ಮುಂಗಾರು ಆರಂಭದಲ್ಲೇ ಮಳೆ ಕೊರತೆ, ವರುಣನ ಕಣ್ಣಾಮುಚ್ಚಾಲೆ ಆಟಕ್ಕೆ ರೈತರು ಕಂಗಾಲು

ಈ ಸುದ್ದಿಯನ್ನು ಶೇರ್ ಮಾಡಿ

Former-Rain

ಬೆಂಗಳೂರು, ಜೂ.26- ನೈರುತ್ಯ ಮುಂಗಾರು ಪ್ರಾರಂಭವಾದ ತಿಂಗಳಲ್ಲೇ ಮಳೆ ಕೊರತೆ ರಾಜ್ಯವನ್ನು ಕಾಡುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ವಾಡಿಕೆ ಅವಧಿಗಿಂತ ವಿಳಂಬವಾಗಿ ಮುಂಗಾರು ಆರಂಭವಾಗಿದ್ದಲ್ಲದೆ, ಕಣ್ಣಾಮುಚ್ಚಾಲೆ ಆಟದಂತೆ ಮಳೆ ಬೀಳುತ್ತಿರುವುದು ರೈತರಲ್ಲಿನ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.  ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದರೂ ವಾಡಿಕೆಗಿಂತ ಕಡಿಮೆ ಇದೆ. ಸತತ ಬರಗಾಲದಿಂದ ಕಂಗೆಟ್ಟಿದ್ದ ರಾಜ್ಯದಲ್ಲಿ ಈ ಬಾರಿಯೂ ಮಳೆ ಕೈಕೊಡುತ್ತಿರುವುದು ಕೃಷಿ ಚಟುವಟಿಕೆಗಳ ಮೇಲೆ ಪ್ರತೀಕೂಲ ಪರಿಣಾಮ ಉಂಟು ಮಾಡಲಿದೆ.

ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದ ಮಳೆಕೊರತೆ ಕಂಡು ಬಂದಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.49ರಷ್ಟು ಮಳೆ ಕೊರತೆ ಉಂಟಾಗಿದೆ. ಅತಿ ಹೆಚ್ಚು ಮಳೆ ಬೀಳುತ್ತಿದ್ದ ಕರಾವಳಿ ಮತ್ತು ಮಲೆನಾಡಿನಲ್ಲೂ ಈ ಬಾರಿಯೂ ಕೊರತೆ ಕಂಡು ಬಂದಿದ್ದು ಗಮನಾರ್ಹ ಸಂಗತಿ.  ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ದಕ್ಷಿಣ ಒಳನಾಡಿನಲ್ಲಿ ಶೇ.41ರಷ್ಟು, ಉತ್ತರ ಒಳನಾಡಿನಲ್ಲಿ ಶೇ.21ರಷ್ಟು, ಮಲೆನಾಡು ಭಾಗದಲ್ಲಿ ಅತ್ಯಧಿಕ ಶೇ.65ರಷ್ಟು ಹಾಗೂ ಕರಾವಳಿ ಭಾಗದಲ್ಲಿ ಶೇ.54ರಷ್ಟು ಮಳೆಕೊರತೆ ಕಳೆದ ಒಂದು ವಾರದಲ್ಲಿ ಉಂಟಾಗಿದೆ.

ಮುಂಗಾರು ಪೂರ್ವ ಮಳೆಯು ವಾಡಿಕೆ ಪ್ರಮಾಣದಲ್ಲಿ ಬಿದ್ದಿಲ್ಲ. ಜತೆಗೆ ಜೂ.1ರಿಂದ ಇಲ್ಲಿಯವರೆಗೂ ಮಳೆಯಾಗಿದ್ದರೂ ವಾಡಿಕೆ ಪ್ರಮಾಣದಷ್ಟು ಬಿದ್ದಿಲ್ಲ. ದಕ್ಷಿಣ ಒಳನಾಡು ಹೊರತುಪಡಿಸಿದರೆ ರಾಜ್ಯದಲ್ಲಿ ಮಳೆಕೊರತೆ ಹೆಚ್ಚಾಗಿ ಕಂಡು ಬಂದಿದೆ.   ಒಟ್ಟಾರೆ ಶೇ.6ರಷ್ಟು ಮಳೆ ಕೊರತೆ ಕಂಡು ಬಂದಿದೆ. ಆದರೆ, ಅತಿ ಹೆಚ್ಚು ಮಳೆಯಾಗುತ್ತಿದ್ದ ಕರಾವಳಿಯಲ್ಲಿ ಶೇ.13ರಷ್ಟು, ಮಲೆನಾಡಿನಲ್ಲಿ ಶೇ.17ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಭರ್ತಿಯಾಗದೆ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ಜಲಾಶಯಗಳಿಗೂ ಈ ವರ್ಷವೂ ನಿರೀಕ್ಷಿತ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಾಗಿಲ್ಲ. ಕಾರಣ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿಲ್ಲ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಅವರ ಪ್ರಕಾರ ಮುಂಗಾರು ಮಾರುತಗಳು ಕರಾವಳಿ ಮೂಲಕ ಮುಂಬೈ ಹಾಗೂ ಗುಜರಾತ್ ಕಡೆಗೆ ಚಲಿಸಿದೆ. ಹೀಗಾಗಿ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದೆ.   ನಿನ್ನೆಯಿಂದ ಕರ್ನಾಟಕದ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಇನ್ನೊಂದು ವಾರದ ಕಾಲ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಸದ್ಯಕ್ಕೆ ಉತ್ತಮ ತೇವಾಂಶ ಇರುವ ಮೋಡಗಳಿದ್ದು, ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗಿದೆ. ಆದರೆ, ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಯಥಾರೀತಿ ಚದುರಿಂತೆ ಆಗುವ ಮಳೆಯೇ ಮುಂದುವರೆಯುವ ಲಕ್ಷಣಗಳಿವೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin