ಮಾಹಿತಿ ತಂತ್ರಜ್ಞಾನದ ಸಂಗ, ಸಮಾಜದ ಸ್ವಾಸ್ಥ್ಯ-ನೆಮ್ಮದಿಗೆ ಭಂಗ

ಈ ಸುದ್ದಿಯನ್ನು ಶೇರ್ ಮಾಡಿ

Tecnology--01

– ಮಹೇಶ್‍ಗೌಡ, ಯಲಹಂಕ

ಆಧುನಿಕತೆ ಎಲ್ಲೆಡೆ ಶರವೇಗದಲ್ಲಿ ಬೆಳೆಯುತ್ತಿದೆ ಎಲ್ಲವನ್ನೂ ಹಿಡಿ ಮುಷ್ಟಿಗಳಲ್ಲಿ ಸಾಧಿಸಿದ್ದೇವೆ. ಕಾಣದ ದೇವರನ್ನೂ ಬಿಡಲಿಲ್ಲ ನಾವುಗಳು. ಅವನಿಗೊಂದು ರೂಪ ನೀಡಿ ಅದಕ್ಕೊಂದು ಹೆಸರಿಟ್ಟು ಸಂಬಂಧಗಳಿಗೂ ಬೆಲೆ ಕಟ್ಟುವ ಮಟ್ಟಕ್ಕೆ ಇಂದು ನಾವು ಆಧುನೀಕರಣ, ಮಾಹಿತಿ-ತಂತ್ರಜ್ಞಾನದಲ್ಲಿ ಸಾಧನೆ ಮಾಡಿದ್ದಾಗಿದೆ.  ದೇವರನ್ನು ಕೃತಕವಾಗಿ ಸೃಷ್ಠಿಸಿದ್ದೇವೆ, ತಂತ್ರಜ್ಞಾನದ ಮೂಲಕ ಬಗ್ಗು ಬಡಿಯ ತೊಡಗಿದ್ದೇವೆ ಈ ಮಟ್ಟಕ್ಕೆ ನಾವು ಬೆಳೆದಿದ್ದೇವೆ ಎಂದರೆ ಸಾಮಾನ್ಯವೇ… ಇದು ಪೀಠಿಕೆಯಷ್ಟೆ. ಇದನ್ನು ನಾವೇ ಸೃಷ್ಟಿಸಿದ್ದು ಅಂದರೆ ಹಿಂದಿನ ಕಾಲದಿಂದಲೂ ಎಡ ಪಂಕ್ತಿ ಮತ್ತು ಬಲ ಪಂಕ್ತಿಗಳು ಇದ್ದೇ ಇವೆ. ಕಾಯಕ ಯೋಗಿ ಬಸವಣ್ಣ ಸಹ ಇದನ್ನೆ ಸಾರಿದ್ದು. ದೇವರಿಲ್ಲ ನಿಮ್ಮ ಸಾಧನೆಯೇ ನಿಮ್ಮ ಬಲ, ದುಡಿದಷ್ಟೇ ಫಲ ಎಂದು ಋಷಿ ಮುನಿಗಳು ಸರ್ವಜ್ಞಾದಿಗಳು ಸಾರಿದ್ದೂ ಇದನ್ನೆ. ಅದನ್ನು ನಾವು ಶಿರಸಾ ವಹಿಸಿ ಪಾಲಿಸುತ್ತಿದ್ದೇವೆ.

ಅವರು ತೋರಿಸಿದ ಮಾರ್ಗದಲ್ಲೆ ನಾವು ನಡೆಯುತ್ತಿದ್ದೇವೆ, ಕೃಷ್ಣ ಬೆಣ್ಣೆ ಕದ್ದ ಅವರಿಗೆ ಅವಶ್ಯಕತೆ ಇದ್ದ ವಸ್ತುಗಳನ್ನ ಅವರು ಕದಿಯಬಹುದಾದರೆ, ನಾವು ನಮಗೆ ಅವಶ್ಯಕತೆ ಇರುವುದನ್ನ ಮಾತ್ರ ನಾವು ಕದಿಯುತ್ತಿದ್ದೇವೆ. ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಹಿರಿಯರು ಹೇಳುತ್ತಿದ್ದಾರೆ ಆದರೆ ಅದನ್ನು ಕಂಡು ಹಿಡಿದವರೂ ಹಿರಿಯರೇ ತಾನೆ ನಾವೇನು ಹೊಸ ಅನ್ವೇಷಣೆ ಮಾಡಿ ಭೂಮಿಗೆ ತಂದದ್ದಲ್ಲ. ಮದ್ಯಪಾನ ನಾವೇನು ಭೂ ಗರ್ಭದಿಂದ ಅಗೆದು ತೆಗೆದದ್ದೇನಲ್ಲ, ಕೊಂದು ತಿನ್ನುವ ನೀತಿ, ಮೋಸ ಮಾಡುವುದು, ಆಸೆ ಸೇರಿದಂತೆ ಎಲ್ಲವನ್ನೂ ನಾವು ಕಲಿತದ್ದಲ್ಲವೆ. ಹಾಗಿದ್ದಲ್ಲಿ ದೂಷಣೆ ಮಾಡುವುದು ಯಾರನ್ನ ಎಂಬ ಬಹು ದೊಡ್ಡ ಗಂಭೀರ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.

ಇದೇ ವಿಚಾರವಾಗಿ ನಾವಿಂದು ಮಾಹಿತಿ ಪಡೆಯಬಹುದಾದ ತಂತ್ರಜ್ಞಾನಕ್ಕೆ ಮೊರೆ ಹೋಗುತ್ತಿದ್ದು, ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿದಷ್ಟು ಮಾಹಿತಿಯನ್ನೆ ಮರೆತು ನಮ್ಮನ್ನು ನಾವು ಸಾವಿನ ಅಂಚಿಗೆ ತಂದೊಡ್ಡಿಕೊಂಡಿದೆ ಎಂದರೆ ಜಗತ್ತಿನ ಬಹುದೊಡ್ಡ ದುರಂತವೇ ಸರಿ.  ನಾವು ಮಾಡುತ್ತಿರುವ ಅನ್ವೇಷಣೆಗಳು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿವೆ ಎಂದ ಕನಿಷ್ಠ ಮಾಹಿತಿಯೂ ಇಲ್ಲದೆ ನಾವು ನಮ್ಮ ಜೀವನದ ಜೊತೆ ಮುಂದಿನ ಪೀಳಿಗೆಯನ್ನೂ ಹಾಳು ಮಾಡುತ್ತಿದ್ದೇವೆ. ಒಂದಾನೊಂದು ಕಾಲದಲ್ಲಿ ಅನ್ವೇಷಣೆಗಳಾದ ಬೆರಳೆಣಿಕೆಯಷ್ಟು ಉಪಯುಕ್ತ ಮಾಹಿತಿ ಬಿಟ್ಟರೆ ಮಾಡಿದ ಎಲ್ಲಾ ದುರಂತಗಳಿಗೆ ಇಂದು ನಮ್ಮ ಸಂತತಿ ತನ್ನನ್ನು ತಾನು ಬಲಿ ಕೊಡುವಂತಾಗಿದೆ.

ಮಾಹಿತಿ ತಂತ್ರಜ್ಞಾನದ ಮುಂದೆ ಜೀವನ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬುದು ನಮಗೆ ಅರಿವಿಲ್ಲದಂತಾಗಿದೆ. ಇದೀಗ ಶಾಲಾ ದಿನಗಳಲ್ಲೇ ಮಕ್ಕಳಿಗೆ ಗಾಂಜಾ ಎಂದರೇನು, ಇದರ ಉಪಯೋಗಗಳೇನು, ಇದರಿಂದಾಗಬಹುದಾದ ಅನುಕೂಲಗಳೇನು ಎಂಬುದರ ಬಗ್ಗೆ ಮಾಹಿತಿ ನೀಡುತ್ತಿದೆ ತಂತ್ರಜ್ಞಾನ.
ಮಾಹಿತಿ ತಂತ್ರಜ್ಞಾನದ ವಿಷಯದಲ್ಲಿ ಜಗತ್ತು ಅತಿ ವೇಗವಾಗಿ ಬೆಳೆಯುತ್ತಿದೆ. ಅದನ್ನು ಸದುಪಯೋಗ ಮಾಡಿಕೊಂಡು ಜೀವನದ ದಾರಿ ಕಂಡುಕೊಳ್ಳುವುದರ ಜೊತೆಗೆ ಮುಂದಿನ ಪೀಳಿಗೆಗೆ ಅದರ ಆಗುಹೋಗುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವ ಅವಶ್ಯಕತೆ ಹೆಚ್ಚಾಗಿದೆ.

ಮಾಹಿತಿ ತಂತ್ರಜ್ಞಾನದಿಂದ ಆಗಬಹುದಾದ ಅನುಕೂಲಗಳಿಗಿಂತ ಸದ್ಯದ ಪರಿಸ್ಥಿತಿಯಲ್ಲಿ ಅನಾನುಕೂಲಗಳೇ ಅತಿ ಹೆಚ್ಚು ಎನ್ನುವಂತಾಗಿದೆ. ಕಳೆದ ಕೆಲ ದಶಕಗಳ ಹಿಂದೆ ಮಕ್ಕಳು ಆಟವಾಡಿ ಮನೆಗೆ ಹಿಂದಿರುಗಿ ಪುಸ್ತಕ, ಕವನ, ಕಥೆ ಸಾಹಿತ್ಯಗಳಲ್ಲಿ ತೊಡಗುತ್ತಿದ್ದರು. ಆದರೆ ಈಗ ಆಧುನಿಕ ಜಗತ್ತಿನ ಅತಂತ್ರ ಜ್ಞಾನದಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಟಿವಿ ರೇಡಿಯೇಷನ್, ದೂರವಾಣಿ ರೇಡಿಯೇಷನ್ ಸೆರಿದಂತೆ ಕಂಪ್ಯೂಟರ್ ಸಹ ಮಾರಕ ಎಂದು ತಿಳಿದಿದ್ದರೂ ನಾವೇ ಸ್ವತಃ ಮೊಬೈಲ್, ಕಂಪ್ಯೂಟರ್‍ಗಳಂತಹ ಸಲಕರಣೆಗಳಿಗೆ ಒರೆ ಹಚ್ಚುತ್ತಿರುವುದು ಆಘಾತಕಾರಿ ಸಂಗತಿ.

ಅತ್ಯಾಧುನಿಕ ತಂತ್ರಜ್ಞಾನಗಳು ನಾವು ಮಾಡಿದ ಅನ್ವೇಷಣೆ ಇವೇ ನಮ್ಮ ಅವನತಿಯ ಹಾದಿಗೆ ನಾಂದಿ ಹಾಡತೊಡಗಿವೆ ಎಂದು ತಿಳಿದಿದ್ದರೂ ನಾವು ಸಾವಿನ ದಾರಿಯಲ್ಲಿ ನಾವು ಇಷ್ಟು ದೂರ ಸಾಗಿಬಂದಿದ್ದೇವೆ ಎಂದು ತಿಳಿದಿದ್ದರೂ ನಮ್ಮ ಮುಂದಿನ ಪೀಳಿಗೆಗಳನ್ನೂ ಅದೇ ದಾರಿಗೆ ದೂಡಿ ಕೇವಲ 22-28 ವರ್ಷದ ಯುವಕ ಯುವತಿಯರ ಎದೆ ಬಡಿತವನ್ನೇ ನಿಲ್ಲಿಸುವ ಮಟ್ಟಕ್ಕೆ ತಂತ್ರಜ್ಞಾನ ನಮ್ಮನ್ನ ಸಾವಿನ ಸುಳಿಗೆ ತಂದು ನಿಲ್ಲಿಸಿದೆ ಎಂದರೆ ನಮ್ಮ ಜೀವನ ಎಷ್ಟು ದುಸ್ತರವಾಗಿರಬೇಕು ಹಾಗೂ ನಾವು ಎಂಥ ಸುಳಿಯಲ್ಲಿ ಸಿಲುಕಿಕೊಂಡಿದ್ದೇವೆ ಎಂದು ತಿಳಿದುಕೊಳ್ಳಬೇಕು. 130 ಕೋಟಿ ಜನ ಸಂಖ್ಯೆಯುಳ್ಳ ದೇಶದ ಸುಮಾರು ಶೇ.40ರಷ್ಟು ಯುವಕರೇ ತುಂಬಿರುವ ನಾಡಿನಲ್ಲಿ ಓದು ಬರಹ ತಿಳಿಯದ ವ್ಯಕ್ತಿಯೊಬ್ಬ ತನ್ನ ಮೊಬೈಲ್‍ನಲ್ಲಿ 1ಜಿಬಿ ಇಂಟರ್ ನೆಟ್ ಖಾಲಿ ಮಾಡುವ ಮಟ್ಟಕ್ಕೆ ಬುದ್ದಿವಂತನಾಗಿದ್ದಾನೆ, ತಂತ್ರಜ್ಞಾನ ಎಂಬುದು ಅವನನ್ನು ಈ ಮಟ್ಟದ ಸಾಧಕನನ್ನಾಗಿಸಿದೆ ಎಂದರ್ಥ ಅಲ್ಲ, ತಂತ್ರಜ್ಞಾನದ ಬಗ್ಗೆ ಮಾಹಿತಿ ಇಲ್ಲದೆ ಇಂದಿನ ಸುಖಕ್ಕಾಗಿ ಅಥವಾ ಸಮಯ ಹರಣಕ್ಕಾಗಿ ಅವನು ತನ್ನ ಜೀವವನ್ನೆ ಬಲಿ ಕೊಡಲಾರಂಬಿಸುವಷ್ಟು ಆವರಿಸಿಕೊಂಡಿದೆ ತಂತ್ರ ಜ್ಞಾನ ಎಂದರೆ ಮನುಷ್ಯ ಇನ್ನಾವ ಮಟ್ಟಕ್ಕೆ ಹಾಳಾಗಿದ್ದಾನೆ ಎಂಬುದನ್ನ ನಾವು ಇಲ್ಲಿ ಅರಿತುಕೊಳ್ಳಬೇಕಿದೆ.

ಹದಿ ಹರೆಯದ ಯುವಕ-ಯುವತಿಯರ ಕೈಗಳಲ್ಲಿ ದೂರವಾಣಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಮೊಬೈಲ್ ಸೇರಿದಂತೆ ಪ್ರತಿಯೊಂದಕ್ಕೂ ಮೊಬೈಲ್ ಬಳಕೆ ಈ ಮಟ್ಟಕ್ಕೆ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಬಹುದೆಂಬ ಕನಿಷ್ಠ ಕಾಳಜಿಯೂ ಇಲ್ಲದಂತಾಗಿರುವುದು ದುರದೃಷ್ಟಕರ. ಎಲ್ಲವನ್ನೂ ನೀಡಿ ಅವರನ್ನು ಸ್ವೇಚ್ಛಾಚಾರಕ್ಕೆ ನಾವೇ ಬುನಾದಿ ಹಾಕಿ ಕೊಡುತ್ತಿದ್ದು, ನಮ್ಮ ವರ್ತನೆಗಳು ನಮ್ಮ ಮುಂದಿನ ಪೀಳಿಗೆಯ ಅವನತಿಗೆ ಕಾರಣ ಎಂದು ಅರಿತು ಕೊಳ್ಳುವಷ್ಟರಲ್ಲಿ ಮನುಷ್ಯನೇ ಅವನತಿ ಆಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ.  ನಮ್ಮ ದೇಶದ ಅತ್ಯಾಧುನಿಕ ಪೋಷಕರಲ್ಲಿ ಇಂದು ಆಗಿರುವ ತಪ್ಪುಗಳನ್ನು ತಿದ್ದುವ ಯೋಚನೆಗಳು ಮಾಡಬೇಕಿದೆ. ಮಕ್ಕಳಿಂದ ನುಳುಚಿ ಕೊಳ್ಳುವ ನೆಪದಲ್ಲಿ ಮನೆಗೆ ಬಂದ ತಕ್ಷಣ ಮೊಬೈಲ್ ನೀಡಿ ಎಸ್ಕೇಪ್ ಆಗುವ ಬದಲು ಸ್ವಲ್ಪ ಸಮಯ ಕಳೆದರೆ ಅವರ ಮನಸ್ಸಿನಲ್ಲೂ ಕೆಟ್ಟ ಆಲೋಚನೆ ತಡೆಯಬಹುದು.

ದಶಕಗಳ ಹಿಂದೆ ತಾತ-ಮುತ್ತಾತಂದಿರು ತಮ್ಮ ಮಕ್ಕಳಿಗೆ ಕಾಗಕ್ಕ-ಗುಬ್ಬಕ್ಕನ ಕತೆ ಹೇಳಿ ಮಲಗಿಸುತ್ತಿದ್ದರು, ಊಟ ಮಾಡಿಸುತ್ತಿದ್ದರು, ನೀತಿ ಕತೆಗಳನ್ನು ಹೇಳಿ ಮಕ್ಕಳಿಗೆ ಸತ್ಯ ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುತ್ತಿದ್ದರು.  ಇಂದಿನ ಆಧುನಿಕ ಭರಾಟೆಯಲ್ಲಿ ಅಜ್ಜಿ-ತಾತ ಇಲ್ಲ ಅಪ್ಪ-ಅಮ್ಮ ಇದ್ದೂ ಇಲ್ಲ ಕಥೆ ಕವನಗಳಿಲ್ಲ, ಮನೆ ಊಟ ಸಹ ಇಲ್ಲ, ಮಾರ್ಗ ದರ್ಶಕರಿಲ್ಲ ದಂತಾಗಿದೆ. ಯುವ ಪೀಳಿಗೆ ದೂರವಾಗಿ ಅತಂತ್ರ ಜ್ಞಾನದಿಂದ ಬುದ್ಧಿಹೀನರಾಗಿ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡು ತಾವು ದುರ್ಬಳಕೆ ಆಗುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಗೂ ನೆಮ್ಮದಿ ಹಾಳು ಮಾಡಿ ಸುಖಪಡುವಂತಾಗಿದ್ದಾನೆ. ತಾನೂ ಸುಖವಾಗಿರಲಾರ ಬೇರೆಯವರನ್ನೂ ಸುಖವಾಗಿರಲು ಬಿಡಲಾರ.   ಆದ್ದರಿಂದ ಕೇವಲ ಮಾಹಿತಿಯೇ ಇಲ್ಲದ ತತ್ರಜ್ಞಾನದ ಬಳಕೆಯಿಂದಾಗಿ ಭೂಮಿಯನ್ನು ಅವನತಿಗೆ ತಂದೊಡ್ಡುವುದು ಬಿಟ್ಟು, ತಪ್ಪನ್ನು ಅರಿತು ಮುನ್ನಡೆಯುವ ಮೂಲಕ ಮಾಹಿತಿ ತಂತ್ರಜ್ಞಾನ ಸದ್ಬಳಕೆಯಾಗಲಿ ಎಂಬುದೇ ನಮ್ಮ ಆಶಯ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin