ಮುಂದುವರೆದ ರಾಜಕಾಲುವೆ ತೆರವು : ಬಿಬಿಎಂಪಿ ಅಧಿಕಾರಿಗಳಿಗೆ ನಾಗರಿಕರ ಹಿಡಿ ಶಾಪ

ಈ ಸುದ್ದಿಯನ್ನು ಶೇರ್ ಮಾಡಿ

  JCB

ಬೆಂಗಳೂರು, ಆ.7- ಸಾರ್ವಜನಿಕರ ವ್ಯಾಪಕ ವಿರೋಧದ ನಡುವೆಯೂ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ.  ಬಿಗಿಪೆಪೊಲೀಸ್ ಬಂದೋಬಸ್ತ್ ನಡುವೆ ಕಸವನಹಳ್ಳಿಯಿಂದ ಚೋಳ ಕೆರೆಯವರೆಗೆ ರಾಜಕಾಲುವೆ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ.  ನಮಗೆ ಬೇರೆ ದಾರಿಯಿಲ್ಲ. ಇರುವ ಮನೆಯನ್ನು ಉಳಿಸಿಕೊಡಿ ಎಂದು ಸ್ಥಳೀಯರು ಗೋಗರೆಯುತ್ತಿದ್ದರೂ  ಅಧಿಕಾರಿಗಳು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ.    ಅವನಿ ಶೃಂಗೇರಿನಗರದಲ್ಲಿ ಗರ್ಭಿಣಿ ಮಹಿಳೆ ಪ್ರೀತಿ ಎಂಬುವರು ಯಾವುದೇ ಕಾರಣಕ್ಕೂ ನಾನು ಮನೆಯಿಂದ ಹೊರಬರುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಈ ಸಂದರ್ಭದಲ್ಲಿ ಹೋಮ್‍ಗಾಡ್ರ್ಸ್ ನೆರವಿನಿಂದ ಪ್ರೀತಿ ಮತ್ತು ಆಕೆಯ ಪತಿ ಶ್ರೀಕಾಂತ್ ಮತ್ತು ಅವರ  ವೃದ್ಧೆ ತಾಯಿಯನ್ನು ಬಲವಂತದಿಂದ ಹೊರ ಹಾಕಲಾಯಿತು.

JCB-2

ಹೊರಬಂದ ವೃದ್ಧೆ ನಮ್ಮ ಕಷ್ಟ ಕೇಳೋರು ಯಾರೂ ಇಲ್ಲವೇ ದಯವಿಟ್ಟು ಸಹಾಯ ಮಾಡಿ ಎಂದು ಗೋಗರೆದರೂ ಆಕೆಯ ಆರ್ತನಾದ ಅರಣ್ಯ ರೋಧನವಾಯಿತೆ ಹೊರತು ಯಾವುದೇ ಪ್ರಯೋಜನವಾಗಲಿಲ್ಲ. ಅದೇ ರೀತಿ ಇನ್ನಿತರ ಹಲವಾರು ಮಂದಿ ಮನೆ ಒಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರೂ ಪೊಲೀಸರ ಸಹಾಯದಿಂದ ಒತ್ತುವರಿದಾರರ ಮನೆಗಳನ್ನು ತೆರವುಗೊಳಿಸಿ ನಿರ್ದಾಕ್ಷಿಣ್ಯವಾಗಿ ಕಟ್ಟಡಗಳನ್ನು ಕೆಡವಿ ಹಾಕಲಾಯಿತು.  ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಗೃಹ ಪ್ರವೇಶವಾಗದ ಕಟ್ಟಡಗಳು ಸೇರಿದಂತೆ ಹಲವಾರು ಬೃಹತ್ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.  ಅರಕೆರೆಯಲ್ಲಿ 10ಕ್ಕೂ ಹೆಚ್ಚಿನ ಮನೆಗಳ ಮುಂಭಾಗವನ್ನು ಜೆಸಿಬಿ ಯಂತ್ರಗಳು ನೆಲಸಮಗೊಳಿಸಿದವು. ಅದೇ ರೀತಿ ರಾಜಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು  ತೆರವುಗೊಳಿಸುವ ಕಾರ್ಯಾಚರಣೆಯನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ.

JCB-1

ನಕ್ಷೆ ಬದಲಾವಣೆ:

ಕೆಲವು ಪ್ರಭಾವಿ ವ್ಯಕ್ತಿಗಳು ರಾಜಕಾಲುವೆಯನ್ನು  ಒತ್ತುವರಿ ಮಾಡಿಕೊಂಡಿದ್ದಾರೆ.  ಆದರೆ ಬಿಬಿಎಂಪಿ ಅಧಿಕಾರಿಗಳು ಅಂತಹ ವ್ಯಕ್ತಿಗಳ ಕಟ್ಟಡ ಉಳಿಸುವ ಉದ್ದೇಶದಿಂದ ನಕ್ಷೆ ಬದಲಾವಣೆ ಮಾಡಿ ಕೈಲಾಗದವರ ಮನೆಮಠಗಳನ್ನು ಬಲಿ ಪಡೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.  ಮಧ್ಯಮವರ್ಗಕ್ಕೆ ಸೇರಿದ ಮೂರು ಮನೆಗಳನ್ನು ನೆಲಸಮಗೊಳಿಸಿದ ನಂತರ ಆ ಮನೆಗಳು ಕಾನೂನು ಬದ್ಧವಾಗಿತ್ತು ಎಂಬ ಅಂಶ ಕೂಡ ಬಯಲಾಯಿತು.

 ಒಳ್ಳೆ ಸಾವು ಬರೋಲ್ಲ :

ಮನೆ ಕಟ್ಟಲು ನೀವೇ ಅನುಮತಿ ನೀಡಿದ್ದೀರಾ. ಈಗ ನೀವೇ ಬಂದು ನಿಮ್ಮ ಮನೆ ಒತ್ತುವರಿಯಾಗಿದೆ ಎಂದು ಮನೆ ಒಡೆಯಲು ಬಂದಿದ್ದೀರಾ. ಇದು ಯಾವ ನ್ಯಾಯ ಸ್ವಾಮಿ. ನಮ್ಮ ಮನೆಗಳಿಗೆ ಇನ್ನೂ ಗೃಹಪ್ರವೇಶವೇ ಆಗಿಲ್ಲ. ಅಂತಹ ಕಟ್ಟಡಗಳನ್ನು ಒಡೆದು ಹಾಕುತ್ತಿದ್ದೀರ. ನಿಮಗೆ ಒಳ್ಳೆಯ ಸಾವು ಬರೋಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸಂತ್ರಸ್ತರು ಶಾಪ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Facebook Comments

Sri Raghav

Admin