ಮೆಹುಲ್ ಚೋಕ್ಸಿ ಗ್ರೂಪ್‍ಗೆ ಸೇರಿದ 1,217 ಕೋಟಿ ರೂ. ಆಸ್ತಿ ಜಪ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

Mehul-Choksi

ನವದೆಹಲಿ, ಮಾ.1-ಬ್ಯಾಂಕಿಂಗ್ ಕ್ಷೇತ್ರದ ಅತಿದೊಡ್ಡ ವಂಚನೆಯಾದ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಆಸ್ತಿಗಳ ಜಪ್ತಿ ಕಾರ್ಯಾಚರಣೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತಷ್ಟು ಚುರುಕುಗೊಳಿಸಿದ್ದು, ಭಾರೀ ಪ್ರಮಾಣದ ಅವ್ಯವಹಾರಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಗೀತಾಂಜಲಿ ಜೆಮ್ಸ್ ಮತ್ತು ಅದರ ಪ್ರವರ್ತಕ ಮೆಹುಲ್ ಚೋಕ್ಸಿಗೆ ಸೇರಿದ 1,217 ಕೋಟಿ ರೂ. ಮೌಲ್ಯದ 41 ಆಸ್ತಿಗಳನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಪಿಎನ್‍ಬಿ ಹಗರಣದ ತನಿಖೆ ಮುಂದುವರಿದಂತೆ ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಈ ಪ್ರಕರಣದಲ್ಲಿ ಹಣ ದುರ್ಬಳಕೆ ವಿರುದ್ಧ ತನಿಖೆ ನಡೆಸಿದ ಅಧಿಕಾರಿಗಳು ಗೀತಾಂಜಲಿ ಜೆಮ್ಸ್ ಮತ್ತು ಅದರ ಒಡೆಯ ಚೋಕ್ಸಿಗೆ (ಪಿಎನ್‍ಬಿ ವಂಚನೆ ಪ್ರಕರಣದ ಪ್ರಮುಖ ರೂವಾರಿ ನೀರವ್ ಮೋದಿ ಸೋದರ ಮಾವ) ಸೇರಿದ 1,200ಕ್ಕೂ ಹೆಚ್ಚು ಆಸ್ತಿ-ಪಾಸ್ತಿಗಳು ಹಾಗೂ ಇತರ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 41 ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇದರಲ್ಲಿ ಮುಂಬೈನ 15 ಭವ್ಯ ಫ್ಲಾಟ್‍ಗಳು ಮತ್ತು 17 ಕಚೇರಿಗಳು, ಕೋಲ್ಕತ್ತಾದ ಬೃಹತ್ ಮಾಲು, ಅಲಿಬಾಗ್‍ನಲ್ಲಿ ನಾಲ್ಕು ಎಕರೆ ತೋಟದ ಮನೆ ಹಾಗೂ ಮಹಾರಾಷ್ಟ್ರದ ನಾಸಿಕ್, ನಾಗ್ಪುರದಲ್ಲಿ 231 ಎಕರೆ ಭೂಮಿ ಹಾಗೂ ತಮಿಳುನಾಡಿನ ವಿಳ್ಳುಪುರಂನಲ್ಲಿ ಬೃಹತ್ ನಿವೇಶನ ಮತ್ತು ಕೃಷಿ ಭೂಮಿ ಸೇರಿವೆ. ಹೈದರಾಬಾದ್‍ನ ರಂಗಾರೆಡ್ಡಿ ಜಿಲ್ಲೆಯಲ್ಲಿ 500 ಕೋಟಿ ರೂ. ಮೌಲ್ಯದ 170 ಎಕರೆ ಉದ್ಯಾನವನವನ್ನೂ ಸಹ ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ 1,217 ಕೋಟಿ ರೂ.ಗಳು. ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 12,723 ಕೋಟಿ ರೂ.ಗಳ ವಂಚನೆ ಪ್ರಕರಣದ ಪ್ರಮುಖ ಸೂತ್ರಧಾರನಾದ ಡೈಮಂಡ್ ಮರ್ಚೆಂಟ್ ನೀರವ್ ಮೋದಿಗೆ ಸೇರಿದ ಆಸ್ತಿಗಳ ಜಪ್ತಿಯನ್ನು ಮುಂದುವರಿಸಿದ್ದ ಜಾರಿ ನಿರ್ದೇಶನಾಲಯ ಕಳೆದ ವಾರ 523 ಕೋಟಿ ರೂ. ಮೌಲ್ಯದ 21 ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಇಡಿ ಅಧಿಕಾರಿಗಳು ತೋಟದ ಮನೆಗಳು, ಫ್ಲಾಟ್‍ಗಳು, ಅಪಾರ್ಟ್‍ಮೆಂಟ್‍ಗಳೂ ಸೇರಿದಂತೆ ನೀರವ್ ಮೋದಿ ಗ್ರೂಪ್‍ಗೆ ಸೇರಿದ 21 ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡಿತ್ತು. ಇಡಿ ಅಧಿಕಾರಿಗಳು ನೀರವ್ ಮೋದಿಗೆ ಸೇರಿದ 44 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಬ್ಯಾಂಕ್ ಖಾತೆಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಅಲ್ಲದೇ ನೂರಕ್ಕೂ ಹೆಚ್ಚು ದುಬಾರಿ ವಿದೇಶಿ ವಾಚುಗಳ ಬೃಹತ್ ಸಂಗ್ರಹವನ್ನೂ ಮುಟ್ಟುಗೋಲು ಹಾಕಿಕೊಂಡಿದ್ದರು.
ಅದಕ್ಕೂ ಹಿಂದೆ ನೀರವ್ ಮತ್ತು ಮೆಹುಲ್ ಚೋಕ್ಸಿ ಗ್ರೂಪ್‍ಗೆ ಸೇರಿದ 94.52 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಮ್ಯೂಚುವಲ್ ಫಂಡ್‍ಗಳನ್ನು ಜಪ್ತಿ ಮಾಡಿದ್ದರು. ಅಲ್ಲದೇ ನೀರವ್ ಕಂಪನಿಗೆ ಸೇರಿದ 100 ಕೋಟಿ ರೂ. ಬೆಲೆಬಾಳುವ 9 ಐಷಾರಾಮಿ ಕಾರುಗಳನ್ನೂ ಸಹ ವಶಪಡಿಸಿಕೊಂಡಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin