ಮುಸ್ಲೀಮರಿಗೆ ಹಜ್‍ ರೀತಿಯಲ್ಲಿ ಹಿಂದೂ-ಕ್ರೈಸ್ತರಿಗೂ ‘ಪುನೀತಯಾತ್ರೆ’ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Puneeta-Yatre--01

ಬೆಂಗಳೂರು, ಏ.15- ಮುಸ್ಲೀಂ ಸಮುದಾಯಕ್ಕೆ ಮೆಕ್ಕಾಗೆ ತೆರಳಲು ಸರ್ಕಾರ ನೀಡುವ ಹಜ್ ಯಾತ್ರೆ ಸೌಲಭ್ಯಗಳ ರೀತಿಯಲ್ಲಿ ಈಗ ಹಿಂದೂ, ಕ್ರೈಸ್ತ, ಜೈನ, ಸಿಖ್ ಬಾಂಧವರು ಪವಿತ್ರ ತೀರ್ಥಯಾತ್ರೆಗೆ ತೆರಳಲು ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ.  ಈಗಾಗಲೇ ಈ ಸಂಬಂಧ ರೂಪುರೇಷೆ ಸಿದ್ಧಗೊಂಡಿದ್ದು ಇದಕ್ಕೆ ಪುನೀತಯಾತ್ರೆ ಎಂಬ ಹೆಸರಿಡಲಾಗಿದೆ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಈ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.ಆರಂಭದಲ್ಲಿ ರಾಜ್ಯದಲ್ಲಿನ ಮತ್ತು ಗಡಿಭಾಗಕ್ಕೆ ಅಂಟಿಕೊಂಡಿರುವ ಧಾರ್ಮಿಕ ಕ್ಷೇತ್ರಗಳಿಗೆ ಹಿರಿಯ ನಾಗರಿಕರು ತೆರಳಲು ಪ್ರಾಥಮಿಕ ಹಂತದಲ್ಲಿ ಊಟ, ವಸತಿ ಉಚಿತವಾಗಿ ನೀಡಲಿದ್ದು, ಪ್ರಯಾಣಭತ್ಯೆಯಲ್ಲಿ ಶೇ.25ರಷ್ಟು ರಿಯಾಯಿತಿ ನೀಡುವುದಾಗಿ ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.
ಸದ್ಯದಲ್ಲಿಯೇ ಈ ಯೋಜನೆ ಜಾರಿಗೆ ಬರಲಿದ್ದು ಕಳೆದ ಹಲವು ವರ್ಷಗಳಿಂದ ಹಿಂದೂಗಳಿಗೂ ಹಜ್‍ಯಾತ್ರೆ ರೀತಿಯಲ್ಲಿ ಧಾರ್ಮಿಕ ಯಾತ್ರೆ ಕೈಗೊಳ್ಳಲು ಸರ್ಕಾರ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಅದರಂತೆಯೇ ಕಳೆದ ನಾಲ್ಕೈದು ತಿಂಗಳಿಂದ ಇದರ ಬಗ್ಗೆ ಸಂಫೂರ್ಣವಾಗಿ ಪರಾಮರ್ಶೆ ನಡೆಸಿ ಅಂತಿಮ ರೂಪ ನೀಡಲಾಗಿದೆ.

ತಿರುಪತಿ, ಮಲೆಮಾದೇಶ್ವರಬೆಟ್ಟ, ಶ್ರೀಶೈಲ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಗುಲ್ಬರ್ಗದ ಗುರುನಾನಕ್ ಪೀಠ, ಕೊಲ್ಲೂರು, ಮುರುಡೇಶ್ವರ, ಸವದತ್ತಿ ಸೇರಿದಂತೆ ಹಲವು ಧಾರ್ಮಿಕ ಯಾತ್ರಾಸ್ಥಳಗಳನ್ನು ಈಗಾಗಲೇ ಯೋಜನೆ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.  ಚಿತ್ರರಂಗದ ಪ್ರಸಿದ್ಧ ನಟ-ನಟಿಯನ್ನು ಈ ಯೋಜನೆ ರಾಯಭಾರಿಯಾಗಿ ನೇಮಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ಇದಕ್ಕೆ ಪುನೀತ್ ರಾಜ್‍ಕುಮಾರ್, ದರ್ಶನ್, ಸುದೀಪ್, ರಮ್ಯಾ ಸೇರಿದಂತೆ ಹಲವು ನಟಿಯರು ಪಟ್ಟಿಯಲ್ಲಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಎಲ್ಲ ಸಮೂದಾಯಗಳನ್ನು ಖುಷಿ ಪಡಿಸುವ ಯೋಜನೆಗಳು ಒಂದೊಂದಾಗಿ ಸರ್ಕಾರ ಜಾರಿಗೆ ತರಲು ಮುಂದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin