ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ : ಡಾ.ಜಿ.ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Tumkur
ತುಮಕೂರು,ಜೂ.2-ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಬಿಜೆಪಿಯವರ ತಂತ್ರಕ್ಕೆ ನಮ್ಮ ಪಕ್ಷ ಕೂಡ ಸರಿಯಾದ ರಣತಂತ್ರ ರೂಪಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.  ಕೆಪಿಸಿಸಿ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ನಂತರ ಇದೇ ಮೊದಲ ಬಾರಿಗೆ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಮತ್ತಿತರರ ಜೊತೆ ಇಂದು ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ಬಿಜೆಪಿಯ ಮಿಷನ್ 150 ಹಗಲುಗನಸು. ಅವರ ಕನಸು ನನಸಾಗಲು ಬಿಡುವುದಿಲ್ಲ.


 

ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ. ಪಕ್ಷವನ್ನು ಬಲಗೊಳಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕಾರ್ಯಕರ್ತರನ್ನು ಸಂಘಟಿಸಿ ಅಧಿಕಾರದ ಗದ್ದುಗೆಗೇರಿಸುತ್ತೇವೆ. ಇದಕ್ಕಾಗಿ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇವೆ ಎಂದು ತಿಳಿಸಿದರು.   2018ಕ್ಕೆ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ಸಿದ್ದಗಂಗಾಶ್ರೀಗಳ ಆಶೀರ್ವಾದ ಸಿಕ್ಕಿದೆ ಎಂದು ಪರಮೇಶ್ವರ್ ಸಂತಸ ವ್ಯಕ್ತಪಡಿಸಿದರು.  ಬಿಜೆಪಿಯವರು ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಸಿಎಂ ಅಭ್ಯರ್ಥಿಯನ್ನು ಗುರುತಿಸುವುದು ಪಕ್ಷದ ಕೆಲಸ. ಆದರೆ ಆಯ್ಕೆ ಮಾಡುವುದು ಜನರು. ಬಿಜೆಪಿಯವರು ಈಗಾಗಲೇ ಭ್ರಮೆಯಲ್ಲಿ ತೇಲುತ್ತಿದ್ದಾರೆ.

 

ಇಂಥ ನಡವಳಿಕೆ ನಮ್ಮ ಪಕ್ಷದಲ್ಲಿ ಇಲ್ಲ. ಸಿಎಂ ಆಯ್ಕೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಮುಂದಿನ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲೇ ನಡೆಯಲಿದೆ. ನಾವೆಲ್ಲರೂ ಒಗ್ಗಟ್ಟಾಗಿಯೇ ಚುನಾವಣೆಗೆ ಹೋಗುತ್ತೇವೆ ಎಂದರು. ನೀವು ಸಿಎಂ ಅಭ್ಯರ್ಥಿಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮದವರಾದ ನೀವುಗಳು ಹಾಗೆ ಬಿಂಬಿಸುತ್ತಿದ್ದೀರ. ನಾನು ಎಲ್ಲಿಯೂ ಆ ರೀತಿ ಹೇಳಿಲ್ಲ . ಅದೆಲ್ಲ ಹೈಕಮಾಂಡ್‍ಗೆ ಬಿಟ್ಟ ವಿಷಯ ಎಂದು ಹೇಳಿದರು.

ಚುನಾವಣೆಯಲ್ಲಿ ಎಷ್ಟು ಸೀಟುಗಳನ್ನು ಪಡೆಯಲಿದ್ದೀರ? ಈ ಬಗ್ಗೆ ಸಮೀಕ್ಷೆ ನಡೆಸಿದ್ದೀರ ಎಂದಿದ್ದಕ್ಕೆ , ನಾವು ಯಾವುದೇ ಆಂತರಿಕ ಸಮೀಕ್ಷೆ ನಡೆಸಿಲ್ಲ. ನಮಗೆ ಮಾಧ್ಯಮಗಳ ಸಮೀಕ್ಷೆ ಬಗ್ಗೆ ನಂಬಿಕೆ ಇದೆ ಎಂದು ಹೇಳಿದರು.  ರೈತರ ಸಾಲ ಮನ್ನಾ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಿದರೆ ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುವುದಾಗಿ ತಿಳಿಸಿದರು.  ರೈತರ ಪರ ಎಂದು ಹೇಳುತ್ತೀರಾ.. ಪ್ರತಿಭಟಿಸುವ ರೈತರನ್ನು ಬಂಧಿಸುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟಿಸುವವರು ಯಾರೇ ಆಗಿರಲಿ ಕಾನೂನು ಉಲ್ಲಂಘಿಸಿದರೆ ಪೊಲೀಸರ ಕ್ರಮ ಅನಿವಾರ್ಯವಾಗಿರುತ್ತದೆ. ಯಾವುದೇ ಕಾರಣಕ್ಕೂ ರೈತರನ್ನು ಬಂಧಿಸುವುದಾಗಲಿ, ಜೈಲಿಗೆ ಕಳುಹಿಸುವುದಾಗಲಿ ನಾವು ಮಾಡುವುದಿಲ್ಲ ಎಂದರು.

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು , ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದೆ. ಎಸ್‍ಐಟಿ ತಂಡವು ಈಗಾಗಲೇ ತನಿಖೆ ಆರಂಭಿಸಿದ್ದು , ಇದಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.
ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅದು ಅಂಗೀಕಾರವಾಗಿಲ್ಲ. ಆದರೂ ಎಸ್ಕಾರ್ಟ್ ಬೇಡ ಎಂದು ಹೇಳಿದ್ದೇನೆ ಎಂದು ತಿಳಿಸಿದರು.  ಸಂಸದ ಮುದ್ದಹನುಮೇಗೌಡ, ಶಾಸಕ ರಫೀಕ್ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ , ಎಳಚವಾಡಿ ನಾಗರಾಜ್, ರಾಜೇಂದ್ರ ಹೊನ್ನಗಿರಿಗೌಡ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin