ಮುಂಬೈ ದಾಳಿ : ಲಖ್ವಿ ಮತ್ತು ಇತರ 6 ಆರೋಪಿಗಳಿಗೆ ಪಾಕ್ ಕೋರ್ಟ್ ನೋಟಿಸ್
ಲಾಹೋರ್, ಸೆ.8-ಮುಂಬೈ ದಾಳಿ ಪ್ರಕರಣದ ರೂವಾರಿ ಲಷ್ಕರ್-ಇ-ತೊಯ್ಬಾ ಕಮಾಂಡರ್ ಝಾಕಿರ್ ರೆಹಮಾನ್ ಲಖ್ವಿ ಮತ್ತು ಇತರ ಆರು ಆರೋಪಿಗಳಿಗೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ನೋಟಿಸ್ಗಳನ್ನು ಜಾರಿಗೊಳಿಸಿದೆ. ಭಾರತೀಯ ಕರಾವಳಿ ತಲುಪಲು 10 ಎಲ್ಇಟಿ ಭಯೋತ್ಪಾದಕರಿಂದ ಬಳಸಲಾದ ದೋಣಿಯನ್ನು ಪರಿಶೀಲಿಸುವಂತೆ ಕೋರಲಾದ ಮನವಿಯೊಂದರ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಡಿಯಾಲ ಜೈಲ್ ರಾವಲ್ಪಿಂಡಿಯಲ್ಲಿ ಮುಂಬೈ ದಾಳಿ ಪ್ರಕರಣ ಕುರಿತು ವಿಚಾರಣೆ ನಡೆಸಿದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಲಿಖ್ವಿ ಸೇರಿದಂತೆ ಏಳು ಮಂದಿ ಶಂಕಿತರಿಗೆ ನೋಟಿಸ್ಗಳನ್ನು ಜಾರಿಗೊಳಿಸಿದೆ. ಬಂದರು ನಗರಿ ಕರಾಚಿಯಲ್ಲಿ ನಿಲುಗಡೆ ಮಾಡಲಾಗಿದ್ದ ಅಲ್-ಫೌಜ್ ದೋಣಿಯ ತಪಾಸಣೆ ಸಂಬಂಧ ವಾದಗಳನ್ನು ಮಂಡಿಸುವಂತೆ ಪ್ರಾಸಿಕ್ಯೂಷನ್ಗೆ ಕೋರ್ಟ್ ಸೂಚಿಸಿದೆ ಎಂದು ವಿಚಾರಣೆ ನಂತರ ನ್ಯಾಯಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನವೆಂಬರ್ 2008ರಂದು ಮುಂಬೈನಲ್ಲಿ ದಾಳಿ ನಡೆಸಲು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಾಗಿದ್ದ 10 ಮಂದಿ ಭಯೋತ್ಪಾದಕರು ಭಾರತದ ಕರಾವಳಿ ಪ್ರದೇಶ ತಲುಪಲು ಅಲ್-ಫೌಜ್ ದೋಣಿಯನ್ನು ಬಳಸಿದ್ದರು. ಈಗ ಈ ದೋಣಿಯ ಕರಾಚಿಯಲ್ಲಿ ಪಾಕ್ ಅಧಿಕಾರಿಗಳ ವಶದಲ್ಲಿದೆ. ಈ ಪ್ರಕರಣದ ಮುಂದಿನ ವಿಚಾರಣೆಯು ಸೆ.22ರಂದು ನಡೆಯಲಿದೆ.
► Follow us on – Facebook / Twitter / Google+