ಮೂವತ್ತು ವರ್ಷಗಳಿಂದ ಅಭಿವೃದ್ದಿ ಕಾಣದ ರಸ್ತೆಯ ಅವ್ಯವಸ್ಥೆಗೆ ಕೊನೆಗೂ ಮುಕ್ತಿ 

ಈ ಸುದ್ದಿಯನ್ನು ಶೇರ್ ಮಾಡಿ

7

ಕೆಆರ್‍ಪುರ, ಫೆ.22-ಮೂವತ್ತು ವರ್ಷಗಳಿಂದ ಅಭಿವೃದ್ದಿ ಕಾಣದ ರಸ್ತೆಯ ಅವ್ಯವಸ್ಥೆಗೆ ಕೊನೆಗೆ ಮುಕ್ತಿ ದೊರಕಿದ್ದು, ಇಂದು ಅಭಿವೃದ್ಧಿ ಕೆಲಸಗಳಿಗೆ ಪಾಲಿಕೆ ಸದಸ್ಯ ಎಸ್.ಜಿ. ನಾಗರಾಜ್ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ವಿಜ್ಞಾನನಗರ ವಾರ್ಡ್‍ನ ಬಸವನಗರ ಮೂರನೇ ಅಡ್ಡರಸ್ತೆ ಕಳೆದ 30 ವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದೆ ಮೂಲೆಗುಂಪಾಗಿತ್ತು. ಸ್ಥಳೀಯ ಜಮೀನು ಮಾಲೀಕರು ದೇವಾಲಯಕ್ಕಾಗಿ ನೀಡಿದ್ದ ರಸ್ತೆ ಪಕ್ಕದ 10 ಸಾವಿರ ಅಡಿ ಜಾಗದೊಂದಿಗೆ ರಸ್ತೆಯೂ ನಮ್ಮದೇ ಎಂದು ಅದನ್ನೂ ಒತ್ತುವರಿ ಮಾಡಿಕೊಂಡು ಕೋರ್ಟ್ ಮೆಟ್ಟಿಲೇರಿದ್ದರು.ಸಾರ್ವಜನಿಕರ ಹಿತ ದೃಷ್ಟಿಯಿಂದ ಬಿಬಿಎಂಪಿ ಹಾಗೂ ಪೊಲೀಸರ ಸಹಕಾರದೊಂದಿಗೆ ಜಮೀನು ಮಾಲೀಕರ ಮನವೊಲಿಸಿ 30 ವರ್ಷಗಳ ತಲೆದೋರಿದ್ದ ಸಮಸ್ಯೆಗೆ ಇತಿಶ್ರೀ ಹಾಡಿ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಉಪಯೋಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅದರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ.

ನೂರಾರು ಜನರು ವಾಸಿಸುವ ಈ ರಸ್ತೆಯಲ್ಲಿ ವಿದ್ಯುತ್, ಯುಜಿಡಿ, ಕಾವೇರಿ ನೀರು ಎಲ್ಲವನ್ನೂ ನೀಡಿದ್ದರೂ ರಸ್ತೆ ಅಭಿವೃದ್ಧಿಗೆ ಮಾತ್ರ ಅಡ್ಡಿಪಡಿಸುತ್ತಿದ್ದರು. ಸ್ಥಳೀಯರು ಬಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ರಸ್ತೆಗೆ ಹಾಕಿದ್ದ ಮಣ್ಣನ್ನು ತೆರವುಗೊಳಿಸಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿ ಆರಂಭಿಸಲಾಗಿದೆ ಎಂದರು.ಕಾಮಗಾರಿಗಳನ್ನು ಗುಣಮಟ್ಟ ದೊಂದಿಗೆ ಶೀಘ್ರದಲ್ಲೇ ಮುಗಿಸಿ ಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.ವಿಜ್ಞಾನನಗರ ವಾರ್ಡ್‍ನ ಶೇ.90 ರಷ್ಟು ರಸ್ತೆಗಳಿಗೆ ಡಾಂಬರು ಹಾಗೂ ಕಾಂಕ್ರೀಟ್ ಹಾಕಿದಂತೆ, ಉಳಿದ ರಸ್ತೆಗಳ ಅಭಿವೃದ್ಧಿ ಶೀಘ್ರದಲ್ಲೇ ಮಾಡ ಲಾಗುವುದು ಎಂದು ಹೇಳಿದರು.ಪಾಲಿಕೆ ಸದಸ್ಯ ಮಂಜುನಾಥ್, ಬ್ಲಾಕ್ ಅಧ್ಯಕ್ಷ ಪ್ರಸಾದ್‍ರೆಡ್ಡಿ, ಎಸ್‍ಸಿ ಬ್ಲಾಕ್ ಅಧ್ಯಕ್ಷ ಮುನಿರಾಜು, ವಾರ್ಡ್ ಅಧ್ಯಕ್ಷ ಕೃಷ್ಣಪ್ಪ, ಹೆಚ್‍ಎಎಲ್ ಸಬ್ ಇನ್ಸ್‍ಪೆಕ್ಟರ್ ಗುರುಪ್ರಸಾದ್, ಮುಖಂಡರಾದ ಮಾರುಕಟ್ಟೆ ರಮೇಶ್, ಮನೋಜ್, ಲಕ್ಷ್ಮಣ್‍ರಾಜ್, ಬಾಬು, ರತನರೆಡ್ಡಿ, ಬಿಬಿಎಂಪಿ ಎಇಇ ಭಾಗ್ಯಮ್ಮ, ಎಇ ಚಂದ್ರಶೇಖರ್, ಗುತ್ತಿಗೆದಾರ ಪ್ರದೀಪ್‍ರೆಡ್ಡಿ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin