ಮುಂದಿನ ಚುನಾವಣೆಯಲ್ಲಿ ಮಧ್ಯಪ್ರವೇಶಿಸದಿರಲು ‘ಕೈ’ಕಮಾಂಡ್ ನಿರ್ಧಾರ, ರಾಜ್ಯ ನಾಯಕರಿಗೆ ಫುಲ್ ಫ್ರೀಡಂ

ಈ ಸುದ್ದಿಯನ್ನು ಶೇರ್ ಮಾಡಿ

Congress--011

ಬೆಂಗಳೂರು, ಮೇ 6– ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ ಹೈಕಮಾಂಡ್ ಪ್ಲಾನ್ ಯಶಸ್ವಿಯಾಗದ ಹಿನ್ನೆಲೆಯಲ್ಲಿ 2018ರ ಕರ್ನಾಟಕ ರಾಜ್ಯದ ಚುನಾವಣೆಗೆ ಮಧ್ಯ ಪ್ರವೇಶ ಮಾಡದಿರಲು ನಿರ್ಧರಿಸಿದ್ದು, ರಾಜ್ಯ ನಾಯಕರಿಗೆ ಮುಕ್ತ ಅವಕಾಶ ನೀಡಲು ತೀರ್ಮಾನಿಸಿದೆ.  ಚುನಾವಣೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರ ಕಾರ್ಯತಂತ್ರಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯದ ವಿಷಯದಲ್ಲಿ ಮಧ್ಯಪ್ರವೇಶ ಮಾಡದಿರಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.  ರಾಜ್ಯದ ಎಲ್ಲಾ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಸೂಚನೆಯನ್ನು ನೀಡಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸುವ ಸ್ವಾತಂತ್ರವನ್ನೂ ಕೂಡ ರಾಜ್ಯ ನಾಯಕರಿಗೆ ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ನೀಡಿದ್ದಾರೆ. ರಾಜ್ಯ ನಾಯಕರ ತೀರ್ಮಾನಗಳ ಬಗ್ಗೆ ತಲೆಹಾಕದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.ನಾಲ್ಕು ವರ್ಷಗಳ ಕಾಲ ಪಕ್ಷ ಹಾಗೂ ಸರ್ಕಾರವನ್ನು ಇಲ್ಲಿನ ನಾಯಕರು ಸಮರ್ಥವಾಗಿ ಮುನ್ನಡೆಸಿದ್ದಾರೆ. ಯಾವುದೇ ಭಿನ್ನಮತಗಳು ತಲೆ ಎತ್ತದಂತೆ ಉದ್ಭವವಾದ ಭಿನ್ನಮತಗಳನ್ನು ಶಮನಗೊಳಿಸುತ್ತಾ ಹೈಕಮಾಂಡ್‍ಗೆ ಕಿರಿಕಿರಿಯಾಗದಂತೆ ಆಡಳಿತ ನಡೆಸಿರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರಿಗೆ ಚುನಾವಣೆ ಜವಾಬ್ದಾರಿಯನ್ನು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ರಾಹುಲ್ ಅವರ ಕಾರ್ಯತಂತ್ರ ವರ್ಕೌಟಾಗಲಿಲ್ಲ. ಅಲ್ಲಿನ ಆಡಳಿತಾರೂಢ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ನಡೆಸಿದ ಪ್ರಯತ್ನ ಫಲನೀಡಲಿಲ್ಲ. ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಬೇಕಾಯಿತು.

ಹಾಗಾಗಿ ಅಳೆದೂ ಸುರಿದು ಚಿಂತನೆ ನಡೆಸಿ ರಾಜ್ಯ ನಾಯಕರಿಗೆ ಜವಾಬ್ದಾರಿ ನೀಡಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಕಾರ್ಯತಂತ್ರ ರಚನೆ, ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಸ್ಥಳೀಯ ನಾಯಕರಿಗೆ ರಾಹುಲ್ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.  ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಡಿ ಎಂದು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಭೇಟಿ ಮಾಡಿದಾಗ ರಾಹುಲ್‍ಗಾಂಧಿ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಗಮನಕ್ಕೂ ಈ ವಿಷಯ ತರಲಾಗಿದೆ. ಬಹುತೇಕ ಚುನಾವಣಾ ಸಂದರ್ಭದಲ್ಲಿ ಹೈಕಮಾಂಡ್ ಹಸ್ತಕ್ಷೇಪ ವಿಪರೀತವಾಗಿರುತ್ತದೆ. ಆದರೆ, ಈ ಬಾರಿ ಹೈಕಮಾಂಡೇ ಮಧ್ಯಪ್ರದೇಶ ಮಾಡದಂತೆ ಸ್ವಯಂ ನಿಯಂತ್ರಣ ಹಾಕಿಕೊಂಡಿರುವುದು ರಾಜ್ಯ ನಾಯಕತ್ವಕ್ಕೆ ಮನ್ನಣೆ ಸಿಕ್ಕಂತಾಗಿದೆ.

ಪ್ರತೀ ಬಾರಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಕೊನೆ ಕ್ಷಣದವರೆಗೂ ಆಯ್ಕೆ ಅಂತಿಮಗೊಳ್ಳುತ್ತಿರಲಿಲ್ಲ. ಈ ಬಾರಿ ರಾಜ್ಯ ನಾಯಕರಿಗೆ ಜವಾಬ್ದಾರಿ ನೀಡಿದರೆ ಮೊದಲೇ ಅಭ್ಯರ್ಥಿಗಳ ಆಯ್ಕೆ ಆಗುವುದರಿಂದ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಬಿಜೆಪಿ ಚುನಾವಣೆಗೆ ಬಹಳ ವೇಗದ ಸಿದ್ಧತೆಗಳನ್ನು ಮಾಡುತ್ತಿದೆ. ಜೆಡಿಎಸ್ ಕೂಡ ಚುನಾವಣಾ  ತಯಾರಿಯಲ್ಲಿ ತೊಡಗಿದೆ. ಆಡಳಿತ ರೂಢ ಕಾಂಗ್ರೆಸ್‍ಗೆ ಸಾಮಾನ್ಯವಾಗಿ ಆಡಳಿತ ವಿರೋಧಿ ಅಲೆ ಇರುತ್ತದೆ. ಇದನ್ನು ನಿಭಾಯಿಸಿಕೊಂಡು ಚುನಾವಣೆ ಎದುರಿಸಬೇಕಾಗುತ್ತದೆ. ಇದರ ನಡುವೆ ಹೈಕಮಾಂಡ್‍ನ ಅನಗತ್ಯ ಮಧ್ಯ ಪ್ರವೇಶದಿಂದ ಮತ್ತಷ್ಟು ಕಿರಿಕಿರಿಯಾಗುವ ಸಾಧ್ಯತೆ ಇರುತ್ತದೆ.ಸಧ್ಯ ಹೈಕಮಾಂಡ್ ಈಗ ಕೈಗೊಂಡಿರುವ ತೀರ್ಮಾನದಿಂದ ರಾಜ್ಯ ನಾಯಕರಿಗೆ ನಿರಾಳ ಎನಿಸುತ್ತದೆ. ಆದರೆ, ತಮ್ಮಿದಷ್ಟಂತೆ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ, ಭೌಳಿಕ ಸನ್ನಿವೇಶ, ಪಕ್ಷ ನಿಷ್ಟೆ, ಜ್ಯೇಷ್ಠತೆ, ಗೆಲುವಿನ ಮಾನದಂಡಗಳನ್ನು ಆಧರಿಸಿ ಟಿಕೆಟ್ ನೀಡಬೇಕಾಗಿರುತ್ತದೆ.  ಈ ಎಲ್ಲವನ್ನು ಪ್ರಸ್ತುತ ರಾಜ್ಯ ನಾಯಕತ್ವ ಮಾಡಲಿದೆ ಎಂಬ ಅರಿವು ಹೈಕಮಾಂಡ್‍ಗೆ ಇರುವುದರಿಂದ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.  ಅಲ್ಲದೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಷಾ ಅಲೆಯಲ್ಲಿ ಒಂದೊಂದೇ ರಾಜ್ಯವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‍ಗೆ ಆಧಾರ ಸ್ತಂಭವಾಗಿರುವುದು ಕರ್ನಾಟಕ ಮಾತ್ರ.  ಅದರ ಮೇಲೆ ಹೈಕಮಾಂಡ್ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಹಾಗಾಗಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ. ಅದರ ಮೊದಲ ಭಾಗವಾಗಿ ಅನಗತ್ಯ ಮಧ್ಯ ಪ್ರವೇಶದಿಂದ ಹಿಂದೆ ಸರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin