ಮುಖ್ಯಕಾರ್ಯದರ್ಶಿ ಅರವಿಂದ ಜಾದವ್ ಭೂ ಅಕ್ರಮ ಕುರಿತು ತನಿಖೆಗೆ ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Aravind-jadav

ಬೆಂಗಳೂರು, ಆ.23– ರಾಜ್ಯದ ಮುಖ್ಯಕಾರ್ಯದರ್ಶಿ ಅರವಿಂದ ಜಾದವ್ ಅವರ ಭೂ ಅಕ್ರಮ ಸಂಬಂಧ ಕೇಳಿಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.  ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಚಲನಚಿತ್ರರಂಗದ ಪ್ರಮುಖರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಆರೋಪಗಳ ಬಗ್ಗೆ ಮಾಹಿತಿ ನೀಡುವಂತೆ ನಾನು ಮುಖ್ಯಕಾರ್ಯದರ್ಶಿಯವರಿಗೆ ಸೂಚನೆ ನೀಡಿಲ್ಲ. ಆದರೆ, ಕಂದಾಯ ಇಲಾಖೆಯಿಂದ ವರದಿ ಕೇಳಿದ್ದೇನೆ ಎಂದು ಹೇಳಿದರು.
ಡಿಜಿಪಿ ಮಗನ ಮೇಲಿನ ಆರೋಪದ ಬಗ್ಗೆ ಮಾಹಿತಿ ಇಲ್ಲ:
ಡಿಜಿಪಿ ಓಂಪ್ರಕಾಶ್ ಅವರ ಪುತ್ರ ಕಾರ್ತಿಕ್ ಅವರ ಕಿರುಕುಳದಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸಿಎಂ ಪ್ರತಿಕ್ರಿಯಿಸಿದರು. ಮಾಗಡಿ ತಾಲ್ಲೂಕಿನ ರೈತ ಶಿವಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಸೋದರನ ಜತೆ ವಿವಾದವಿದ್ದು, ತಮ್ಮ ಸಹೋದರ ಡಿಜಿಪಿ ಓಂಪ್ರಕಾಶ್ ಪುತ್ರನ ಜತೆ ಗ್ರ್ಯಾನೈಟ್ ವ್ಯಾಪಾರದಲ್ಲಿ ಪಾಲುದಾರನಾಗಿದ್ದು, ಪ್ರಭಾವ ಬಳಸಿ ನನಗೆ ಪೊಲೀಸರ ಮೂಲಕ ಅನಗತ್ಯ ಕಿರುಕುಳ ಕೊಡುತ್ತಿದ್ದಾನೆ. ನಾನು ಎಷ್ಟೇ ದೂರು ನೀಡಿದರೂ ಅದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಬದಲಾಗಿ ನನ್ನ ಕುಟುಂಬದವರ ಮೇಲೆ ಕೇಸು ದಾಖಲಿಸಿದ್ದಾರೆ ಎಂದು ಶಿವಣ್ಣ ಆತ್ಮಹತ್ಯೆಗೂ ಮುನ್ನ ಆರೋಪಿಸಿದ್ದಾರೆ ಎಂದು ಹೇಳಲಾಗಿತ್ತು.
ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಝೀಕ ಪೀಡಿತ ಕ್ರೀಡಾಪಟುವಿಗೆ ಸರ್ಕಾರದ ಖರ್ಚಿನಲ್ಲಿ ಚಿಕಿತ್ಸೆ:
ರಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ತೆರಳಿದ್ದ ಸುಧಾಸಿಂಗ್ ಎಂಬ ಕ್ರೀಡಾಪಟು ಅವರಿಗೆ ಮಾರಕವಾದ ಸೋಂಕು ತಗುಲಿದ್ದು, ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಸಿಎಂ, ಅವರಿಗೆ ಸರ್ಕಾರದ ವೆಚ್ಚದಲ್ಲೇ ಸಂಪೂರ್ಣ ಚಿಕಿತ್ಸೆ ಕೊಡಿಸಲಾಗುವುದು. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರಲ್ಲದೆ. ಸ್ಥಳದಲ್ಲೇ ಇದ್ದ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಗೋವಿಂದರಾಜು ಅವರಿಗೆ ಕೂಡಲೇ ಹೋಗಿ ಈ ಕ್ರೀಡಾಪಟುವಿನ ಆರೋಗ್ಯ ವಿಚಾರಿಸಿ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಎಂದು ಸೂಚಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin