ಮುಖ್ಯಮಂತ್ರಿ ನಿವಾಸಗಳ ಬಳಿ ವಿಕಲಚೇತನರ ಓಡಾಟಕ್ಕೆ ಸೌಲಭ್ಯದ ಕೊರತೆ

ಈ ಸುದ್ದಿಯನ್ನು ಶೇರ್ ಮಾಡಿ

Handicap--03

ಬೆಂಗಳೂರು, ಅ.3- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿ ಮತ್ತು ಗೃಹ ಕಚೇರಿ ಕೃಷ್ಣಾದಲ್ಲಿ ವಿಕಲಚೇತನರ ಓಡಾಟಕ್ಕೆ ಸೂಕ್ತ ಸೌಲಭ್ಯಗಳಿಲ್ಲದೆ ತೊಂದರೆಯಾಗುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ರಾಜ್ಯದ ನಾನಾ ಭಾಗಗಳಿಂದ ಪ್ರತೀ ದಿನ ಹತ್ತಾರು ಮಂದಿ ವಿಕಲಚೇತನರು ಬರುತ್ತಾರೆ. ಉದ್ಯೋಗ, ಆರ್ಥಿಕ ಸಹಾಯ ಸೇರಿದಂತೆ ಹಲವಾರು ಸಮಸ್ಯೆಗಳೊಂದಿಗೆ ಬರುವ ವಿಕಲಚೇತನರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಬೇಕಾದರೆ ಹರಸಾಹಸ ಪಡಬೇಕಾಗಿದೆ.

ದೂರದೂರಿನಿಂದ ಬರುವವರು ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಆಟೋದಲ್ಲಿ ಸಿಎಂ ಮನೆ ಬಳಿಗೆ ಬರಬೇಕು. ರಸ್ತೆಯಿಂದ ಮುಖ್ಯಮಂತ್ರಿಯವರ ಮನೆ ಬಳಿಗೆ  ನಡೆದು ಹೋಗಲು  ಪರದಾಡುವ ಸನ್ನಿವೇಶವಿದೆ. ಗಾಲಿ ಕುರ್ಚಿಗಳಾಗಲಿ, ಸಹಾಯ ಮಾಡುವ ಸಿಬ್ಬಂದಿಗಳು ಇಲ್ಲದೇ ಇರುವುದರಿಂದ ಪ್ರತೀ ದಿನ ವಿಕಲಚೇತನರ ಪಾಡು ಆ ದೇವರಿಗೆ ಪ್ರೀತಿ. ಇಂದು ಅಂತಹದ್ದೇ ಒಂದು ಕರುಣಾಜನಕ ಘಟನೆ ನಡೆದಿದೆ.

ಮುತ್ತಣ್ಣ ಎಂಬ ಚಾಮರಾಜನಗರದ ವ್ಯಕ್ತಿ ಮಗಳ ಮದುವೆಗಾಗಿ ನೆರವು ನೀಡುವಂತೆ ಕೇಳಲು ಮೂರು ದಿನಗಳಿಂದ ಮುಖ್ಯಮಂತ್ರಿ ಮನೆಗೆ ಎಡತಾಕಿದ್ದಾರೆ.  ಭಾನುವಾರ ರಜಾದಿನವಾಗಿದ್ದರಿಂದ ಮೆಜೆಸ್ಟಿಕ್‍ನಿಂದ ಸಿಎಂ ನಿವಾಸದವರೆಗೆ ಆಟೋಗೆ 300ರೂ. ಖರ್ಚು ಮಾಡಿ ಬಂದಿದ್ದು, ಅಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ.

ನಿನ್ನೆಯೂ ಮುತ್ತಣ್ಣ ಇಲ್ಲಿಗೆ ಬಂದಿದ್ದರು. ಅನಾರೋಗ್ಯದಿಂದಾಗಿ ಸಿಎಂ ಯಾರನ್ನೂ ಭೇಟಿ ಮಾಡಲಿಲ್ಲ. ನಿನ್ನೆ ಮೈಸೂರಿನ ಸ್ನೇಹಿತರ ಮನೆಯಲ್ಲಿ ತಂಗಿದ್ದ ಮುತ್ತಣ್ಣ ಇಂದು ಮುಂಜಾನೆ 4 ಗಂಟೆಗೆ ಎದ್ದು ಬೆಂಗಳೂರಿಗೆ ಬಂದು ಮೆಜೆಸ್ಟಿಕ್‍ನಿಂದ ಮತ್ತೆ 600ರೂ. ಖರ್ಚು ಮಾಡಿಕೊಂಡು ಮುಖ್ಯಮಂತ್ರಿ ಅವರ ಮನೆಗೆ ಬಂದಿದ್ದರು.

ಸಿಎಂ ಮನೆ ಎದುರು ಆಟೋ ಇಳಿದ ಮುತ್ತಣ್ಣ ನಡೆದು ಹೋಗಲು ಪರದಾಡುತ್ತಿದ್ದರು. ಎರಡು ಕಾಲು ಸ್ವಾಧೀನ ಕಳೆದುಕೊಂಡು ಮೊಣಕಾಲಿನಲ್ಲಿ ತೆರಳುತ್ತಿದ್ದ ಅವರ ಕಷ್ಟ ನೋಡಲಾಗದೆ ಪೊಲೀಸ್ ಸಿಬ್ಬಂದಿಗಳು ನೆರವಾದರು. ಬೈಕ್‍ನಲ್ಲಿ ಕೂರಿಸಿಕೊಂಡು ಸಿಎಂ ಮನೆಯವರೆಗೆ ಮುತ್ತಣ್ಣ ಅವರನ್ನು ಕರೆದುಕೊಂಡು ಹೋಗಲಾಯಿತು. ಕೊನೆಗೂ ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಮುತ್ತಣ್ಣ ಮಗಳ ಮದುವೆಗೆ ನೆರವು ನೀಡುವಂತೆ ಮನವಿ ಮಾಡಿದರು. ಅದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದರು.

ಪ್ರತೀ ದಿನ ಮುಖ್ಯಮಂತ್ರಿ ಅವರ ಮನೆ ಬಳಿ ಬರುವ ವಿಕಲಚೇತನರ ಪಾಡು ಇದೇ ರೀತಿಯಾಗಿದೆ. ಗಾಲಿ ಕುರ್ಚಿಗಳಾಗಲಿ ಅಥವಾ ವಿಕಲಚೇತನರ ಸಾಗಾಟಕ್ಕೆ ಅನುಕೂಲವಾಗುವ ಉಪಕರಣಗಳು ಸಿಎಂ ಅವರ ಮನೆ ಬಳಿ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.

Facebook Comments

Sri Raghav

Admin