ಮೂರನೇ ದಿನವೂ ನೋಟಿಗಾಗಿ ಮುಂದುವರೆದ ಪರದಾಟ, ನೂಕಾಟ, ಕಿತ್ತಾಟ

ಈ ಸುದ್ದಿಯನ್ನು ಶೇರ್ ಮಾಡಿ

Bank-Notes

ಬೆಂಗಳೂರು, ನ.12– ನೋಟು ಬದಲಾವಣೆ ಮಾಡಿಕೊಳ್ಳಲು ತಮ್ಮಲ್ಲಿರುವ ಹಣವನ್ನು ಬ್ಯಾಂಕ್‍ಗೆ ಠೇವಣಿ ಮಾಡಲು, ಬ್ಯಾಂಕ್‍ಗಳಿಂದ ಹಣ ಪಡೆಯಲು ಹಾಗೂ ಎಟಿಎಂಗಳಿಂದ ಹಣ ಪಡೆಯಲು ಇಂದು ಕೂಡ ಜನ ಪರದಾಡುತ್ತಿದ್ದರು. ಎಲ್ಲ ಬ್ಯಾಂಕ್‍ಗಳ ಮುಂದೆ, ಎಟಿಎಂಗಳ ಮುಂದೆ ಕಿಲೋಮೀಟರ್‍ಗಟ್ಟಲೆ ಕ್ಯೂ ಇತ್ತು. ಬ್ಯಾಂಕ್‍ಗಳ ಮುಂದಂತೂ ಗುರುತಿನ ಚೀಟಿಗಳನ್ನು ಹಿಡಿದು ವೃದ್ಧರು, ಮಹಿಳೆಯರು, ಖಾತೆದಾರರು, ಗ್ರಾಹಕರು ಸರದಿ ಸಾಲಿನಲ್ಲಿ ನಿಂತಿದ್ದರು. ಪ್ರತಿದಿನ 4 ಸಾವಿರ ರೂ. ಹಣವನ್ನು ಮಾತ್ರ ಬದಲಾಯಿಸಿಕೊಳ್ಳಲು ಸಾಧ್ಯವಿರುವುದರಿಂದ ಗುರುತಿನ ಚೀಟಿಯೊಂದಿಗೆ ಜನ ಹಣವನ್ನು ಹಿಡಿದು ಕಾಯುತ್ತಿದ್ದುದು ನಗರದೆಲ್ಲೆಡೆ ಕಂಡುಬಂತು.

ಇನ್ನು ಗಲ್ಲಿ ಗಲ್ಲಿಗಳಲ್ಲಿರುವ ಎಲ್ಲ ಎಟಿಎಂಗಳ ಮುಂದೆ ಜನ ಹಣ ಪಡೆಯಲು ಜಮಾಯಿಸಿದ್ದರು. ಕೆಲವೊಂದು ಪ್ರಮುಖ ಜಾಗಗಳಲ್ಲಿನ ಎಟಿಎಂಗಳ ಮುಂದಂತೂ ಕಿಲೋ ಮೀಟರ್‍ಗಟ್ಟಲೆ ಕ್ಯೂ ಇತ್ತು. ಕೆಲವು ಕಡೆ ಕ್ಯೂ ನಿಂತಿದ್ದವರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದ ಘಟನೆಗಳು ನಡೆದವು.  ಎಟಿಎಂಗಳಲ್ಲಿ ಕೇವಲ 2000ರೂ. ಹಣ ಪಡೆಯಲು ಮಾತ್ರ ಅವಕಾಶ ಇದ್ದುದರಿಂದ ಎಲ್ಲರೂ ಎಟಿಎಂ ಕಾರ್ಡ್‍ಗಳನ್ನು ಹಿಡಿದು ಹನುಮಂತನ ಬಾಲದಂತೆ ನಿಂತಿದ್ದರು. ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಳ್ಳಲು ಜನರಿಗೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಈಗಂತೂ ಬೆಲೆಗಳು ಗಗನಕ್ಕೇರಿವೆ. 2000ರೂ.ಗೆ ಏನೂ ಬರುವುದಿಲ್ಲ. ಆದರೂ ಅಷ್ಟಾದರೂ ದುಡ್ಡನ್ನು ಪಡೆಯಲೇಬೇಕು. ಈ ನಿಟ್ಟಿನಲ್ಲಿ ಹಣಕ್ಕಾಗಿ ಕ್ಯೂ ನಿಂತಿದ್ದರು.
ಕೆಲಸ-ಕಾರ್ಯಗಳಿಗೆ ಹೋಗದೆ ಹಣ ಪಡೆಯಲು, ಹಣ ಬದಲಾವಣೆ ಮಾಡಿಕೊಳ್ಳಲು, ತಮ್ಮಲ್ಲಿರುವ ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕ್‍ಗಳು ಮತ್ತು ಎಟಿಎಂಗಳ ಮುಂದೆ ಸಾಲು ಸಾಲಾಗಿ ಜನ ನಿಂತಿದ್ದರು.

ಹೊಸ ನೋಟುಗಳನ್ನು ಪಡೆದವರು ಖುಷಿಯಿಂದ ಹೊರಬರುತ್ತಿದ್ದರೆ ಡಿಪಾಸಿಟ್ ಇಟ್ಟವರು ಸದ್ಯ ನಮ್ಮ ಹಣ ರಕ್ಷಣೆಯಾಗಿ ಬ್ಯಾಂಕ್ ಸೇರಿತಲ್ಲ ಎಂಬ ಸಂತಸದಿಂದ ಹೊರಬರುತ್ತಿದ್ದರು. ಇನ್ನು ನಮಗೆ ಯಾವಾಗ ಹಣ ಸಿಗುತ್ತದೆಯೋ ಎಂಬ ಧಾವಂತದಲ್ಲಿ ಸರದಿ ಸಾಲಿನಲ್ಲಿ ನಿಂತವರು ಶಪಿಸುತ್ತಿದ್ದರು.  ಈಗೀಗ 500, 1000 ಸಾವಿರ ರೂ.ಗಳ ನೋಟುಗಳನ್ನು ನೋಡುತ್ತಿದ್ದೆವು. ಇದಕ್ಕೂ ಕಲ್ಲು ಬಿತ್ತಲ್ಲ ಎಂದು ಸಣ್ಣ ಸಣ್ಣ ವ್ಯಾಪಾರಿಗಳು, ಫುಟ್‍ಪಾತ್ ವರ್ತಕರು, ಆಟೋ ಡ್ರೈವರ್‍ಗಳು ಸೇರಿದಂತೆ ಅನೇಕರು ಶಪಿಸುತ್ತಿದ್ದರು.

ಕಳೆದ ಮೂರು ದಿನಗಳಿಂದ ವ್ಯಾಪಾರ-ವಹಿವಾಟಿಲ್ಲದೆ ಈ ಹಣಕ್ಕಾಗಿ ಫಜೀತಿ ಪಡುತ್ತಿದ್ದೇವೆ ಎಂದು ತರಕಾರಿ, ಸೊಪ್ಪು, ಹಣ್ಣು ಮಾಡುವವರು ಗೊಣಗುತ್ತಿದ್ದುದು ಕೇಳಿಬಂದಿತು.
ಇನ್ನೂ ಹಲವೆಡೆ ಬ್ಯಾಂಕ್‍ಗಳಲ್ಲಿ ಹಣ ಖಾಲಿಯಾಗಿದ್ದರಿಂದ ರಿಜರ್ವ್ ಬ್ಯಾಂಕ್‍ನಿಂದ ಹಣ ತಂದು ಹಾಕಲು ಕೆಲಕಾಲ ವಿಳಂಬವಾಗಿದ್ದರಿಂದ ಕ್ಯೂ ನಿಂತಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂತು. ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಜಯನಗರ, ಬಸವನಗುಡಿ, ಯಲಹಂಕ, ಹೆಬ್ಬಾಳ ಸೇರಿದಂತೆ ನಗರದೆಲ್ಲೆಡೆ ಇರುವ ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್, ವಿದೇಶಿ ಬ್ಯಾಂಕ್‍ಗಳ ಮುಂದೆ ಕ್ಯೂ ಮುಂದುವರಿದಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin