ಮಾಸ್ತಿಗುಡಿ ಘೋರ ದುರಂತಕ್ಕೆ ಯಾರು ಹೊಣೆ..? : ನಿರ್ಲಕ್ಷಕ್ಕೆ ಸಾಕ್ಷಿಯಾಯಿತೇ ಕ್ಲೈಮ್ಯಾಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

Mastigudi-shoot

ತಿಪ್ಪಗೊಂಡನಹಳ್ಳಿ, ನ.8– ಚಿತ್ರರಂಗಕ್ಕೆ ಕರಾಳ ದಿನ. ಕೇವಲ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಸ್ಯಾಂಡಲ್‍ವುಡ್ ತನ್ನ ಪ್ರಮಾದದಿಂದ ಚಂದನವನದಲ್ಲಿ ಬೆಳೆಯುತ್ತಿದ್ದ ಇಬ್ಬರು ನಟರ ಜೀವವನ್ನು ಕಳೆದಿದೆ. ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಸಾಹಸಮಯ ದೃಶ್ಯ ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಖಳನಟರ ಪಾತ್ರ ನಿರ್ವಹಿಸುತ್ತಿದ್ದ ಉದಯ್ ಮತ್ತು ಅನಿಲ್ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೆಲಿಕಾಪ್ಟರ್‍ನಿಂದ ಬಿದ್ದು ಸಾವನ್ನಪ್ಪಿರುವ ದುರಂತ ಇಡೀ ಸ್ಯಾಂಡಲ್‍ವುಡ್‍ಅನ್ನು ತಲ್ಲಣಗೊಳಿಸಿದೆ.

ಸಣ್ಣ ಎಚ್ಚರಿಕೆ ಕ್ರಮವನ್ನು ಅನುಸರಿಸಿದ್ದರೆ ಈ ಎರಡೂ ಜೀವಗಳು ಉಳಿಯುತ್ತಿದ್ದವು. ಉದಯೋನ್ಮುಖ ನಟರು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರು. ಆದರೆ, ಚಿತ್ರತಂಡ ಮಾಡಿದ ಅದ್ವಾನ, ಸ್ಟಂಟ್ ಡೈರೆಕ್ಟರ್, ನಿರ್ದೇಶಕರು ಕೈಗೊಳ್ಳದ ಮುನ್ನೆಚ್ಚರಿಕೆ ಕ್ರಮದಿಂದ ಈ ಬಡ ಕಲಾವಿದರ ಬದುಕು ಬರ್ಬಾದ್ ಆಯಿತು.  ನೋಡನೋಡುತ್ತಿದ್ದಂತೆ ಈ ಇಬ್ಬರು ದಾರುಣವಾಗಿ ಸಾವನ್ನಪ್ಪಿದರು. ಸಾವಿಗೂ ಮುಂಚೆ ಈ ಚಿತ್ರತಂಡದ ನಿರ್ದೇಶಕರು ಈಜುಬಾರದ ಈ ಇಬ್ಬರನ್ನು ಹುರಿದುಂಬಿಸಿದ ರೀತಿ ಸಾವಿಗೆ ಪ್ರೇರಣೆ ನೀಡುವಂತಿತ್ತು. ಅದೇನ್ ಮಹಾ ಕೇವಲ 40 ಅಡಿ ಎತ್ತರದಿಂದ ಜಿಗಿಯುವುದು ಅಷ್ಟೇ. ಬಾಲಿವುಡ್, ಹಾಲಿವುಡ್‍ನಲ್ಲಿ ಸಾಹಸಗಳನ್ನು ಡಬ್ಬಿಂಗ್ ಮಾಡುತ್ತಾರೆ. ಆದರೆ, ನಾವು ನೈಜವಾಗಿ ಸಾಹಸಗಳನ್ನು ಮಾಡೋಣ ಎಂದು ಈ ಕಲಾವಿದರನ್ನು ಹುರಿದುಂಬಿಸಿದ್ದರು.

40 ಅಡಿ ಎತ್ತರದಿಂದ ಜಿಗಿಯುವುದು ಅಷ್ಟೆ ಎಂದು ಅರಿತ ಇವರು ಹೇಗಾದರೂ ಮಾಡಿ ಈ ಒಂದು ದೃಶ್ಯವನ್ನು ಮುಗಿಸಿದರೆ ಸಾಕು ಎಂದು ಮಾನಸಿಕವಾಗಿ ಸಿದ್ಧರಾಗಿದ್ದರು. ಆದರೆ, ಹೆಲಿಕಾಪ್ಟರ್ 100 ಅಡಿ ಎತ್ತರಕ್ಕೆ ಹೋಗಿ ಅಲ್ಲಿಂದ ಜಿಗಿದಾಗ ಇವರಲ್ಲಿ ಭಯ ಉಂಟಾಗಿದೆ. ಈ ಭಯವೇ ಇವರ ಸಾವಿಗೆ ಕಾರಣವಾಗಿದೆ ಎಂದು ಊಹಿಸಲಾಗಿದೆ.
ಇದಲ್ಲದೆ, ನೀರಿಗೆ ಬಿದ್ದಾಗ ಕನಿಷ್ಟ ಎಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಚಿತ್ರತಂಡ ಕೈಗೊಂಡಿಲ್ಲ. ಸಾಹಸ ನಿರ್ದೇಶಕ ರವಿವರ್ಮ ಅವರು ಬಾಲಿವುಡ್‍ನ ಸಲ್ಮಾನ್‍ಖಾನ್‍ರಂತಹ ನಾಯಕರ ಚಿತ್ರಗಳಿಗೆ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ. ಅವರು ಕನ್ನಡ ಚಿತ್ರಗಳನ್ನು ನಿರ್ದೇಶಿಸುವಾಗ ಅದರಲ್ಲೂ ಉದಯೋನ್ಮುಖ ನಟರ ಚಿತ್ರಗಳನ್ನು ನಿರ್ದೇಶಿಸುವಾಗ ಕನಿಷ್ಟ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಎರಡು ಜೀವಗಳನ್ನು ನಿರಾಯಾಸವಾಗಿ ಬಲಿ ಕೊಡಬೇಕಾಯಿತು.
Mastigudi-03

ಈ ಹೆಲಿಕಾಪ್ಟರ್ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನ ಒಡೆತನದ್ದು. ಅಷ್ಟು ಎತ್ತರದಿಂದ ಹಾರುವಾಗ ಹೆಲಿಕಾಪ್ಟರ್ ಮೂಲಕ ಸಾಹಸ ಚಿತ್ರೀಕರಣ ಮಾಡುವಾಗ ಹೆಲಿಕಾಪ್ಟರ್‍ನಲ್ಲೂ ಕೂಡ ಕನಿಷ್ಟ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆದರೆ, ಇದಾವುದನ್ನೂ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಅನಿಲ್ ಮತ್ತು ಉದಯ್ ಪ್ರಾಣಕ್ಕೆ ಮಾಸ್ತಿಗುಡಿ ಸಿನಿಮಾ ಶೂಟಿಂಗ್ ಕುತ್ತಾಯಿತು. ಅಣ್ಣ ಅಣ್ಣ ಎಂದು ದುನಿಯಾ ವಿಜಿಯನ್ನು ಕರೆಯುತ್ತಿದ್ದು, ಅವರ ಹಿಂದೆ ಮುಂದೆ ಸುತ್ತುತ್ತಿದ್ದ, ಸದಾ ಶೂಟಿಂಗ್ ಶೂಟಿಂಗ್ ಎಂದು ಮನೆಯನ್ನೇ ಬಿಟ್ಟು ಬ್ಯುಜಿಯಾಗಿರುತ್ತಿದ್ದ ಈ ಇಬ್ಬರು ಪ್ರಾಣ ತೆತ್ತಿರುವುದಕ್ಕೆ ಹೊಣೆ ಯಾರು..?

ಅನಿಲ್ ಮತ್ತು ಉದಯ್ ದುನಿಯಾ ವಿಜಿಗೆ ಸದಾ ಬೆನ್ನೆಲುಬಾಗಿದ್ದರು. ಅವರ ಯಾವುದೇ ಚಿತ್ರಕ್ಕೆ ಎಡಗೈ, ಬಲಗೈನಂತೆ ಇರುತ್ತಿದ್ದರು. ಚಿತ್ರಕ್ಕಾಗಿ, ಸಿನಿಮಾಕ್ಕಾಗಿ ಈ ಬಡ ಹುಡುಗರು ತಮ್ಮ ಬಾಡಿಯನ್ನು ಹಗಲಿರುಳು ದಂಡಿಸಿ ಬಿಲ್ಡಪ್ ಮಾಡಿಕೊಂಡಿದ್ದರು. ಪಾಪ… ವಿಧಿ ಅವರ ಜೀವನದಲ್ಲಿ ಈ ರೀತಿಯ ಆಟ ಆಡಿತು.  ಕನ್ನಡದ ಈ ಹುಡುಗರ ಸಾಹಸಮಯ ದೃಶ್ಯದ ಚಿತ್ರೀಕರಣ ಸನ್ನಿವೇಶಕ್ಕೆ ಕನ್ನಡದ ಸಾಹಸ ನಿರ್ದೇಶಕ ಕನಿಷ್ಟ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಅವರ ಪ್ರಾಣವನ್ನೇ ಕಳೆದುಬಿಟ್ಟ ಎಂಬ ಕೂಗು ತಿಪ್ಪಗೊಂಡನಹಳ್ಳಿ ಕೆರೆಯ ಸುತ್ತ ಕೇಳಿಬರುತ್ತಿತ್ತು.
ಅವರು ಶೂಟಿಂಗ್‍ಗೆ ತೆರಳುವ ಮುನ್ನ ಈ ನಿರ್ದೇಶಕ ಕೂಡ ಇದೇ ಮಾತನ್ನು ಹೇಳಿದ್ದರು. ಇದು ಪ್ರಾಣವನ್ನು ಪಣಕ್ಕಿಟ್ಟು ಮಾಡುತ್ತಿರುವ ಸನ್ನಿವೇಶ. ನಾವು ಸಾಯುವುದು ಮುಖ್ಯವಲ್ಲ, ಸಾಯಬೇಕಾದರೂ ಸಾಹಸದಿಂದ ಸಾಯಬೇಕು ಎಂದು ಟಿವಿ ವಾಹಿನಿಗೆ ಸಂದರ್ಶನವನ್ನು ರವಿವರ್ಮ ನೀಡಿದ್ದರು. ಈ ಅಂತ್ಯ ಹೀಗಾಗುತ್ತದೆ ಎಂದು ಅವರು ಕೂಡ ಅಂದುಕೊಂಡಿರಲಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin