ಮುಖ್ಯಮಂತ್ರಿಗಳ ಸಭೆ ಮುಂದೂಡಿಕೆ, ಬಿಜೆಪಿಗೆ ಎದುರಾದ ಮಹದಾಯಿ ಸವಾಲು
ಬೆಂಗಳೂರು,ಅ.20-ಕಾವೇರಿ ನದಿ ನೀರು ಹಂಚಿಕೆ ವೇಳೆ ಕೊನೆ ಕ್ಷಣದಲ್ಲಿ ಮುಖ ಉಳಿಸಿಕೊಂಡಿದ್ದ ಬಿಜೆಪಿಗೆ ಮಹದಾಯಿ ವಿವಾದದಲ್ಲಿ ಮತ್ತೆ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಎದುರಾಗಿದೆ. ನಾಳೆ ನಡೆಯಬೇಕಾಗಿದ್ದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ದಿಢೀರನೆ ರದ್ದಾಗಿದೆ. ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಫರ್ಸೇಕರ್ ಕೊನೆ ಕ್ಷಣದಲ್ಲಿ ಅನಾರೋಗ್ಯದ ಕಾರಣ ನೀಡಿದ್ದರಿಂದ ಸಭೆಯನ್ನು ಮುಂದೂಡಲಾಯಿತು. ಲಕ್ಷ್ಮೀಕಾಂತ್ ಫರ್ಸೇಕರ್ ಅನಾರೋಗ್ಯ ಪೀಡಿತರಾಗಿದ್ದಾರೆ ಎಂಬುದನ್ನು ಒಪ್ಪಿಕೊಂಡರೂ ಮೇಲ್ನೋಟಕ್ಕೆ ಇದು ರಾಜಕೀಯ ಮೇಲಾಟ ಎಂಬುದರಲ್ಲಿ ಎರಡು ಮಾತಿಲ್ಲ. ಮುಂದಿನ ವರ್ಷ ಗೋವಾ ವಿಧಾನಸಭೆ ನಡೆಯುತ್ತದೆ.
ಒಂದು ವೇಳೆ ಮಹದಾಯಿ ನದಿಯಿಂದ ಕರ್ನಾಟಕಕ್ಕೆ ತಾತ್ಕಾಲಿಕವಾಗಿ 3 ಇಲ್ಲವೆ 4 ಟಿಎಂಸಿ ನೀರು ಹರಿಸಲು ಪರ್ಸೇಕರ್ ಒಪ್ಪಿಕೊಂಡರೆ ಅಲ್ಲಿನ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಈ ವಿಷಯವೇ ಪ್ರಮುಖ ಅಸ್ತ್ರವಾಗಲಿದೆ. ನಾಳೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ವಿರುದ್ದ ಕಾಂಗ್ರೆಸ್ ಈ ಅಸ್ತ್ರವನ್ನೇ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಪ್ರಚಾರ ನಡೆಸಿದರೆ ಕಮಲ ಮಹದಾಯಿಯಲ್ಲಿ ಕೊಚ್ಚಿ ಹೋಗಬಹುದು ಎಂಬ ಭೀತಿಯಿಂದ ಕೊನೆ ಕ್ಷಣದಲ್ಲಿ ಸಭೆಗೆ ಭಾಗವಹಿಸದೆ ಅನಾರೋಗ್ಯದ ಕಾರಣ ನೀಡಿದ್ದಾರೆ ಎಂಬುದು ಬಿಜೆಪಿ ಮೂಲಗಳ ಉಲ್ಲೇಖ.
ರಾಜ್ಯದ ಜನತೆಯನ್ನು ಎದುರು ಹಾಕಿಕೊಂಡರೆ ಪಕ್ಷಕ್ಕೆ ಮುಳುಗಡೆಯಾಗಬಹುದು, ಅಲ್ಲದೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಜೊತೆ ಚರ್ಚಿಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದೆಂಬ ಕಾರಣಕ್ಕಾಗಿ ಸಭೆಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ಕೆಲ ದಿನಗಳ ಹಿಂದೆ ಗೋವಾದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಯಾವುದೇ ಕಾರಣಕ್ಕೂ ಮಹದಾಯಿ ನದಿಯಿಂದ ಒಂದೇ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಹರಿಸಲು ಒಪ್ಪಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಅಲ್ಲಿನ ವಿಧಾನಸಭೆಯ ಪ್ರತಿಪಕ್ಷದ ನಾಯಕ ನಾರಾಯಣ ರಾಣೇ ಎಚ್ಚರಿಕೆ ನೀಡಿದ್ದರು.
ವಿವಾದ ಬಿಜೆಪಿ ಹೆಗಲಿಗೆ:
ಕಳೆದ ವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಕೇಂದ್ರ ಸಚಿವ ಅನಂತಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ ಭೇಟಿ ಮಾಡಿ ವಿವಾದವನ್ನು ಮಾತುಕತೆ ಮೂಲಕವೇ ಪರಿಹರಿಸುವಂತೆ ಮನವಿ ಮಾಡಿದ್ದರು. ವಾಸ್ತವವಾಗಿ ಮಹದಾಯಿ ಕುಡಿಯುವ ನೀರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದೇ ಗೋವಾ. ಅಲ್ಲಿನ ಮುಖ್ಯಮಂತ್ರಿ ಹಾಗೂ ರಕ್ಷಣಾ ಸಚಿವರನ್ನು ಮನವೊಲಿಸಿದರೆ ಯೋಜನೆ ತನ್ನಿಂದ ತಾನೇ ಸೌಹಾರ್ದಯುತವಾಗಿ ಬಗೆಹರಿಯುತ್ತದೆ. ಆದರೆ ಪರಿಕ್ಕರ್ ಅವರನ್ನು ಎದುರು ಹಾಕಿಕೊಳ್ಳಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ನೀರು ಬಿಡಲು ಒಪ್ಪಿಕೊಂಡರೆ ರಾಜ್ಯದ ಜನತೆಯ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಅಳಕು ಸ್ಥಳೀಯ ನಾಯಕರದ್ದು. ವಿದೇಶಿ ಪ್ರವಾಸದಲ್ಲಿರುವ ಅನಂತಕುಮಾರ್ ರಾಜ್ಯಕ್ಕೆ ಆಗಮಿಸಿದ ನಂತರ ಪುನಃ ಗೋವಾ ಮುಖ್ಯಮಂತ್ರಿ ಹಾಗೂ ಪರಿಕ್ಕರ್ ಅವರನ್ನು ಭೇಟಿಯಾಗಿ ಮನವೊಲಿಸಲಿದ್ದು ಹೊಣೆಗಾರಿಕೆ ಬಿಜೆಪಿ ಮೇಲಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕಾದರೆ ಇದು ಅನಿವಾರ್ಯವೂ ಹೌದು. ಈಗಾಗಲೇ ಉತ್ತರ ಕರ್ನಾಟಕ ಜನತೆಯ ಕೆಂಗೆಣ್ಣಿಗೆ ಗುರಿಯಾಗಿರುವ ಬಿಜೆಪಿ ನಾಯಕರು ಈ ಸಮಸ್ಯೆಯನ್ನು ಪರಿಹರಿಸಲೇಬೇಕು. ಈ ಹಿಂದೆ ಪರಿಕ್ಕರ್ ರಾಜೀನಾಮೆ ನೀಡಿದ ವೇಳೆ ಅಲ್ಲಿನ ಮುಖ್ಯಮಂತ್ರಿ ಆಯ್ಕೆ ದೊಡ್ಡ ವಿವಾದವಾಗಿತ್ತು. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೆಗಲಿಗೆ ಇದನ್ನು ಕೇಂದ್ರ ವರಿಷ್ಠರು ಹಾಕಿದ್ದರು.
ಇದೀಗ ಯಡಿಯೂರಪ್ಪನ ಜೊತೆ ಪರ್ಸೇಕರ್ ಆತ್ಮೀಯ ಒಡನಾಟ ಹೊಂದಿದ್ದಾರೆ. ಒಂದೆಡೆ ಪರಿಕ್ಕರ್ ಜೊತೆ ಅನಂತ್ಕುಮಾರ್ ಸಂಬಂಧವೂ ಸುಮಧುರವಾಗಿದೆ. ರಾಜ್ಯ ಬಿಜೆಪಿ ನಾಯಕರು ತಮ್ಮ ಆಂತರಿಕ ಕಚ್ಚಾಟವನ್ನು ಬಿಟ್ಟು ಅತ್ಯಾಮೂಲ್ಯವಾದ ಮಹದಾಯಿ ಯೋಜನೆಯನ್ನು ಅನುಷ್ಠಾನ ಮಾಡಲು ಮುಂದಾಗದಿದ್ದರೆ ರಾಜ್ಯದ ಜನತೆಯ ಕೆಂಗೆಣ್ಣಿಗೆ ಗುರಿಯಾಗುವುದು ಖಚಿತ.
► Follow us on – Facebook / Twitter / Google+