ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ರಾಜ್ಯದ ಹಿತ ಕಾಪಾಡಿ
ಬೆಂಗಳೂರು, ಅ.18-ಉತ್ತರ ಕರ್ನಾಟಕ ಜಿಲ್ಲೆಗಳಿಗೆ ನೀರೊದಗಿಸುವ ಮಹತ್ವದ ಮಹದಾಯಿ ಯೋಜನೆ ಕುರಿತು ಇದೇ 21 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕರೆದಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ರಾಜ್ಯದ ಹಿತ ಕಾಪಾಡಬೇಕೆಂದು ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕುಡಿಯುವ ನೀರಿನ ವಿಷಯ. ಲಾಭ, ನಷ್ಟದ ಬಗ್ಗೆ ಯೋಚನೆ ಮಾಡದೆ, ಪಕ್ಷಭೇದ ಮಾಡದೆ ಕುಡಿಯುವ ನೀರಿನ ವಿಷಯವಾಗಿರುವುದರಿಂದ ಎಲ್ಲ ಪಕ್ಷದವರು ಪ್ರತಿಷ್ಠೆಗಳನ್ನು ಕೈಬಿಟ್ಟು 21ರ ಸಭೆ ಯಶಸ್ವಿಯಾಗಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸಂಸದರು ಮನಸ್ಸಿಗೆ ಬಂದ ಹಾಗೆ ಮಾತನಾಡಬಾರದು, ಗೋವಾ ಕಾಂಗ್ರೆಸ್ಸಿಗರು, ಮಹಾರಾಷ್ಟ್ರ ಕಾಂಗ್ರೆಸ್ಸಿಗರು ಮುಂದೆ ಬರಲಿ ಎಂದು ಹೇಳಬಾರದು. ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ರಾಜ್ಯದ ನಿಲುವನ್ನು ಬಹಳಷ್ಟ ಸ್ಪಷ್ಟವಾಗಿ ತಿಳಿಸಬೇಕು ಎಂದು ವಾಟಾಳ್ ಹೇಳಿದರು.ನಾಳೆ ಮಹದಾಯಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಸರ್ವಪಕ್ಷಗಳ ಸಭೆಯಲ್ಲಿ ಸರ್ವಪಕ್ಷದವರು ಬೆಂಬಲಿಸಿ ರಾಜ್ಯದ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.
ಮಹದಾಯಿ, ಕಾವೇರಿ ಹೋರಾಟದ ವೇಳೆ ಅಮಾಯಕ ರೈತ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ಅವರು ರಾಷ್ಟ್ರ ದ್ರೋಹಿಗಳಲ್ಲ, ನೀರಿಗಾಗಿ ಹೋರಾಟ ಮಾಡಿದ್ದಾರೆ. ಕೂಡಲೇ ಮೊಕದ್ದಮೆ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ವಾಟಾಳ್ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಎನ್.ಕುಮಾರ್, ಪ್ರವೀಣ್ಕುಮಾರ್ಶೆಟ್ಟಿ, ಮಂಜುನಾಥದೇವು, ಗಿರೀಶ್ಗೌಡ ಮತ್ತಿತರರು ಉಪಸ್ಥಿತರಿದ್ದರು.
► Follow us on – Facebook / Twitter / Google+