ಮಾ.30ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ಈ ಸುದ್ದಿಯನ್ನು ಶೇರ್ ಮಾಡಿ

Lorry-Strike

ಬೆಂಗಳೂರು,ಮಾ.18-ಮೂರನೇ ವ್ಯಕ್ತಿ ವಿಮೆ(ಥರ್ಡ್ ಪಾರ್ಟಿ ಇನ್ಸುರೆನ್ಸ್) ಪ್ರೀಮಿಯಮ್ ದರ ದುಪ್ಪಟ್ಟು , 15 ವರ್ಷಗಳ ಹಳೆಯ ವಾಹನಗಳನ್ನು ಸ್ಥಗಿತಗೊಳಿಸುವುದು, ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ವಿಧಿಸಲು ಮುಂದಾಗಿರುವ ಕ್ರಮ ಸೇರಿದಂತೆ ಇನ್ನಿತರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆಗಳನ್ನು ಖಂಡಿಸಿ, ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.30ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಕೈಗೊಳ್ಳಲು ನಿರ್ಧರಿಸಲಾಗಿದೆ.
ಈ ಕುರಿತು ಈ ಸಂಜೆಯೊಂದಿಗೆ ಮಾತನಾಡಿದ ಲಾರಿ ಚಾಲಕರ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಂ, ಕೇಂದ್ರ ಸರ್ಕಾರ ಥರ್ಡ್ ಪಾರ್ಟಿ ಇನ್ಸುರೆನ್ಸ್ ಪ್ರೀಮಿಯಮ್ ಮೊತ್ತವನ್ನು 22 ಸಾವಿರದಿಂದ 50 ಸಾವಿರ ರೂ.ಗಳಿಗೆ ಏಕಾಏಕಿ ಏರಿಸಿರುವ ಕ್ರಮ ಖಂಡನೀಯ ಎಂದರು.

ದೇಶದಲ್ಲಿ ಲಾರಿ, ಟ್ಯಾಕ್ಸಿ , ಟೆಂಪೋ, ಗೂಡ್ಸ್ ಗಾಡಿಗಳು ಸೇರಿದಂತೆ 1.95 ಕೋಟಿ ವಾಣಿಜ್ಯ ವಾಹನಗಳಿವೆ. ಏಕಾಏಕಿ ಈ ವಾಹನಗಳಿಗೆ ವಿಮಾ ಪ್ರೀಮಿಯಮ್ ದರವನ್ನು ದುಪ್ಪಟ್ಟುಗೊಳಿಸಿರುವ ಕ್ರಮ ಜಾರಿಯಾಗುತ್ತಿರುವುದರಿಂದ ಲಾರಿ ಮಾಲೀಕರಿಗೆ ತುಂಬಾ ಹೊರೆಯಾಗಲಿದೆ. ಸಾಲ ಮಾಡಿಕೊಂಡು ವಾಹನ ಖರೀದಿ ಮಾಡಿದವರು ಬರೀ ವಿಮಾ ಪ್ರೀಮಿಯಮ್ ಕಟ್ಟಬೇಕಾಗಿದೆ ಎಂದು ವಿಷಾದಿಂದ ನುಡಿದರು.   ಈ ಕ್ರಮವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು. ಖಾಸಗಿ ವಿಮಾ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಗಂಭೀರ ಆರೋಪ ಮಾಡಿದರು. ನಮ್ಮ ರಾಜ್ಯದಲ್ಲಿ 22 ಲಕ್ಷ ವಾಹನಗಳಿಗೆ ಈ ಕ್ರಮ ಜಾರಿಯಾದರೆ ಬರೋಬ್ಬರಿ 6 ಸಾವಿರ ಕೋಟಿ ಪ್ರೀಮಿಯಮ್ ಹಣ ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

ಸಾರಿಗೆ ಬಸ್‍ಗಳಲ್ಲಿ ರೈಲು, ವಿಮಾನ ಅಪಘಾತಗಳಲ್ಲಿ ಮಡಿದವರಿಗೆ ನಿಗದಿತ ಮೊತ್ತ ದೊರೆಯುತ್ತದೆ. ಆದರೆ ಲಾರಿ ಅಪಘಾತದಲ್ಲಿ ಮಡಿದವರಿಗೆ 50 ಲಕ್ಷ ಒಂದು ಕೋಟಿವರೆಗೂ ಪರಿಹಾರ ಕೊಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳವರು ನಷ್ಟವಾಗುತ್ತದೆ ಎಂದು ಹೇಳಿ ಥರ್ಡ್ ಪಾರ್ಟಿ ಇನ್ಸುರೆನ್ಸ್ ಪ್ರೀಮಿಯಮ್‍ನ್ನು ದುಪ್ಪಟ್ಟು ಮಾಡಿದ್ದಾರೆ ಎಂದು ಆರೋಪಿಸಿದರು.   15 ವರ್ಷಗಳ ಹಳೆಯ ವಾಹನಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದರಿಂದ ಈ ವಾಹನಗಳನ್ನು ನಂಬಿದವರ ಜೀವನ ಬರ್ಬಾದ್ ಆಗುತ್ತದೆ. ಎಂಜಿನ್‍ಗಳನ್ನು ಸುಸ್ಥಿರಗೊಳಿಸಿ ವಾಹನಗಳನ್ನು ಓಡಿಸಲು ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ವಾಹನಗಳನ್ನು ಸ್ಕ್ರಾಪ್ ಮಾಡಲು ಮುಂದಾದರೆ ನಂಬಿದವರ ಗತಿಯೇನು, ಟಾಟಾ ಮಹೇಂದ್ರ ಕಂಪನಿಗಳ ಜೊತೆ ಸೇರಿ ಎಲ್ಲಾ ಹಳೆಯ ಗಾಡಿಗಳನ್ನು ಬಂದ್ ಮಾಡಲು ಮುಂದಾಗಿದ್ದಾರೆ ಎಂದು ಷಣ್ಮುಗಂ ಆರೋಪಿಸಿದರು ಎಂದರು.

ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾವು ಟೋಲ್ ನೀಡುತ್ತಿದ್ದೇವೆ. ಅದೇ ನಮಗೆ ಹೊರೆಯಾಗಿದೆ. ಈಗ ಮತ್ತೆ ರಾಜ್ಯ ಸರ್ಕಾರ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲು ಮುಂದಾಗಿರುವ ಕ್ರಮ ಖಂಡನೀಯ. ಇಲ್ಲೂ ಕೂಡ ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಟೋಲ್ ಸಂಗ್ರಹಕ್ಕೆ ಮುಂದಾಗಿದೆ ಎಂದರು.   ನಾಲ್ಕು ವರ್ಷವಾದರೂ ಮರಳು ನೀತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿಲ್ಲ. ಇದರಿಂದ ಮರಳು ಸಾಗಾಣಿಕೆ ಮಾಡಲಾರದೆ ಇದನ್ನು ಅವಲಂಬಿಸಿ ಬದುಕುತ್ತಿದ್ದವರಿಗೆ ತೀವ್ರ ಅನ್ಯಾಯವಾಗಿದೆ. ಅಲ್ಲದೆ ಅಕ್ರಮ ಮರಳು ಸಾಗಾಣಿಕೆ ಹೆಚ್ಚಾಗಿದೆ ಎಂದ ಅವರು ಈ ಎಲ್ಲ ಧೋರಣೆಗಳನ್ನು ವಿರೋಧಿಸಿ ಮಾ.30ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin