ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ರದ್ದು : ಕೋನ ರೆಡ್ಡಿ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

kona--reddy

ಬೆಂಗಳೂರು, ಅ.20- ನಾಳೆ ಮುಂಬೈನಲ್ಲಿ ನಡೆಯಬೇಕಿದ್ದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ದಿಢೀರ್ ರದ್ದಾಗಿದ್ದು, ಉತ್ತರ ಕರ್ನಾಟಕ ಭಾಗದ ಎಲ್ಲಾ ಹೋರಾಟಗಾರರಿಗೆ ತೀವ್ರ ಆಘಾತವಾಗಿದೆ. ಕಳಸಾ ಬಂಡೂರಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ರಾಜಕೀಯ ಮಾಡಬಾರದು ಎಂದು ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಇಂದಿಲ್ಲಿ ಆಗ್ರಹಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಮುಖಂಡರು ಮಹಾರಾಷ್ಟ್ರ ಮುಖ್ಯಮಂತ್ರಿದೇವೇಂದ್ರ ಫಡ್ನಾವೀಸ್ ಜೊತೆ ನಡೆಸಿದ ಮಾತುಕತೆ ವಿವರವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸಚಿವ ಅನಂತ್‍ಕುಮಾರ್, ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಮುಖ್ಯಮಂತ್ರಿಗಳ ಸಭೆ ಮುಂದೂಡಲು ಒತ್ತಡ ಹೇರಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು. ಪ್ರಧಾನಿಯವರ ಮಧ್ಯಸ್ಥಿಕೆಯಲ್ಲಿ ಮಹದಾಯಿ ಜಲವಿವಾದ ಇತ್ಯರ್ಥಪಡಿಸಲು ವಿಧಾನಮಂಡಲದಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಕೈಗೊಳ್ಳಲಾಗಿದೆ. ನ್ಯಾಯಾಧಿಕರಣ ಕೂಡ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದೆ. ಹೀಗಾಗಿ ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ಪ್ರದರ್ಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.

ನಿನ್ನೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ಸಚಿವ ಅನಂತ್‍ಕುಮಾರ್ ಗೈರು ಹಾಜರಾಗಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೋನರೆಡ್ಡಿ ಅವರು, ಚಳಿಗಾಲ ಅಧಿವೇಶನದಲ್ಲಿ ಕಳಸಾ ಬಂಡೂರಿ ವಿಚಾರದ ಚರ್ಚೆಗೆ ಎರಡು ದಿನಗಳ ಕಾಲ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಯೋಜನೆ ಜಾರಿಗೆ ಮತ್ತು ಉತ್ತರ ಕರ್ನಾಟಕ ಭಾಗದ 13 ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಹೋರಾಟಗಾರರು ಹಾಗೂ ಮಠಾಧೀಶರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ನಿರ್ಧರಿಸಲಾಗುವುದು ಎಂದರು.ನವಲಗುಂದ ತಾಲೂಕಿನ ಯಮಲೂರು ಮತ್ತಿತರ ಗ್ರಾಮಗಳಲ್ಲಿ ಪೊಲೀಸರ ಹಲ್ಲೆಯಿಂದ ದೌರ್ಜನ್ಯಕ್ಕೊಳಗಾಗಿರುವ ಎಲ್ಲಾ ರೈತ ಕುಟುಂಬಗಳಿಗೆ ಪರಿಹಾರವನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin