ಮುಂದೆ ಚಲಿಸುತ್ತಿದ್ದ ಲಾರಿಗೆ ಅಪ್ಪಳಿಸಿದ ಕ್ವಾಲೀಸ್ : ಒಂದೇ ಕುಟುಂಬದ ನಾಲ್ವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident

ಹೊಸಕೋಟೆ,ಸೆ.14-ಮುಂದೆ ಚಲಿಸುತ್ತಿದ್ದ ಲಾರಿ ಏಕಾಏಕಿ ರಸ್ತೆ ಮಧ್ಯೆ ಬ್ರೇಕ್ ಹಾಕಿದ ಪರಿಣಾಮ ಹಿಂದೆ ಬರುತ್ತಿದ್ದ ಕ್ವಾಲಿಸ್ ವಾಹನ ಲಾರಿಗೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಮೃತಪಟ್ಟಿರುವ ಘಟನೆ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಸಕೋಟೆಯ ಕಿಲಾರಿಪೇಟೆಯ ನಿವಾಸಿ ಕುಮಾರ್(36) ಇವರ ಪತ್ನಿ ರಾಜಲಕ್ಷ್ಮಿ(31) ಮತ್ತು ಮಕ್ಕಳಾದ ರಂಜಿತ(12), ಬಾಲಾಜಿ(8) ಮೃತ ದುರ್ದೈವಿಗಳು.   ಕುಮಾರ್ ಅವರು ಕ್ವಾಲಿಸ್ ವಾಹನವನ್ನು ಸ್ವಂತವಾಗಿಟ್ಟುಕೊಂಡು ಬಾಡಿಗೆಗೆ ಓಡಿಸುತ್ತಿದ್ದರು. ನಿನ್ನೆ ಪರಿಚಯಸ್ಥರೊಬ್ಬರ ಆರತಕ್ಷತೆ ಸಮಾರಂಭ ಇದ್ದುದ್ದರಿಂದ ಸಂಜೆ ಕುಟುಂಬ ಸಮೇತ 22 ಕಿ.ಮೀ ದೂರದ ಎಚ್.ಕ್ರಾಸ್ನಲ್ಲಿರುವ ಕಲ್ಯಾಣ ಮಂಟಪಕ್ಕೆ ತೆರಳಿದ್ದರು.

ಆರತಕ್ಷತೆ ಮುಗಿಸಿಕೊಂಡು ರಾತ್ರಿ 10.45ರಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ಹೊಸಕೋಟೆ ತಾಲ್ಲೂಕಿನ ಬೀಮಕನಹಳ್ಳಿ ಗೇಟ್ ಬಳಿ ಮುಂದೆ ಹೋಗುತ್ತಿದ್ದ ಲಾರಿ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಅತಿವೇಗವಾಗಿ ಬರುತ್ತಿದ್ದ ಇವರ ಕ್ವಾಲಿಸ್ ವಾಹನ ನಿಯಂತ್ರಣಕ್ಕೆ ಸಿಗದೆ ಲಾರಿಗೆ ಅಪ್ಪಳಿಸಿದ್ದರಿಂದ ನಾಲ್ವರು ಧಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.   ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ನಂದಗುಡಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಕ್ವಾಲಿಸ್ನಲ್ಲಿ ಸಿಕ್ಕಿಕೊಂಡಿದ್ದ ನಾಲ್ವರ ಶವಗಳನ್ನು ಹೊರತೆಗೆದು ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಲಾರಿ ಚಾಲಕನ ಅಚಾತುರ್ಯದಿಂದಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಚಾಲಕನಿಗಾಗಿ ತನಿಖೆ ಮುಂದುವರೆಸಿದ್ದಾರೆ.  ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು, ಸ್ನೇಹಿತರು, ಕಿಲಾರಿಪೇಟೆಯ ನಿವಾಸಿಗಳು ಕುಮಾರ್ ಅವರ ಮನೆ ಮುಂದೆ ಜಮಾಯಿಸಿ ರೋಧಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin