೂ ವಾಯುಮಾಲಿನ್ಯ ಎಡೆ ಮಾಡಿಕೊಡುತ್ತಿದೆ.

ಮಾಲಿನ್ಯಕಾರಕ ಕಣಗಳು ನಗರಪ್ರದೇಶದ ವಾತಾವರಣದಲ್ಲಿ ಅಧಿಕ ಮಟ್ಟದಲ್ಲಿದ್ದು, ಅವು ಗಾಳಿಯ ಮೂಲಕ ನಗರವಾಸಿಗಳ ದೇಹ ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.ಇಂಥ ವಿಷಕಾರಿ ರಾಸಾಯನಿಕಗಳು ಇರುವ ವಾಯು ಸೇವನೆಯಿಂದ ವಯಸ್ಕರಿಗಿಂತ ಮಕ್ಕಳಿನ ಮಿದುಳಿಗೇ ಹೆಚ್ಚು ಹಾನಿಯಾಗುತ್ತದೆ.

ಇದಕ್ಕೆ ಪ್ರಮುಖ ಕಾರಣ ನಗರೀಕರಣ. 2050ರ ಹೊತ್ತಿಗೆ ವಿಶ್ವದ ಜನಸಂಖ್ಯೆಯ ಮೂರರಲ್ಲಿ ಎರಡು ಭಾಗದಷ್ಟು ಜನರು ನಗರಗಳಲ್ಲೇ ವಾಸಿಸುತ್ತಾರೆ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್) ಅಂದಾಜು ಮಾಡಿದೆ.

ಜಾಗತಿಕ ಆರ್ಥಿಕ ಪ್ರಗತಿಗೆ ನಗರಗಳ ಯಂತ್ರಗಳಾಗಿ ಶೇ.80ರಷ್ಟು ಜಿಡಿಪಿ ಕೊಡುಗೆ ನೀಡುತ್ತಿವೆ. ಆದರೆ ಇದೇ ವೇಳೆ ಈ ನಗರಗಳು ಜಾಗತಿಕವಾಗಿ ಶೇ.75ರಷ್ಟು ಮಾರಕ ಇಂಗಾಲಡೈ ಆಕ್ಸೈಡ್‍ನ್ನು ಹೊರಹೊಮ್ಮಿಸುವ ಎಂಜಿನ್‍ಗಳಾಗಿರುವುದು ವಿಪರ್ಯಾಸ.

ಅಮೇರಿಕನ್ ಲಂಗ್ಸ್ ಅಸೋಸಿಯೇಷನ್ ಪ್ರಕಾರ, ಮಕ್ಕಳು ವಾಯುಮಾಲಿನ್ಯಕ್ಕೆ ಬೇಗ ಗುರಿಯಾಗುತ್ತಾರೆ. ಏಕೆಂದರೆ, ಅವರ ಶ್ವಾಸಕೋಶಗಳು ಬೆಳವಣಿಗೆಯ ಹಂತದಲ್ಲಿರುತ್ತವೆ ಮತ್ತು ವಯಸ್ಕರಿಗಿಂತ ಹೆಚ್ಚು ಸಕ್ರಿಯವಾಗಿರುತ್ತವೆ. ಮಕ್ಕಳು ನೆಲಕ್ಕೆ ಹತ್ತಿರವಾಗಿ ಆಟವಾಡುವುದರಿಂದ ಕಲುಷಿತವಾದ ಗಾಳಿಯನ್ನು ಹೆಚ್ಚು ಸೇವಿಸುತ್ತಾರೆ.

ಇದರಿಂದ ವಾಯುಮಾಲಿನ್ಯ ಸೋಂಕು ಚಿಣ್ಣರಿಗೆ ಸಲೀಸಾಗಿ ಆಕ್ರಮಣ ಮಾಡುತ್ತವೆ. ಹುಟ್ಟಿನಿಂದ ಹಿಡಿದು ಮಗುವಿನ ಬಾಲ್ಯಾವಸ್ಥೆವರೆಗೂ ಶೇ.80ರಷ್ಟು ಮಕ್ಕಳಲ್ಲಿ ಶ್ವಾಸಕೋಶದ ಬೆಳೆವಣಿಗೆಯಾಗುತ್ತಿರುತ್ತದೆ.

ಈ ನಡುವೆ ಮಕ್ಕಳು ದೊಡ್ಡವರ ಪೊೀಷಣೆಯಲ್ಲಿ ಬೆಳೆದಿರುತ್ತಾರೆ. ತದನಂತರದಲ್ಲಿ ಆಟಪಾಠಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ದೊಡ್ಡವರ ಪ್ರತಿರಕ್ಷೆಗಳಿಂದ ದೂರ ಉಳಿಯುತ್ತಾರೆ.

ಇಂಥ ಸಂದರ್ಭದಲ್ಲಿ ಅವರು ತಮ್ಮನ್ನು ತಾವು ವಾತಾವರಣಕ್ಕೆ ತೆರೆದುಕೊಳ್ಳುತ್ತಿದ್ದಂತೆ ಬೇಗ ಕಲುಷಿತ ಗಾಳಿಯ ದುಷ್ಪರಿಣಾಮ ಎದುರಿಸುತ್ತಾರೆ. ಇದರಿಂದ ಶೀತ, ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಶ್ವಾಸಕೋಶ ಸಮಸ್ಯೆ, ನರ ದೌರ್ಬಲ್ಯ ಹಾಗೂ ಮೆದುಳಿನ ನ್ಯೂನ್ಯತೆಗಳಿಂದ ಬಳಲುತ್ತಾರೆ.

# ಸಮಸ್ಯೆಗೆ ಪರಿಹಾರವೇನು?
ಪ್ರಪಂಚದಾದ್ಯಂತ ಅದರಲ್ಲೂ ನಗರಪ್ರದೇಶಗಳಲ್ಲಿ ರಾಸಾಯನಿಕಯುಕ್ತ ಹೊಗೆ ಹೊರಹೊಮ್ಮುವುದನ್ನು ತಡೆಗಟ್ಟುವ ಬಗ್ಗೆ ಸುಧಾರಿತ ಕ್ರಮಗಳನ್ನು ಶೀಘ್ರಗತಿಯಲ್ಲಿ ಕೈಗೊಳ್ಳುವ ಅಗತ್ಯವಿದೆ. ಮನೆಗಳಲ್ಲಿ ಬಳಸುವ ಅಡುಗೆ ಇಂಧನಗಳ ಬಗ್ಗೆ ಹಾಗೂ ಅದರ ಸ್ವಚ್ಚತೆಗಳ ಬಗ್ಗೆ ಅರಿವಿರಬೇಕು.

ಅತಿವೇಗವಾಗಿ ನಗರೀಕರಣಗೊಳ್ಳುತ್ತಿರುವ ಪ್ರದೇಶಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಮಾಲಿನ್ಯವನ್ನು ತಡೆಗಟ್ಟುವ ಅನಿವಾರ್ಯತೆಯೂ ಹಿಂದೆಂದಿಗಿಂತಲೂ ಅತ್ಯಗತ್ಯವಾಗಿದೆ.

ಜಾಗತಿಕ ಜನಸಂಖ್ಯೆಯ ಶೇ.40ರಷ್ಟು ಮಂದಿ ವಾಯು ಮಾಲಿನ್ಯದ ಬಗ್ಗೆ ನಿರ್ಲಕ್ಷ್ಯ ಹೊಂದಿರುವುದು ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ. ಮಾರಕ ವಾಯುಮಾಲಿನ್ಯದ ಬಗ್ಗೆ ಜಾಗೃತರಾಗಿ ಅದನ್ನು ನಿಯಂತ್ರಿಸುವ ಉಪಕ್ರಮ ಮತ್ತು ಅನಿವಾರ್ಯತೆ ನಗರ ಪ್ರದೇಶಗಳಿಗೆ ತೀವ್ರ ಅನಿವಾರ್ಯವಾಗಿದೆ ಎಂಬ ಸಂಗತಿಯನ್ನು ಡಬ್ಲ್ಯೂಹೆಚ್‍ಒ ಪ್ರತಿಪಾದಿಸಿದೆ.

2018ರ ವಿಶ್ವಸಂಸ್ಥೆ ವರದಿ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಮಕ್ಕಳ ಮರಣ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಗಾಳಿಯ ಗುಣಮಟ್ಟ ಕ್ಷೀಣಗೊಂಡು ಕಲುಷಿತವಾಗಿರುವುರಿಂದ ಶಿಶುಗಳು ಮೊದಲ ವರ್ಷದಲ್ಲೇ ಹೆಚ್ಚು ಮರಣಕ್ಕೀಡಾಗುತ್ತಿರುವುದು ನೋವಿನ ಸಂಗತಿ.

ಜಾಗತಿಕ ಮಟ್ಟದಲ್ಲಿ ಸುಮಾರು 10ರಲ್ಲಿ 9 ಮಂದಿ ವಿಷಕಾರಿ ಗಾಳಿಯನ್ನು ಸೇವನೆ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಮಕ್ಕಳು ಅನಾರೋಗ್ಯಕರ ಜೀವನದಲ್ಲೇ ನರಳುತ್ತಾ ಬದುಕಬೇಕಾಗುತ್ತದೆ ಎಂಬ ಗಂಭೀರ ಎಚ್ಚರಿಕೆಯನ್ನು ವಿಶ್ವಸಂಸ್ಥೆ ನೀಡಿದೆ.

ಪುಟ್ಟ ಕಂದಮ್ಮಗಳು ನಲಿಯುತ್ತಾ ಬೆಳೆಯುವ ಬದಲು ಸಮಸ್ಯೆಗಳಿಂದ ಬಳಲುತ್ತಲೇ ಬೆಳೆಯಬೇಕಾಗದ ಪರಿಸ್ಥಿತಿ ಎದುರಾಗಿರುವುದು ದುರದೃಷ್ಟಕರ. ವಿನಾಶಕಾರಿ ವಾಯುಮಾಲಿನ್ಯದ ದುಷ್ಪರಿಣಾಮ, ವಾತಾವರಣದಲ್ಲಿ ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಇಂಗಾಲ- ಇವುಗಳಿಂದ ಮಕ್ಕಳ ಮರಣ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಪರಿಣಾಮಕಾರಿ ಮತ್ತು ಸಕಾಲಿಕ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ತೀವ್ರತರದ ತೊಂದರೆಗಳು ಎದುರಾಗುವುದು ಖಚಿತ.

Facebook Comments