ಮಾಲ್ ಗಳ ಒತ್ತುವರಿ ತೆರವಿಗೆ ಕ್ರಮ : ಆಯುಕ್ತ ಮಂಜುನಾಥ ಪ್ರಸಾದ್

ಈ ಸುದ್ದಿಯನ್ನು ಶೇರ್ ಮಾಡಿ

manju

ಬೆಂಗಳೂರು, ಆ.29-ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್ ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ಪಾಲಿಕೆ ಸಭೆಯಲ್ಲಿಂದು ಭರವಸೆ ನೀಡಿದರು.  ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ರಾಜಕಾಲುವೆ ಒತ್ತುವರಿ ವಿಷಯ ಪ್ರಸ್ತಾಪಿಸಿದಾಗ ಮಾತನಾಡಿದ ಅವರು, ಕೆಲ ಮಾಲ್‌ಗಳು ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿವೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪರಿಶೀಲಿಸಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದರು.  1949ರಲ್ಲಿ ಸಿಟಿ ಕಾರ್ಪೋರೇಷನ್ ನಿರ್ಮಾಣವಾಯಿತು. ಆದರೆ ಕಾಲಕ್ರಮೇಣ ಕೇವಲ 69 ಚದರ ಕಿಲೋ ಮೀಟರ್ ವಿಸ್ತೀರ್ಣವಿದ್ದ ಬೆಂಗಳೂರು ಇದೀಗ 847 ಚ.ಕಿ.ಮೀ.ಗೆ ವಿಸ್ತಾರಗೊಂಡಿದೆ. ಹೀಗಾಗಿ ಹೊಸ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿರುವುದರಿಂದ ಕೆಲ ಸಂಕಷ್ಟಗಳು ಎದುರಾಗುತ್ತಿವೆ ಎಂದು ಅವರು ಹೇಳಿದರು.

ಅದೇ ರೀತಿ ಜನಸಂಖ್ಯೆ ಕೂಡ ಹೆಚ್ಚಳವಾಗುತ್ತಿರುವುದರಿಂದ ಕೆರೆಕುಂಟೆಗಳು ಮಾಯವಾಗಿವೆ. ಹೀಗಾಗಿ ಕೆಲ ಪ್ರದೇಶಗಳಲ್ಲಿ ರಾಜಕಾಲುವೆ ಮತ್ತು ಕೆರೆಗಳು ಒತ್ತುವರಿಯಾಗಿರುವುದರಿಂದ ಮಳೆ ಬಂದಾಗ ಭಾರೀ ಅನಾಹುತಗಳು ಸಂಭವಿಸುತ್ತಿವೆ.  ಭವಿಷ್ಯದಲ್ಲಿ ಇಂತಹ ತೊಂದರೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ ಅಗತ್ಯ ಕ್ರಮಕೈಗೊಂಡಿದೆ. ರಾಜಕಾಲುವೆ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುತ್ತಿದೆ. ಎಂತಹ ಬಲಿಷ್ಠರು ಮಾಡಿಕೊಂಡಿರುವ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಅವರು ಸಭೆಗೆ ಭರವಸೆ ನೀಡಿದರು.

► Follow us on –  Facebook / Twitter  / Google+

Facebook Comments

Sri Raghav

Admin