ಮುಂದುವರೆದ ಲಾರಿ ಮುಷ್ಕರ, ಟ್ಯಾಕ್ಸಿ ಅಸೋಯೇಷನ್’ಗಳಿಂದಲೂ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

Lorry-Straike--01

ಬೆಂಗಳೂರು, ಏ.7- ತಮ್ಮ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಎಂಟು ದಿನಗಳಿಂದ ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಪ್ರತಿಭಟನಾ ಸ್ವರೂಪ ಪಡೆಯುತ್ತಿದೆ.   ಮುಷ್ಕರಕ್ಕೆ ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್, ಕರ್ನಾಟಕ ಗೂಡ್ಸ್ ಟ್ರಾನ್ಸ್‍ಪೋರ್ಟ್ ಅಸೋಸಿಯೇಷನ್, ಮ್ಯಾಕ್ಸಿ ಕ್ಯಾಬ್ ಓನರ್ಸ್ ವೆಲ್‍ಫೇರ್ ಅಸೋಸಿಯೇಷನ್, ಎಪಿಎಂಸಿ ಲೋಕಲ್ ಲಾರಿ ಅಂಡ್ ಟೆಂಪೋ ಅಸೋಯೇಷನ್, ಫೆಡರೇಷನ್ ಆಫ್ ಬಸ್ ಆಪರೇಟರ್ಸ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ.

ಸಂಘಟಿತರಾಗಿ ಹೋರಾಡಲು ಲಾರಿ ಮಾಲೀಕರು ಮುಂದಾಗಿದ್ದಾರೆ. ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆಗಳ ಈಡೇರಿಸಲು ನಾಳೆಯವರೆಗೂ ಗಡುವು ನೀಡಿದ್ದು, ಬೇಡಿಕೆ ಈಡೇರದಿದ್ದರೆ ಮುಷ್ಕರ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.  ಏ.8 ರಿಂದ ಅಖಿಲ ಭಾರತ ಲಾರಿ ಮಾಲೀಕರ ಸಂಘ ರಾಷ್ಟ್ರಾದ್ಯಂತ ಮುಷ್ಕರ ನಡೆಸಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ಹಿಂಪಡೆಯದಿರಲು ಲಾರಿ ಮಾಲೀಕರು ನಿರ್ಧರಿಸಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ.

ದಿನನಿತ್ಯದ ವಸ್ತುಗಳು, ಆಹಾರ ಪದಾರ್ಥಗಳು, ಹಣ್ಣು, ತರಕಾರಿ ಮತ್ತಿತರ ಪದಾರ್ಥಗಳು ಸರಿಯಾಗಿ ಸಿಗುತ್ತಿಲ್ಲ. ರಾಜ್ಯ ಸರ್ಕಾರ ತರಕಾರಿ ಮತ್ತಿತರ ವಸ್ತುಗಳನ್ನು ಸರಬರಾಜು ಮಾಡಲು ಪರ್ಯಾಯ ವ್ಯವಸ್ಥೆಯನ್ನು ಕೈಗೊಂಡಿದೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲ. ವಿಮಾ ಪ್ರೀಮಿಯಂ ದರ ಕಡಿತ ಹಾಗೂ ಟೋಲ್ ಇಳಿಕೆ ಮತ್ತಿತರ ಬೇಡಿಕೆ ಮುಂದಿಟ್ಟು ಲಾರಿ ಮಾಲೀಕರು ಮಾಡುತ್ತಿರುವ ಪ್ರತಿಭಟನೆಯಿಂದ ಜನರು ಆಕ್ರೋಶಗೊಳ್ಳತೊಡಗಿದ್ದಾರೆ.

ಚಾಲಕರು, ಕ್ಲೀನರ್‍ಗಳು, ಹಮಾಲಿಗಳು, ಕಾರ್ಮಿಕರು, ಅವಲಂಬಿತರು ಅತಂತ್ರರಾಗಿದ್ದಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಲಾರಿ ಮಾಲೀಕರು ಕೂಡ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚಿಂತಿಸಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin