ಮುಂದಿನ ತಿಂಗಳಿನಿಂದ ಎಪಿಎಂಸಿಗಳಲ್ಲಿ ಆನ್‍ಲೈನ್ ಹಣ ಪಾವತಿ ವ್ಯವಸ್ಥೆ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Session-Siddaramaiah--01

ಬೆಂಗಳೂರು, ಜೂ.21- ಆನ್‍ಲೈನ್ ಮಾರುಕಟ್ಟೆ ಮೂಲಕ ಈಗಾಗಲೇ ದೇಶಕ್ಕೆ ಮಾದರಿಯಾಗಿರುವ ನಮ್ಮ ಸರ್ಕಾರ ಮುಂದಿನ ತಿಂಗಳಿನಿಂದ ಎಪಿಎಂಸಿಗಳಲ್ಲಿ ಆನ್‍ಲೈನ್ ಹಣ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲೆ ನಡೆದ ಸುದೀರ್ಘ ಚರ್ಚೆಗೆ ಇಂದು ಉತ್ತರ ನೀಡಿದ ಸಿಎಂ, ಆನ್‍ಲೈನ್ ಮಾರುಕಟ್ಟೆಯಿಂದ ರೈತರಿಗೆ ಶೇ.38ರಷ್ಟು ನೇರವಾಗಿ ಹೆಚ್ಚು ಹಣ ಲಭ್ಯವಾಗುತ್ತಿದೆ ಎಂದು ಕೇಂದ್ರ ನೀತಿ ಆಯೋಗ ವರದಿಯಲ್ಲಿ ಪ್ರಶಂಸೆ ಮಾಡಿದೆ. ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ದೇಶದಲ್ಲೇ ನಮ್ಮ ಸರ್ಕಾರ ಮೊದಲ ಬಾರಿಗೆ ಜಾರಿಗೆ ತಂದಿದೆ. ಇದನ್ನು ನೋಡಿ ಕೇಂದ್ರ ಸರ್ಕಾರ ದೇಶಾದ್ಯಂತ ಇದೇ ಮಾದರಿ ಅನುಸರಿಸುವುದಾಗಿ ಪ್ರಕಟಿಸಿದೆ ಎಂದರು.

ಬಿಜೆಪಿಯ ಬಸವರಾಜಬೊಮ್ಮಾಯಿ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತರುವುದರಲ್ಲಿ ಕರ್ನಾಟಕ ಮೊದಲಲ್ಲ. ಮಧ್ಯಪ್ರದೇಶ ಸರ್ಕಾರ 10 ವರ್ಷಗಳ ಹಿಂದೆಯೇ ಈ ವ್ಯವಸ್ಥೆ ಜಾರಿಗೆ ತಂದಿದೆ. 2500ಸಾವಿರ ಎಪಿಎಂಸಿಗಳನ್ನು ಇ-ಚಾಪೆಲ್ ಮೂಲಕ ಆನ್‍ಲೈನ್ ಬಳಸಲಾಯಿತು, ಆಂಧ್ರಪ್ರದೇಶ ಕೂಡ ಈ ವ್ಯವಸ್ಥೆ ಮೊದಲೇ ಜಾರಿಗೆ ತಂದಿತ್ತು ಎಂದು ವಾದಿಸಿದರು.

ಇದು ಸದನವನ್ನು ಹಾದಿ ತಪ್ಪಿಸುವ ಪ್ರಯತ್ನ ಕರ್ನಾಟಕವೇ ಮೊದಲು ಆನ್‍ಲೈನ್ ವ್ಯವಸ್ಥೆ ಜಾರಿಗೆ ತಂದಿತ್ತು ಎಂದು ಕೃಷ್ಣಬೈರೇಗೌಡ ಪ್ರತಿಪಾದಿಸಿದರು.
ನಮ್ಮಲ್ಲಿ ಅಧಿಕಾರಿಯಾಗಿದ್ದ ಜಿ.ವಿ.ಕೆ.ರಾವ್ ಅವರು ನಿವೃತ್ತಿ ನಂತರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಅವರ ಸಲಹೆಗಾರರಾಗಿದ್ದು, ಕರ್ನಾಟಕದ ಮಾದರಿಯನ್ನು ಅಲ್ಲಿಪ್ರಯೋಗ ಮಾಡಿದ್ದಾರೆ. ಕರ್ನಾಟಕ ಹುಬ್ಬಳ್ಳಿಯಲ್ಲಿ ಆನ್‍ಲೈನ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ 23 ರಾಜ್ಯಗಳ ಸಚಿವರು, ಕೇಂದ್ರ ಕೃಷಿ ಸಚಿವರು ಭಾಗವಹಿಸಿ ನಮ್ಮ ವ್ಯವಸ್ಥೆಯನ್ನು ಕೊಂಡಾಡಿದರು.

ಮಧ್ಯಪ್ರದೇಶದಲ್ಲಿ ಮೊದಲೇ ಈ ವ್ಯವಸ್ಥೆ ಜಾರಿಯಾಗಿದ್ದರೆ ಈ ಮೊದಲು ಅಧಿಕಾರದಲ್ಲಿದ್ದ ನೀವು ಏಕೆ ಪಾಲಿಸಲಿಲ್ಲ. ನಿದ್ದೆ ಮಾಡುತ್ತಿದ್ದಿರಾ ಎಂದು ಕೃಷ್ಣಬೈರೇಗೌಡ ತಿರುಗೇಟು ನೀಡಿದರು.  ಆನ್‍ಲೈನ್ ಮಾರುಕಟ್ಟೆ ವಿಷಯವಾಗಿಯೇ ಮೊದಲ ಜಾರಿಗೊಳಿಸಿದ್ದು ಯಾರು ಎಂಬ ವಿಷಯವಾಗಿ ಬಹಳ ಹೊತ್ತು ಬಸವರಾಜಬೊಮ್ಮಾಯಿ, ಸಚಿವರಾದ ಕೃಷ್ಣಬೈರೇಗೌಡ, ಎಂ.ಬಿ.ಪಾಟೀಲ್ ನಡುವೆ ಜಟಾಪಟಿ ನಡೆಯಿತು. ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಆನ್‍ಲೈನ್ ಮಾರುಕಟ್ಟೆಯ ಕೀರ್ತಿಯನ್ನು ನನಗೆ ಕೊಡಲು ಬಿಜೆಪಿಯವರಿಗೆ ಇಷ್ಟವಿಲ್ಲ.ಹೋಗ್ಲಿ ಬಿಡಿ. ನಮ್ಮ ರೈತರಿಗೆ ಶೇ.38ರಷ್ಟು ಹಣ ಹೆಚ್ಚಿಗೆ ಸಿಗುತ್ತಿದೆ. ಅದೇ ಮುಖ್ಯ ಎಂದರು.

ಜಗದೀಶ್ ಶೆಟ್ಟರ್ ಅವರು ಆನ್‍ಲೈನ್ ಟ್ರೇಡಿಂಗ್ ನಡೆಯುತ್ತಿದೆ. ಇನ್ನು ಆನ್‍ಲೈನ್ ಪೇಮೆಂಟ್ ಆಗಿಲ್ಲ ಎಂದು ಕಾಲೆಳೆದರು. ಮುಂದಿನ ತಿಂಗಳಿನಿಂದ ಆನ್‍ಲೈನ್ ಹಣ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin