ಮೂರು ಹೋಲ್ಸೇಲ್ ಅಂಗಡಿಗಳಲ್ಲಿ ಬೆಂಕಿ : ಕೋಟ್ಯಂತರ ರೂ. ನಷ್ಟ
ಮೈಸೂರು, ಸೆ.8- ಮೂರು ಹೋಲ್ಸೇಲ್ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ದೇವರಾಜ ಅರಸು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ನಗರದ ಹಳೇ ಶಿವರಾಂಪೇಟೆಯ 3ನೇ ಕ್ರಾಸ್ನಲ್ಲಿರುವ ನಾಗಮ್ಮ ಕಾಂಪ್ಲೆಕ್ಸ್ನಲ್ಲಿ ರಾಮ್ದೇವ್ ಅಂಡ್ ಕೋ, ಜುಂ-ಜುಂ ಮತ್ತು ನಾಗಮ್ಮ ಡಿಪಾರ್ಟ್ಮೆಂಟಲ್ ಸ್ಟೋರ್ ಎಂಬ ಹೋಲ್ಸೇಲ್ ಮಳಿಗೆಗಳಿವೆ.ರಾಮ್ದೇವ್ ಅಂಡ್ ಕೋ ಹೋಲ್ಸೇಲ್ ಅಂಗಡಿಯಲ್ಲಿ ಶಾಂಪೂ, ಗಂಧದಕಡ್ಡಿ, ಕರ್ಪೂರ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು, ಜುಂ-ಜುಂ ಮಳಿಗೆಯಲ್ಲಿ ಹಗ್ಗ-ಪ್ಲ್ಯಾಸ್ಟಿಕ್ವೈರ್, ನಾರಿನಿಂದ ತಯಾರಿಸಲಾದ ಉತ್ಪನ್ನಗಳನ್ನು ಹಾಗೂ ನಾಗಮ್ಮ ಡಿಪಾರ್ಟ್ಮೆಂಟಲ್ ಅಂಗಡಿಯಲ್ಲಿ ಬೆಂಕಿಪೊಟ್ಟಣಗಳನ್ನು ದಾಸ್ತಾನು ಮಾಡಿಕೊಂಡು ಹೋಲ್ಸೇಲ್ ದರದಲ್ಲಿ ವ್ಯಾಪಾರ ಮಾಡಲಾಗುತ್ತದೆ.
ಈ ಅಂಗಡಿಗಳಲ್ಲಿ ಶಾರ್ಟ್ಸಕ್ರ್ಯೂರ್ಟ್ನಿಂದಾಗಿ ಬೆಂಕಿ ಕಾಣಿಸಿಕೊಂಡು ಅಂಗಡಿಗಳಲ್ಲಿದ್ದ ಪೂಜಾ ಸಾಮಗ್ರಿಗಳು, ಬೆಂಕಿ ಪೊಟ್ಟಣಗಳು, ಹಗ್ಗ, ಪ್ಲ್ಯಾಸ್ಟಿಕ್ ವಸ್ತುಗಳು ಕಿಡಿಯಿಂದ ಹೊಗೆಯಾಡಿ ಬೂದಿಯಾಗಿವೆ. ಬೀಟ್ ಪೊಲೀಸರು ಮುಂಜಾನೆ 4 ಗಂಟೆಯಲ್ಲಿ ಸಹಿ ಹಾಕಲು ಈ ಮಾರ್ಗದಲ್ಲಿ ಬಂದಾಗ ಗಂಧದಕಡ್ಡಿ, ಕರ್ಪೂರದ ವಾಸನೆ ಹೆಚ್ಚಾಗಿ ಬರುತ್ತಿದ್ದುದನ್ನು ಗಮನಿಸಿ ಸುತ್ತಮುತ್ತ ನೋಡಿದಾಗ ಈ ಅಂಗಡಿಗಳಿಂದ ಹೊಗೆ ಬರುತ್ತಿರುವುದು ಕಂಡು ತಕ್ಷಣ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ.ಅಗ್ನಿಶಾಮಕ ದಳದ ಶಿವಲಿಂಗಯ್ಯ ನೇತೃತ್ವದಲ್ಲಿ ಸಿಬ್ಬಂದಿಗಳು ಬಂದು ಈ ಅಂಗಡಿಗಳ ಬಾಗಿಲು ಒಡೆದು ನೋಡಿದಾಗ ಪೂಜಾ ಸಾಮಗ್ರಿಗಳು ಗಂಧದಕಡ್ಡಿಗಳೆಲ್ಲಾ ಉರಿದು ಬೂದಿಯಾಗಿದ್ದವು.
ಒಟ್ಟಾರೆ ಈ ಮೂರು ಅಂಗಡಿಗಳಲ್ಲಿ ದಾಸ್ತಾನಾಗಿದ್ದ ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೀಡಾಗಿದೆ. ದೇವರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.ಬಹುಶಃ ಬೆಂಕಿಯ ಕಿಡಿ ರಾತ್ರಿಯೇ ಕಾಣಿಸಿಕೊಂಡಿದೆ. ಆದರೆ, ಯಾರ ಗಮನಕ್ಕೂ ಬಾರದಿದ್ದರಿಂದ ಮುಂಜಾನೆಯವರೆಗೂ ಉರಿದು ಎಲ್ಲಾ ವಸ್ತುಗಳು ಬೂದಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಲಾಗಿದೆ.
► Follow us on – Facebook / Twitter / Google+