ಮುಷ್ಕರಕ್ಕೆ ಬ್ರೇಕ್ ಹಾಕಲು ಎಸ್ಮಾ ಜಾರಿ : ಕಸವಿಲೇವಾರಿ ಆರಂಭ
ಬೆಂಗಳೂರು, ಸೆ.24- ರಾಜ್ಯಸರ್ಕಾರದ ಎಸ್ಮಾ ಗುಮ್ಮಕ್ಕೆ ಬೆದರಿರುವ ಪೌರಕಾರ್ಮಿಕರು ಇಂದಿನಿಂದ ಕಸ ತೆಗೆಯಲು ತೀರ್ಮಾನಿಸಿರುವುದರಿಂದ ಕಸ ವಿಲೇವಾರಿ ಕಾರ್ಯ ಸುಗಮವಾಗಿದೆ. ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಲು ತೀರ್ಮಾನಿಸಿದ್ದ ಬಿಬಿಎಂಪಿ ನಿರ್ಧಾರ ಖಂಡಿಸಿ ಕೆಲ ಗುತ್ತಿಗೆದಾರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದರು.
ಪೌರಕಾರ್ಮಿಕರು ಕಸ ತೆಗೆಯದಿರಲು ತೀರ್ಮಾನಿಸಿದ್ದರೆ ದಸರಾ ಸಂದರ್ಭದಲ್ಲಿ ಸಂಗ್ರಹವಾಗುತ್ತಿದ್ದ ರಾಶಿ ರಾಶಿ ಕಸ ರಸ್ತೆಯಲ್ಲೇ ಕೊಳೆಯುವ ಸಾಧ್ಯತೆ ಇತ್ತು. ಹವಾಮಾನ ಇಲಾಖೆಯ ಹೇಳಿಕೆಯಂತೆ ಭಾರೀ ಮಳೆಯಾಗಿದ್ದರೆ ನೀರಿನಲ್ಲಿ ಕಸ ಕೊಳೆತು ಸಾಂಕ್ರಾಮಿಕ ರೋಗ ಉಲ್ಬಣಿಸುವ ಸಾಧ್ಯತೆ ಇತ್ತು.
ಇದನ್ನು ಮನಗಂಡ ಸರ್ಕಾರ ಸಕಾಲಕ್ಕೆ ಎಚ್ಚೆತ್ತುಕೊಂಡು ಪೌರಕಾರ್ಮಿಕರು, ಗುತ್ತಿಗೆದಾರರ ವಿರುದ್ಧ ಎಸ್ಮಾ ಬ್ರಹ್ಮಾಸ್ತ್ರ ಪ್ರಯೋಗಿಸಿತ್ತು. ಸರ್ಕಾರದ ಈ ನಿರ್ಧಾರ ಯಶಸ್ವಿಯಾಗಿದ್ದು, ಎಸ್ಮಾ ಗುಮ್ಮಕ್ಕೆ ಬೆದರಿದ ಪೌರಕಾರ್ಮಿಕರು ಇಂದಿನಿಂದ ಕಸ ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಸರ್ಕಾರದ ಈ ನಿರ್ಧಾರ ಕಸ ವಿಲೇವಾರಿ ಗುತ್ತಿಗೆದಾರರಿಗೆ ತಿರುಗುಬಾಣವಾಗಿದ್ದು, ಅನಿವಾರ್ಯವಾಗಿ ಕಸ ವಿಲೇವಾರಿಗೆ ಸಹಕರಿಸಲೇಬೇಕಾಗಿದೆ.
ಏನಿದು ಎಸ್ಮಾ?
ಬಿಬಿಎಂಪಿ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ, ನೈರ್ಮಲ್ಯಕಾಪಾಡುವುದು, ತಾತ್ಕಾಲಿಕ, ಗುತ್ತಿಗೆ ಹಾಗೂ ಖಾಯಂ ಪೌರಕಾರ್ಮಿಕರನ್ನು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ವ್ಯಾಪ್ತಿಗೆ ಒಳಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಎಸ್ಮಾ ಕಾಯ್ದೆ ಜಾರಿಯಿಂದ ಇನ್ನು ಮುಂದೆ ಪಾಲಿಕೆ ವ್ಯಾಪ್ತಿಯ ಪೌರಕಾರ್ಮಿಕರು, ಗುತ್ತಿಗೆದಾರರು ಮುಂದಿನ ಒಂದು ವರ್ಷದವರೆಗೆ ಯಾವುದೇ ಮುಷ್ಕರ ನಡೆಸುವಂತಿಲ್ಲ. ಈ ಕಾಯ್ದೆ ವ್ಯಾಪ್ತಿಗೆ ಪೌರಕಾರ್ಮಿಕರು, ಆಟೋ ಸಹಾಯಕರು, ಕಾಂಪ್ಯಾಕ್ಟರ್ ಲೋಡರ್ಗಳು, ಚಾಲಕರು ಒಳಪಟ್ಟಿರುತ್ತಾರೆ. ಹೀಗಾಗಿ ಇನ್ನು ಮುಂದೆ ಪೌರಕಾರ್ಮಿಕರು ಮುಷ್ಕರ ನಡೆಸುವಂತಿಲ್ಲ.
ಒಂದು ವೇಳೆ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಪ್ರತಿಭಟನೆ ನಡೆಸಿದರೆ ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯಲ್ಲಿ ಎಚ್ಚರಿಕೆ ನೀಡಿದೆ.
ನಿರಂತರ ಸಭೆ:
ನಗರದಲ್ಲಿರುವ ಕಸ ವಿಲೇವಾರಿ ಘಟಕಗಳನ್ನು ಬಂದ್ ಮಾಡುತ್ತಿರುವುದರಿಂದ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೇವಲ ಒಂದೋ, ಎರಡೋ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ನಗರದ ಕಸವನ್ನು ಆ ಘಟಕಗಳಿಗೆ ಸಾಗಿಸಲು ಲಾರಿಗಳು ಕಿಲೋಮೀಟರ್ಗಟ್ಟಲೆ ಸಂಚರಿಸಬೇಕಾಗಿತ್ತು. ಪೌರಕಾರ್ಮಿಕರಿಗೆ ಬಿಬಿಎಂಪಿಯೇ ನೇರವಾಗಿ ವೇತನ ಪಾವತಿಸುವುದನ್ನು ಸಹಿಸದ ಗುತ್ತಿಗೆದಾರರು ಘಟಕಗಳು ಮುಚ್ಚಿರುವುದನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡು ಕಸವಿಲೇವಾರಿ ಕಾರ್ಯ ಸ್ಥಗಿತಗೊಳಿಸಲು ಆಗ್ರಹಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದರು.
ಸಮರ್ಪಕವಾಗಿ ಕಸವಿಲೇವಾರಿಯಾಗದಿದ್ದರೆ ಉಂಟಾಗಬಹುದಾದ ಸಮಸ್ಯೆಯ ಅರಿವಿದ್ದ ಮೇಯರ್ ಜಿ.ಪದ್ಮಾವತಿ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಗುತ್ತಿಗೆದಾರರೊಂದಿಗೆ ನಿರಂತರವಾಗಿ ಸಭೆ ನಡೆಸುತ್ತಿದ್ದರು.
ಆದರೆ ಗುತ್ತಿಗೆದಾರರು ತಮ್ಮ ಪಟ್ಟು ಸಡಿಲಿಸದೆ ಯಾವುದೇ ಕಾರಣಕ್ಕೂ ನಿಮ್ಮ ಕಸವನ್ನು ತೆಗೆಯುವುದಿಲ್ಲ ಎಂದು ಪತ್ರ ಬರೆದುಕೊಟ್ಟಿದ್ದರು. ಗುತ್ತಿಗೆದಾರರ ಈ ದಬ್ಬಾಳಿಕೆ ನಿರ್ಧಾರವನ್ನು ಕೆ.ಜೆ.ಜಾರ್ಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಸಿದ್ದರಾಮಯ್ಯ ಅವರು ಎಸ್ಮಾ ಕಾಯ್ದೆ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಇದೀಗ ಎಸ್ಮಾ ಜಾರಿಯಿಂದ ಎಚ್ಚೆತ್ತುಕೊಂಡಿರುವ ಪೌರಕಾರ್ಮಿಕರು ಇಂದಿನಿಂದ ಕಸ ವಿಲೇವಾರಿ ಮಾಡಲು ಮುಂದಾಗಿದ್ದಾರೆ.