ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ದಾಖಲೆ..!

ಈ ಸುದ್ದಿಯನ್ನು ಶೇರ್ ಮಾಡಿ

CM-MNReddy--01

ಬೆಂಗಳೂರು, ಜು.22- ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಐದು ಮಂದಿ ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಬದಲಾವಣೆ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇತ್ತೀಚೆಗಷ್ಟೇ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಎಂ.ಎನ್.ರೆಡ್ಡಿ ವರ್ಗಾವಣೆಯಿಂದ ಹಿಡಿದು ನಾಲ್ಕು ವರ್ಷಗಳಲ್ಲಿ ಬರೊಬ್ಬರಿ ಐದು ಮಂದಿಯನ್ನು ಈ ವಿಭಾಗದಿಂದ ಎತ್ತಂಗಡಿ ಮಾಡಿ ಇತಿಹಾಸ ಬರೆದಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಯಾವುದೇ ಒಬ್ಬ ಮುಖ್ಯಮಂತ್ರಿ ನಾಲ್ಕು ವರ್ಷ ಅವಧಿಯಲ್ಲಿ ಐದು ಮಂದಿ ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ವರ್ಗಾವಣೆ ಮಾಡಿದ ನಿದರ್ಶನವಿಲ್ಲ.

ಸಾಮಾನ್ಯವಾಗಿ ರಾಜ್ಯದ ಪ್ರತಿಯೊಂದು ಮಾಹಿತಿಗಳು, ಆಗು- ಹೋಗುಗಳ ಬಗ್ಗೆ ಗುಪ್ತಚರ ವಿಭಾಗದ ಮುಖ್ಯಸ್ಥರು ಕಲೆಹಾಕಿ ಸರ್ಕಾರಕ್ಕೆ ದಿನಂಪ್ರತಿ ಮಾಹಿತಿ ನೀಡುತ್ತಾರೆ.  ಮುಖ್ಯಮಂತ್ರಿಯವರು ತಮ್ಮ ಕುಟುಂಬದ ಸದಸ್ಯರ ಜತೆ ಒಂದು ದಿನ ಮಾತನಾಡದಿದ್ದರೂ ಗುಪ್ತಚರ ವಿಭಾಗದ ಮುಖ್ಯಸ್ಥರ ಜತೆ ಮಾತನಾಡದೇ ಇರುವ ದಿನಗಳೇ ಇರುವುದಿಲ್ಲ.

ಆ ದಿನದ ನಡೆದಿರುವ ಎಲ್ಲಾ ಮಾಹಿತಿಗಳು, ಮುಂದೆ ನಡೆಯುವ ಘಟನಾವಳಿಗಳ ಬಗ್ಗೆ ಸರ್ಕಾರದ ಮುಖ್ಯಸ್ಥರಿಗೆ ಇಂಚಿಂಚು ಮಾಹಿತಿ ನೀಡಬೇಕು.
ಗುಪ್ತಚರ ವಿಭಾಗ ಎಷ್ಟು ಭದ್ರವಾಗಿರುತ್ತದೋ ಸರ್ಕಾರ ಕೂಡ ಅಷ್ಟೇ ಸುಭದ್ರವಾಗಿರುತ್ತದೆ. ಒಂದು ವೇಳೆ ಈ ವಿಭಾಗದಲ್ಲಿ ಒಂದಿಷ್ಟು ಸಣ್ಣಪುಟ್ಟ ವ್ಯತ್ಯಾಸಗಳಾದರೆ ಸರ್ಕಾರಕ್ಕೆ ಗಂಡಾಂತರ ತಪ್ಪಿದ್ದಲ್ಲ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮುಗಲಭೆ, ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನ ಇಬ್ಬರು ಅಧಿಕಾರಿಗಳ ನಡುವೆ ನಡೆದ ಜಟಾಪಟಿ ಸೇರಿದಂತೆ ಕೆಲವು ಕಾರಣಗಳಿಂದ ಗುಪ್ತಚರ ವಿಭಾಗದ ಎಂ.ಎನ್.ರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಯಿತು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಗೋಪಾಲ್ ಬಿ.ಹೊಸೂರು, ಅಶಿತ್ ಮೋಹನ್ ಪ್ರಸಾದ್, ಸೌಮೇಂದ್ರಮುಖರ್ಜಿ ಮತ್ತು ಬಿ.ದಯಾನಂದ ಅವರಂತಹ ದಕ್ಷ ಅಧಿಕಾರಿಗಳನ್ನು ವಿನಾಕಾರಣ ವರ್ಗಾವಣೆ ಮಾಡಲಾಯಿತು. ಗೋಪಾಲ್ ಬಿ.ಹೊಸೂರ್ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ವಿಭಾಗಕ್ಕೆ ನೇಮಕವಾಗಿದ್ದರು. ಸಿದ್ದರಾಮಯ್ಯ ಅವರು ಬಂದ ನಂತರ ಯಾವ ಕಾರಣವಿಲ್ಲದೆ ಅವರನ್ನು ವರ್ಗಾಯಿಸಿದರು.

ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದ ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗುಪ್ತಚರದ ಮುಖ್ಯಸ್ಥರಾಗಿದ್ದ ಸೌಮೇಂದ್ರಮುಖರ್ಜಿ ಮತ್ತು ಬಿ.ದಯಾನಂದ ಅವರನ್ನು ವಿನಾಕಾರಣ ತಲೆದಂಡ ಮಾಡಲಾಯಿತು. ಹೀಗೆ ಒಟ್ಟು ಐವರು ಗುಪ್ತಚರ ವಿಭಾಗದ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಸಿದ್ದರಾಮಯ್ಯ ಇತಿಹಾಸ ಬರೆದಿದ್ದಾರೆ.

ಸರ್ಕಾರದ ಹಸ್ತಕ್ಷೇಪವೂ ಕಾರಣ:

ಸಾಮಾನ್ಯವಾಗಿ ಗುಪ್ತಚರ ವಿಭಾಗದ ಮುಖ್ಯಸ್ಥರು ಸ್ವತಂತ್ರವಾಗಿ ಕೆಲಸ ಮಾಡಲು ಯಾವುದೇ ಸರ್ಕಾರ ಬಿಡುವುದಿಲ್ಲ. ಮುಖ್ಯಮಂತ್ರಿಗಳ ಹಿಂಬಾಲಕರು ಇಲ್ಲವೇ ಕೆಲ ಅಧಿಕಾರಿಗಳು ಅವರ ವಿರುದ್ಧ ಪಿತೂರಿ ನಡೆಸುತ್ತಲೇ ಇರುತ್ತಾರೆ. ರಾಜ್ಯದ ಯಾವುದೇ ಭಾಗದಲ್ಲಿ ಸಣ್ಣಪುಟ್ಟ ಘಟನೆಗಳಿಗೂ ನೇರವಾಗಿ ಇವರನ್ನೇ ಗುರಿಯಾಗಿಸುವುದು ಈವರೆಗೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.  ಭಯೋತ್ಪಾದನಾ ಚಟುವಟಿಕೆಗಳು, ನಕ್ಸಲರ ಹಾವಳಿ, ಕೋಮುಗಲಭೆ ಸೇರಿದಂತೆ ಸಣ್ಣಪುಟ್ಟ ಘಟನೆಗಳಿಗೆ ಇಂತಹವರನ್ನೇ ಗುರಿಯಾಗಿಟ್ಟುಕೊಂಡು ವರ್ಗಾವಣೆ ಮಾಡುವುದು ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin