ಮುಂದಿನ ಚುನಾವಣೆಯಲ್ಲಿ ಭವಿಷ್ಯ ಕಂಡುಕೊಳ್ಳಲು ತಯಾರಿ ನಡೆಸಿದ್ದಾರೆ ರಾಜಕಾರಣಿಗಳ ಪುತ್ರರತ್ನರು

ಈ ಸುದ್ದಿಯನ್ನು ಶೇರ್ ಮಾಡಿ

Son-Politics

ಬೆಂಗಳೂರು,ಫೆ.22-ವಿಧಾನಸಭೆ ಚುನಾವಣೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಈ ಬಾರಿ ಅನೇಕ ರಾಜಕಾರಣಿಗಳ ಪುತ್ರರತ್ನರು ತಮ್ಮ ಭವಿಷ್ಯ ಕಂಡುಕೊಳ್ಳಲು ಸಜ್ಜಾಗಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು, ಅವರ ಪುತ್ರ-ಪುತ್ರಿಯರು ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ.
ಅಪ್ಪನ ನೆರಳಿನಲ್ಲೇ ರಾಜಕೀಯ ಭವಿಷ್ಯ ಕಂಡುಕೊಳ್ಳಬೇಕೆಂಬ ಹಪಾಹಪಿಗೆ ಬಿದ್ದಿರುವ ಇವರು ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಮಾಜ ಸೇವೆ ಎಂಬ ಹೆಸರಿನಲ್ಲಿ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.

ಇದರಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ(ವರುಣ), ಸಚಿವರಾದ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ (ಬೊಮ್ಮನಹಳ್ಳಿ), ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್(ನಂಜನಗೂಡು) ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.  ಇನ್ನು ಮಾಜಿ ಸಚಿವರಾದ ವಿ.ಸೋಮಣ್ಣ ಪುತ್ರ ಡಾ.ಅರುಣ್ ಸೋಮಣ್ಣ (ಗೋವಿಂದರಾಜನಗರ), ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (ಬೇಲೂರು), ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್(ಶಿವಮೊಗ್ಗ ನಗರ), ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರ(ಕಾರ್ಕಳ), ಶಾಮನೂರು ಶಿವಶಂಕರಪ್ಪನವರ ಮೊಮ್ಮಗ (ದಾವಣಗೆರೆ ದಕ್ಷಿಣ), ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ (ಮೂಡಿಗೆರೆ), ಸಿ.ಕೆ.ಜಾಫರ್ ಶರೀಫ್ ಮೊಮ್ಮಗ ರೆಹಮಾನ್ ಶರೀಫ್(ಹೆಬ್ಬಾಳ) ಸೇರಿದಂತೆ ಅನೇಕರು ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.

ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ , ಜೆ.ಎಚ್.ಪಟೇಲ್, ಬಿ.ಎಸ್.ಯಡಿಯೂರಪ್ಪನವರ ಪುತ್ರರು ಒಂದೊಂದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಮಧುಬಂಗಾರಪ್ಪ , ಬಿ.ವೈ.ರಾಘವೇಂದ್ರ ಹಾಲಿ ಶಾಸಕರಾಗಿದ್ದರೆ, ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಮಹಿಮಾ ಪಾಟೀಲ್ ಒಂದು ಬಾರಿ ಸ್ಪರ್ಧಿಸಿ ವಿಜೇತರಾಗಿದ್ದರು. ಈ ಬಾರಿಯೂ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.   ಇದರ ಜೊತೆಗೆ ಕೆಲ ಶಾಸಕರು ಕೂಡ ತಮ್ಮ ಪುತ್ರ ಮತ್ತು ಪುತ್ರಿಯರಿಗೆ ಟಿಕೆಟ್ ನೀಡಬೇಕೆಂದು ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.

ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಪುತ್ರಿ ರೂಪಾಗೆ ಕೆಜಿಎಫ್‍ನಿಂದ, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ತಮ್ಮ ಪುತ್ರಿ ಶಾಂಭವಿಗೆ ಮದ್ದೂರಿನಿಂದ ಕಣಕ್ಕಿಳಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ತೊರೆದಿರುವ ಅವರು ಮುಂದಿನ ನಡೆ ಏನೆಂಬುದನ್ನು ಈವರೆಗೆ ಬಿಟ್ಟುಕೊಟ್ಟಿಲ್ಲ.   ಈಗಾಗಲೇ ಕ್ಷೇತ್ರದಲ್ಲಿ ಠಿಕಾಣಿ ಹೂಡಿರುವ ಅನೇಕರು ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ. ಟಿಕೆಟ್ ಸಿಗುವ ಭರವಸೆ ಸಿಗದಿದ್ದರೂ ಕ್ಷೇತ್ರದಲ್ಲಿ ಅನೇಕ ಸಮಾಜ ಸೇವೆಗಳ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವ ಕಾಯಕದಲ್ಲಿ ನಿರತರಾಗಿದ್ದಾರೆ.   ಚುನಾವಣೆ ಸಮೀಪಿಸುತ್ತಿದ್ದಂತೆ ಅಪ್ಪ-ಅಮ್ಮನ ಹೆಸರಿನಲ್ಲಿ ಪುತ್ರ-ಪುತ್ರಿಯರು ರಾಜಕೀಯ ಭವಿಷ್ಯ ಕಂಡುಕೊಳ್ಳಲು ತುದಿಗಾಲಲ್ಲಿ ನಿಂತಿರುವುದು ಗುಟ್ಟಾಗಿ ಉಳಿದಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin