ಮುಂದಿನ 3 ವರ್ಷಗಳಲ್ಲಿ ರೈತರಿಗೆ ಪ್ರಮಾಣೀಕೃತ ಬಿತ್ತನೆ ಬೀಜ ಪೂರೈಕೆ : ಕೃಷ್ಣಬೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah

ಬೆಂಗಳೂರು, ಸೆ.25- ರೈತರಿಗೆ ಅಗತ್ಯವಿರುವಷ್ಟು ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲು ಮುಂದಿನ ಮೂರು ವರ್ಷದೊಳಗಾಗಿ ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ನಗರದ ಹೆಬ್ಬಾಳದಲ್ಲಿರುವ ಸಮಗ್ರ ಬಿಜ ನಿಗಮದ ಆವರಣದಲ್ಲಿ ಬೀಜಭವನ, ಪುಷ್ಪ ಸ್ಟುಡಿಯೋ ಮತ್ತು ತರಬೇತಿ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೀಜನಿಗಮ ರೈತರಿಗೆ ಉತ್ತಮ ದರ್ಜೆಯ ಪ್ರಮಾಣೀಕೃತ ಬಿತ್ತನೆ ಬೀಜವನ್ನು ಪೂರೈಕೆ ಮಾಡುತ್ತಿದೆ. ಮತ್ತೊಂದೆಡೆ ಪ್ರಮಾಣೀಕೃತವಲ್ಲದ ಬೀಜ ಪೂರೈಕೆಯಾಗುತ್ತಿದೆ. ಇದರಿಂದ ಹಣ ದುರುಪಯೋಗವಾಗುತ್ತಿದ್ದು, ರೈತರಿಗೆ ನಷ್ಟವಾಗುತ್ತಿದೆ ಎಂದರು.

ರಾಜ್ಯದ ರೈತರಿಗೆ ಹನ್ನೊಂದುವರೆ ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಬೇಕಿದೆ. ಸದ್ಯಕ್ಕೆ ಬೀಜನಿಗಮ ಮೂರುವರೆ ಲಕ್ಷ ಕ್ವಿಂಟಾಲ್ ಮಾತ್ರ ಉತ್ಪಾದನೆ ಮಾಡುತ್ತಿದೆ. ಬಾಕಿ ಇರವ ಕೊರತೆಯನ್ನು ನೀಗಿಸಲು ಸರ್ಕಾರ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ವಿಶ್ವವಿದ್ಯಾಲಯದ ಜತೆ ಒಪ್ಛ್ಪಂದ ಮಾಡಿಕೊಂಡಿದೆ. ಇನ್ನು ಮೂರು ವರ್ಷದಲ್ಲಿ ಬೀಜ ನಿಗಮ 6 ಲಕ್ಷ ಕ್ವಿಂಟಾಲ್ ಬೀಜ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ರೈತರು ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಎಷ್ಟೇ ಬೆಳೆದರು ಅದನ್ನು ಸರ್ಕಾರ ಖರೀಸಲು ಸಿದ್ದವಿದೆ ಎಂದರು.

ಬೀಜನಿಗಮ ಆರಂಭವಾದ ಆರಂಭದಲ್ಲಿ ಅಗತ್ಯವಿರುವ ಬಿತ್ತನೆ ಬೀಜದ ಪೈಕಿ ಶೇ.70ರಷ್ಟನ್ನು ಪೂರೈಕೆ ಮಾಡುತ್ತಿತ್ತು. ಈಗ ಅದರ ಪ್ರಮಾಣ ಶೇ.30ಕ್ಕೆ ಇಳಿದಿದೆ. ಇನ್ನು ಮುಂದೆ ಇಂತಹ ಪರಿಸ್ಥಿತಿ ಬರದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಿಳಿಸಿದರು. ದ್ವಿತೀಯ ದರ್ಜೆಯ ಬಿತ್ತನೆ ಬೀಜ ಪೂರೈಕೆಯಿಂದ ರೈತರಿಗೆ ನಷ್ಟವಾಗುತ್ತಿರುವುದಲ್ಲದೆ, ಆರ್ಥಿಕವಾಗಿಯೂ ಹೊರೆಯಾಗುತ್ತಿದೆ. ಉದಾಹರಣೆಗೆ 1ಕ್ವಿಂಟಾಲ್ ಉದ್ದು ಬಿತ್ತನೆ ಬೀಜಕ್ಕೆ 9ಸಾವಿರ ರೂ.ಮಾರುಕಟ್ಟೆ ದರ ಇದ್ದರೆ ಖಾಸಗಿಯವರು ದುಬಾರಿ ಬೆಲೆ ನಿಗದಿ ಪಡಿಸುತ್ತಾರೆ. ಸರ್ಕಾರ ಶೇ.50ರಷ್ಟು ಸಬ್ಸಿಡಿ ನೀಡುತ್ತಿದ್ದು, ಇದನ್ನು ಖಾಸಗಿಯವರು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿದ್ದು, ರೈತರಿಗೆ ಲಾಭವಾಗುತ್ತಿಲ್ಲ. ಇದನ್ನು ತಡೆಗಟ್ಟುವುದು ನಮ್ಮ ಉದ್ದೇಶ. ಹಾಗಾಗಿ ದೇಶದಲ್ಲೇ ಮಾದರಿ ಎನ್ನಬಹುದಾದ ಬಿತ್ತನೆ ಬೀಜ ನೀತಿಯನ್ನು ರೂಪಿಸಿದ್ದು, ಸಂಪುಟ ಅದಕ್ಕೆ ಅನುಮತಿ ನೀಡಿದೆ ಎಂದರು.

ಬೀಜ ನಿಗಮಕ್ಕಾಗಿ ಈ ಮೊದಲು ನಿರ್ಮಿಸಿದ್ದ ಕಟ್ಟಡವನ್ನು ರಸ್ತೆ ಅಗಲೀಕರಣದಿಂದ ಒಡೆದು ಹಾಕಲಾಯಿತು. ಅದರಿಂದ ಬಂದ ಪರಿಹಾರ ಮತ್ತು ಸರ್ಕಾರದ ಅನುದಾನ ಬಳಕೆ ಮಾಡಿ 14.5ಕೋಟಿ ರೂ.ವೆಚ್ಚದಲ್ಲಿ ಏಳು ಮಹಡಿಗಳ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿರುವ ಪುಷ್ಪ ಹರಾಜು ಕೇಂದ್ರ ಏಷ್ಯಾಖಂಡದಲ್ಲೇ 2ನೇ ದೊಡ್ಡ ಕೇಂದ್ರವಾಗಿದೆ. 1995ರ ಅ.15ರಂದು ಆಗಿನ ಉಪಮುಖ್ಯಮಂತ್ರಿ, ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಮತ್ತು ಕೃಷಿ ಸಚಿವರಾಗಿದ್ದ ನಮ್ಮ ತಂದೆ ಬೈರೇಗೌಡ ಅವರ ಕಾಳಜಿಯಿಂದ ಪುಷ್ಪ ಹರಾಜು ಕೇಂದ್ರ ನಿರ್ಮಾಣವಾಗಿದ್ದು, ಆರಂಭದಲ್ಲಿ ವಾರಕ್ಕೆ ಎರಡು ದಿನ ನಡೆಯುತ್ತಿದ್ದ ಹರಾಜು ಈಗ ಪ್ರತಿ ದಿನವೂ ನಡೆಯುತ್ತಿದೆ.

ಜನವರಿಯಿಂದ ಆನ್‍ಲೈನ್ ಟ್ರೇಡಿಂಗ್‍ಅನ್ನು ಆರಂಭಿಸಲಾಗುತ್ತಿದೆ. ದೇಶದ ಯಾವುದೇ ಮೂಲೆಯಲ್ಲಿ ಕೂತೂ ಇಲ್ಲಿ ಹೂ ಖರೀದಿ ಮಾಡಬಹುದು. ಹೂವಿನ ಬಳಕೆ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಲಾಗಿದೆ. ರೈತರಿಗೆ, ಪ್ಲವರ್ ಡೆಕೋರೇಟರ್‍ಗಳಿಗೆ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಹರಾಜು ಕೇಂದ್ರವನ್ನು ವಿಶ್ವದಲ್ಲೇ ನಂ.1ಮಾಡುವ ಅವಕಾಶಗಳಿದ್ದು, ಆ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಮ್ಮ ಸರ್ಕಾರ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆಯಾಗದಂತೆ ಎಚ್ಚರಿಕೆ ವಹಿಸಿದೆ. ಹಿಂದೆ ಸರ್ಕಾರದಲ್ಲಿ ರಸಗೊಬ್ಬರಕ್ಕಾಗಿ ಗಲಾಟೆ ನಡೆದು ಗೋಲಿಬಾರ್ ನಡೆದು ರೈತರು ಮೃತಪಟ್ಟ ಉದಾಹರಣೆಗಳಿವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಸಚಿವ ಕೆ.ಜೆ.ಜಾರ್ಜ್, ವಿಧಾನಪರಿಷತ್ ಸದಸ್ಯ ಬೈರತಿಸುರೇಶ್,ಬಿಹಾರದ ಐಎಎಸ್ ಅಧಿಕಾರಿ ಎಸ್.ಎಂ.ರಾಜು, ಹಿರಿಯ ಐಎಎಸ್ ಅಧಿಕಾರಿ ವಿಜಯಭಾಸ್ಕರ್, ಶಾಸಕ ರಾಜುಶೇಖರ್ ಪಾಟೀಲ್ ಹುಮ್ನಾಬಾದ್, ಉಪಮೇಯರ್ ಆನಂದ್, ಹಿರಿಯ ಅಧಿಕಾರಿ ಮಹೇಶ್ವರರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸ್ಥಳೀಯ ಶಾಸಕ ವೈ.ಎ.ನಾರಾಯಣಸ್ವಾಮಿ ಗೈರು ಹಾಜರಿ ಎದ್ದು ಕಾಣುತ್ತಿತ್ತು.

Facebook Comments

Sri Raghav

Admin