ಮುಸ್ಲಿಂ ಸಮುದಾಯದ ಬಹುಪತ್ನಿತ್ವ ಸಿಂಧುತ್ವ ಮರುಪರಿಶೀಲನೆಗೆ ಸುಪ್ರೀಂ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Muslim--01

ನವದೆಹಲಿ, ಮಾ.26- ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ಬಹು ಪತ್ನಿತ್ವ ಹಾಗೂ ನಿಖಾ ಹಲಾಲ ಆಚರಣೆಯ ಸಾಂವಿಧಾನಿಕ ಸಿಂಧುತ್ವವನ್ನು ಮರು ಪರಿಶೀಲನೆ ಮಾಡಲು ಸುಪ್ರೀಂಕೋರ್ಟ್ ಇಂದು ಸಮ್ಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಬಹು ಪತ್ನಿತ್ವ ಹಾಗೂ ನಿಖಾ ಹಲಾಲ ಆಚರಣೆಯ ಕಾನೂನು ಮಾನ್ಯತೆ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ಸುಪ್ರೀಂಕೋರ್ಟ್ ಇಂದು ಹೇಳಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಈ ಪ್ರಕರಣದ ವಿಚಾರಣೆ ಮುಂದುವರೆಸಿದ ಸುಪ್ರೀಂ ಕೋರ್ಟ್‍ನ ಪೀಠ 2017ರಲ್ಲಿ ಹಿಂದಿನ ಪಂಚ ನ್ಯಾಯಾಧೀಶರ ಪೀಠ ನೀಡಿದ್ದ ತೀರ್ಪನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಮ್ಮತಿಸಿದೆ. ನ್ಯಾಯಮೂರ್ತಿಗಳಾದ ಎ.ಎಂ.ಕಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ಬಹುಪತ್ನಿತ್ವ ಮತ್ತು ನಿಖಾ ಹಲಾಲ ಆಚರಣೆಯ ಸಾಂವಿಧಾನಿಕ ಸಿಂಧುತ್ವ ಕುರಿತು ನ್ಯಾಯ ನಿರ್ಣಯ ಕೈಗೊಳ್ಳಲು ಐವರು ನ್ಯಾಯಾಧೀಶರು ಹೊಸ ಪೀಠವೊಂದನ್ನು ರಚಿಸುವುದಾಗಿ ತಿಳಿಸಿದೆ.  ಮುಸ್ಲಿಮರಲ್ಲಿ ಪುರುಷರು ನಾಲ್ಕು ಮದುವೆಯಾಗುವ ಬಹುಪತ್ನಿತ್ವ ಜಾರಿಯಲ್ಲಿದೆ. ಅದೇ ರೀತಿಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನನ್ನು ಮದುವೆಯಾಗಬೇಕು ಹಾಗೂ ತನ್ನ ವಿಚ್ಛೇದಿತ ಪತ್ನಿಯೊಂದಿಗೆ ಮರು ವಿವಾಹವಾಗಲು ಅವಕಾಶ ಲಭಿಸುವುದಕ್ಕೂ ಮುನ್ನ ಆತನಿಗೆ ವಿಚ್ಛೇದನ ನೀಡಬೇಕು ಎಂಬ ನಿಖಾ ಹಲಾಲ ಆಚರಣೆ ಜಾರಿಯಲ್ಲಿದೆ.

ಈ ಹಿಂದೆ ಈ ಪ್ರಕರಣದ ವಿಚಾರಣೆ ನಡೆಸಿದ್ದ ಪಂಚ ನ್ಯಾಯಾಧೀಶರ ಪೀಠವು ಏಕಕಾಲದಲ್ಲಿ ತ್ರಿವಳಿ ತಲಾಖ್, ಬಹುಪತ್ನಿತ್ವ, ನಿಖಾ ಹಲಾಲಾ ಬಗ್ಗೆ ವಿಚಾರಣೆ ಸಾಧ್ಯವಾಗುವುದಿಲ್ಲ. ಹೀಗಾಗಿ ಬಹುಪತ್ನಿತ್ವ, ನಿಖಾ ಹಲಾಲಾ ಕಾನೂನು ಮಾನ್ಯತೆ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್‍ನ ಆಗಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಪಂಚ ಸದಸ್ಯ ಪೀಠವು ನಿಖಾ ಹಲಾಲಾ ಮತ್ತು ಬಹುಪತ್ನಿತ್ವ ವಿಚಾರಗಳನ್ನು ಮುಂದಿನ ದಿನಗಳಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತೇವೆ. ಪ್ರಸ್ತುತ ತ್ರಿವಳಿ ತಲಾಖ್ ಬಗ್ಗೆ ಮಾತ್ರ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದರು.

Facebook Comments

Sri Raghav

Admin