ಮುಂದೆ ಚಲಿಸುತ್ತಿದ್ದ ಲಾರಿಗೆ ಅಪ್ಪಳಿಸಿದ ಬೈಕ್, ಇಬ್ಬರು ಎಂಜಿನಿಯರ್‍ಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bagepalli-Accident

ಬಾಗೇಪಲ್ಲಿ,ಫೆ.3-ಹೈದರಾಬಾದ್‍ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿ ಚೆಕ್‍ಪೋಸ್ಟ್ ಬಳಿ ಏಕಾಏಕಿ ನಿಂತಿದ್ದರಿಂದ ಹಿಂದೆ ಬರುತ್ತಿದ್ದ ಬೈಕ್ ಲಾರಿಗೆ ಅಪ್ಪಳಿಸಿದ ಪರಿಣಾಮ ಯುವ ಎಂಜಿನಿಯರ್‍ಗಳಿಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಮೃತ ದುರ್ದೈವಿಗಳನ್ನು ಆಂಧ್ರಪ್ರದೇಶದ ನೆಲ್ಲೂರು ಮೂಲದ ಕಿರಣ್(26) ಮತ್ತು ಬಾಗೇಪಲ್ಲಿ ತಾಲ್ಲೂಕಿನ ಕಮಟಂಪಲ್ಲಿಯ ಸೋಮಶೇಖರ್(30) ಎಂದು ಗುರುತಿಸಲಾಗಿದೆ.  ಇವರಿಬ್ಬರು ಬೆಂಗಳೂರಿನ ಎಫ್‍ಇಎಸ್ ಕಂಪನಿಯಲ್ಲಿ ಎಂಜಿನಿಯರ್‍ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಂದು ಬೆಳಗ್ಗೆ 10 ಗಂಟೆ ಸಂದರ್ಭದಲ್ಲಿ ಇವರಿಬ್ಬರು ಬೈಕ್‍ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು.

ಹೈದರಾಬಾದ್‍ನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಬಾಗೇಪಲ್ಲಿ ಪಟ್ಟಣದ ಆದೇಪಲ್ಲಿ ಕ್ರಾಸ್‍ನಲ್ಲಿರುವ ಆರ್‍ಟಿಒ ಚೆಕ್‍ಪೆಪೋಸ್ಟ್ ಬಳಿ ತಿರುವು ಪಡೆಯುತ್ತಿದ್ದಂತೆ ಯಾವುದೇ ಇಂಡಿಕೇಟ್ ಹಾಕದೆ ಲಾರಿ ನಿಂತಿದ್ದರಿಂದ ಹಿಂದೆ ಬರುತ್ತಿದ್ದ ಇವರ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರಿಗೂ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ.   ಸುದ್ದಿ ತಿಳಿದ ಬಾಗೇಪಲ್ಲಿ ಪಟ್ಟಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin