ಮಾಸ್ತಿಗುಡಿ ದುರಂತ ಚಿತ್ರರಂಗಕ್ಕೆ ಎಚ್ಚರಿಕೆ ಗಂಟೆ ಎಂದ ಶಿವರಾಜ್ಕುಮಾರ್
ತಿಪ್ಪಗೊಂಡನಹಳ್ಳಿ, ನ.8- ಈ ಘೋರ ದುರಂತ ಇಡೀ ಕನ್ನಡ ಚಿತ್ರರಂಗಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ನಟಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸದಿದ್ದರೆ ಏನೆಲ್ಲ ದುರ್ಘಟನೆ ಸಂಭವಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮಾಸ್ತಿಗುಡಿ ದುರಂತದ ಬಗ್ಗೆ ಹೀಗೆ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ ಸ್ಯಾಂಡಲ್ವುಡ್ ಹಿರಿಯ ನಟ ಶಿವರಾಜ್ಕುಮಾರ್.
ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್ನಿಂದ ಕೆರೆಗೆ ಹಾರುವ ಸಾಹಸ ಸನ್ನಿವೇಶದಲ್ಲಿ ಅನಿಲ್ ಮತ್ತು ಉದಯ್ ಸಾವಿಗೀಡಾದ ದುರಂತದ ಬಗ್ಗೆ ಶಿವಣ್ಣ ವಿಷಾದದಿಂದ ಪ್ರತಿಕ್ರಿಯಿಸಿದ್ದಾರೆ.
ಇಂದು ಬೆಳಗ್ಗೆ ತಿಪ್ಪಗೊಂಡನಹಳ್ಳಿಗೆ ಭೇಟಿ ನೀಡಿ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ದುರಂತ ಕನ್ನಡ ಚಿತ್ರರಂಗಕ್ಕೆ ವಾರ್ನಿಂಗ್ ಆಗಿದೆ. ಮುಂದಾದರೂ ಸಾಹಸ ಸನ್ನಿವೇಶಗಳ ಶೂಟಿಂಗ್ನಲ್ಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು. ಮನುಷ್ಯನ ಜೀವ-ಜೀವನ ಒಂದು ಗಿಫ್ಟ್. ಆದರೆ, ಎರಡು ಗಿಫ್ಟ್ಗಳನ್ನು ಈ ದುರಂತದಲ್ಲಿ ನಾವು ಕಳೆದುಕೊಂಡಿದ್ದೇವೆ. ಇದಕ್ಕಾಗಿ ಯಾರನ್ನೂ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ದುರಂತ ಸಂಭವಿಸಿ ಆಗಿದೆ. ಮುಂದಾದರೂ ಎಚ್ಚರಿಕೆ ವಹಿಸಬೇಕು ಎಂದು ಅವರು ಕನ್ನಡ ಚಿತ್ರೋದ್ಯಮಕ್ಕೆ ಮನವಿ ಮಾಡಿದರು.
ನಾನು ಕೂಡ ಸಮುದ್ರಕ್ಕೆ ಮೇಲಿನಿಂದ ಹಾರುವ ಸಾಹಸ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಇಂಥ ಸನ್ನಿವೇಶಗಳಲ್ಲಿ ಎಚ್ಚರಿಕೆ ಮತ್ತು ಜಾಗ್ರತೆಯಿಂದ ಇರಬೇಕು ಎಂದು ಸಾಹಸ ಕಲಾವಿದರಿಗೆ ಕಿವಿಮಾತು ಹೇಳಿದರು. ಶಿವರಾಜ್ಕುಮಾರ್ ಅವರೊಂದಿಗೆ ನೆನಪಿರಲಿ ಪ್ರೇಮ್ ಸಹ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
► Follow us on – Facebook / Twitter / Google+