ಮೂರು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ 6 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Acciden-02

ತುಮಕೂರು/ಶ್ರೀರಂಗಪಟ್ಟಣ/ವಿಜಯಪುರ/ನ.11- ಇಂದು ಮುಂಜಾನೆ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ತುಮಕೂರಿನಲ್ಲಿ ಇಂಡಿಕಾ ಕಾರು ಮರಕ್ಕೆ ಅಪ್ಪಳಿಸಿ ಇಬ್ಬರು, ಶ್ರೀರಂಗಪಟ್ಟಣದಲ್ಲಿ ಒಬ್ಬ ಹಾಗೂ ವಿಜಯಪುರದಲ್ಲಿ ಲಾರಿ ಹಾಗೂ ಬೊಲೆರೋ ನಡುವೆ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ತುಮಕೂರು ವರದಿ:

ಮದುವೆ ಮುಗಿಸಿಕೊಂಡು ಇಂಡಿಕಾ ಕಾರಿನಲ್ಲಿ ನಾಲ್ವರು ತಮ್ಮ ಗ್ರಾಮಕ್ಕೆ ಹಿಂದಿರುಗತ್ತಿದ್ದಾಗ ಅತಿವೇಗದಿಂದಾಗಿ ಮರಕ್ಕೆ ಅಪ್ಪಳಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಕೊರಟಗೆರೆ ತಾಲ್ಲೂಕಿನ ಪಾತಗಾನಹಳ್ಳಿ ಗ್ರಾಮದ ನಿವಾಸಿಗಳಾದ ವೆಂಕಟೇಶ್(34) ಮತ್ತು ನಾಗಾರ್ಜುನ(39) ಎಂದು ಗುರುತಿಸಲಾಗಿದೆ.  ಘಟನೆಯಲ್ಲಿ ರಘುನಂದನ್ ಮತ್ತು ನಾಗೇಶ್ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಇವರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‍ಗೆ ದಾಖಲಿಸಲಾಗಿದೆ.  ಈ ನಾಲ್ವರು ಇಂಡಿಕಾ ಕಾರಿನಲ್ಲಿ ಹೂರ್ಡಿಗೆರೆ ಬೈಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿದ್ದ ಮದುವೆ ಕಾರ್ಯಕ್ರಮಕ್ಕೆ ಹೋಗಿ ತಡರಾತ್ರಿ 1 ಗಂಟೆಯಲ್ಲಿ ಕೊರಟಗೆರೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ಸೀತಕಲ್ಲು ಗ್ರಾಮದ ಸಮೀಪದ ತಿರುವಿನಲ್ಲಿ ಮರಕ್ಕೆ ಅಪ್ಪಳಿಸಿದೆ.

ಪರಿಣಾಮವಾಗಿ ವೆಂಕಟೇಶ್ ಮತ್ತು ನಾಗಾರ್ಜುನ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ರಘುನಂದನ್ ಮತ್ತು ನಾಗೇಶ್ ಗಂಭೀರ ಗಾಯಗೊಂಡಿದ್ದಾರೆ. ಇವರೆಲ್ಲರೂ ಪಾನಮತ್ತರಾಗಿದ್ದರು ಎಂದು ಹೇಳಲಾಗುತ್ತಿದೆ.  ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಎಎಸ್ಪಿ ಮಂಜುನಾಥ್, ಡಿವೈಎಸ್ಪಿ ಚಿದಾನಂದ್, ಇನ್‍ಸ್ಪೆಕ್ಟರ್ ನಾಗಲಿಂಗಯ್ಯ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮೃತರ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಗಾಯಾಳುಗಳನ್ನು ನಿಮ್ಹಾನ್ಸ್‍ಗೆ ದಾಖಲಿಸಲಾಗಿದೆ.  ಕ್ಯಾತಸಂದ್ರ ಠಾಣೆ ಪಿಎಸ್‍ಐ ರಾಘವೇಂದ್ರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶ್ರೀರಂಗಪಟ್ಟಣ ವರದಿ:

ಮೈಸೂರಿನಿಂದ ನಾಲ್ವರು ಪ್ರಯಾಣಿಕರನ್ನು ಅಪೆ ಆಟೋದಲ್ಲಿ ಕರೆದೊಯ್ಯುತ್ತಿದ್ದಾಗ ನಿಮಿಷಾಂಬ ದೇವಸ್ಥಾನ ಕಡೆ ತಿರುವು ಪಡೆಯುತ್ತಿದ್ದಂತೆ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕನೊಬ್ಬ ಕೆಳಗೆ ಬಿದ್ದಾಗ ಹಿಂದಿನಿಂದ ಬಂದ ಐಷರ್ ವಾಹನ ಈತನ ಮೇಲೆ ಹರಿದ ಪರಿಣಾಮ ಸಾವಪ್ಪಿದ್ದಾನೆ.  ಮೂಲತಃ ಮೈಸೂರಿನ ಕುಂಬಾರಕೊಪ್ಪಲು ನಿವಾಸಿ ರವಿ (45) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ಇಂದು ಬೆಳಗ್ಗೆ 7 ಗಂಟೆಯಲ್ಲಿ ಅಪೇ ಆಟೋದಲ್ಲಿ ಹೋಗುತ್ತಿದ್ದಾಗ ತಿರುವಿನಲ್ಲಿ ರವಿ ಕೆಳಗೆ ಬಿದ್ದಾಗ ಪಾಂಡವರಪುರದಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಐಷರ್ ವಾಹನ ರವಿ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.  ಶ್ರೀರಂಗಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯಪುರ: ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಮತ್ತಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಲಾರಿ ಹಾಗೂ ಬೊಲೆರೋ ವಾಹನಗಳ ಸಂಖ್ಯೆ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು , ಮೃತಪಟ್ಟವರ ಹೆಸರು, ವಿಳಾಸ ಸದ್ಯ ತಿಳಿದುಬಂದಿಲ್ಲ.  ಮುತ್ತಗಿ ಕ್ರಾಸ್ ಸಮೀಪ ವೇಗವಾಗಿ ಬಂದ ಲಾರಿ ಎದುರಿನಿಂದ ಬರುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಬೊಲೆರೋ ಚಾಲಕ ಅಪಘಾತಕ್ಕೀಡಾದ ವಾಹನದಲ್ಲಿ ಸಿಲುಕಿದ್ದು , ಆತನನ್ನು ಪಾರು ಮಾಡಲು ಕಾರ್ಯಾಚರಣೆ ನಡೆಸಲಾಗಿದೆ.  ಬೊಲೆರೋದಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು , ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.  ಸೊಲ್ಲಾಪುರದಿಂದ ರಾಮನಗರಕ್ಕೆ ರೇಷ್ಮೆಗೂಡುಗಳನ್ನು ಸಾಗಿಸುತ್ತಿದ್ದ ಬೊಲೆರೋದಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದರು.

Facebook Comments

Sri Raghav

Admin