ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದ ಮುಂದೆ ಜನ ಜಂಗುಳಿ

ಈ ಸುದ್ದಿಯನ್ನು ಶೇರ್ ಮಾಡಿ

Siddaram

ಬೆಂಗಳೂರು, ಆ.19- ನಿಗಮ ಮಂಡಳಿಗಳ ನೇಮಕಾತಿಗೆ ಚಾಲನೆ ದೊರೆಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಬಳಿ ಜನ ಜಂಗಳಿಯೇ ನೆರೆದಿತ್ತು. ಜನತಾ ದರ್ಶನದ ಮಾದರಿಯಲ್ಲಿ ಜನ ಆಗಮಿಸಿದ್ದು, ಬಹುತೇಕ ಮಂದಿ ನಿಗಮ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಕಾಂಕ್ಷಿಗಳಾಗಿದ್ದರು. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಮತ್ತು ರಾಜೀವ್ಗಾಂಧಿ ಎದೆರೋಗಗಳ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು. ಇದು ಆಂತರಿಕ ಸಭೆ ಆಗಿದ್ದು, ಯಾರಿಗೂ ಪ್ರವೇಶ ಇಲ್ಲ ಎಂದು ಹೇಳಿದ್ದರೂ ಕೂಡ ಲೆಕ್ಕಿಸದೆ ಕಾರ್ಯಕರ್ತರು, ಮುಖಂಡರು ಸಿಎಂ ಕಚೇರಿಗೆ ದಾಂಗುಡಿ ಇಟ್ಟರು.

ಸಭೆ ಮುಗಿಸಿ ಸಿಎಂ ಹೊರ ಬರುತ್ತಿದ್ದಂತೆ ಜನ ಅರ್ಜಿಗಳ ಮಹಾಪೂರವನ್ನೇ ಹಿಡಿದು ಮುಗಿ ಬಿದ್ದರು. ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ನಗರಸಭೆ ಮತ್ತು ಪುರಸಭೆಗಳ ಗುತ್ತಿಗೆ ಕಾರ್ಮಿಕರ ಮಹಾಸಂಘ ಆಯೋಜಿಸಿದ್ದ ರಾಜ್ಯಮಟ್ಟದ ಪೌರಕಾರ್ಮಿಕರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಕಾರ್ಯಕರ್ತರು ಹಾಗೂ ಮುಖಂಡರು ದಾರಿ ಬಿಡದೆ ಅರ್ಜಿ ಕೊಡಲು ಆರಂಭಿಸಿದ್ದರಿಂದ ಸುಮಾರು 1 ಗಂಟೆ ತಡವಾಗಿ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದರು.  ಗೃಹ ಕಚೇರಿ ಕೃಷ್ಣ ಮುಂಭಾಗದ ರಸ್ತೆಯುದ್ದಕ್ಕೂ ಖಾಸಗಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು.  ನಿಗಮ ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಇದೇ 25ರಂದು ದೆಹಲಿಗೆ ಭೇಟಿ ನೀಡುವ ಕಾರ್ಯಕ್ರಮ ಇದೆ. ಈಗಾಗಲೇ ಮೊದಲ ಅವಧಿಗೆ ನೇಮಕವಾಗಿದ್ದ ಅಧಿಕಾರವಧಿ ನಾಳೆಗೆ ಅಂತ್ಯಗೊಳ್ಳುತ್ತಿದೆ. ಹೊಸ ನೇಮಕಾತಿಗಳಿಗೆ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಮೇಲೆ ಪ್ರಭಾವ ಬೀರಲು ಬಹಳಷ್ಟು ಜನ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವರು ತಮ್ಮ ಗಾಡ್ ಫಾದರ್ ನಾಯಕರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಒಟ್ಟಿನಲ್ಲಿ ನಿಗಮ ಮಂಡಳಿಗಳ ನೇಮಕಾತಿಯ ತಲೆನೋವು ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.