ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ, ಅನುಮತಿ ನೀಡದಂತೆ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

Mekedaatu--01

ನವದೆಹಲಿ, ಫೆ.17- ಕರ್ನಾಟಕದ ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಗೆ ತಮಿಳುನಾಡು ಕ್ಯಾತೆ ತೆಗೆದಿದೆ. ಈ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಬಾರದೆಂದು ಕಾವೇರಿ ಮೇಲುಸ್ತುವಾರಿ ಸಮಿತಿ ಸಮಿತಿ ಸಭೆ ಮುಂದೆ ಅರ್ಜಿ ಸಲ್ಲಿಸಿದೆ. ಇದರೊಂದಿಗೆ ಕಾವೇರಿ ವಿವಾದದ ನಂತರ ಈಗ ಮೇಕೆದಾಟು ಯೋಜನೆ ಉಭಯ ರಾಜ್ಯಗಳ ನಡುವೆ ಮತ್ತೊಂದು ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ.   ನಿನ್ನೆಯಷ್ಟೇ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಅಧಿಕಾರ ಸ್ವೀಕರಿಸಿದ್ದು, ನಾಳೆ ವಿಶ್ವಾಸಮತ ಯಾಚನೆ ಮಾಡಬೇಕಾಗಿದೆ.   ಇದಕ್ಕೂ ಮುನ್ನವೇ ತಮಿಳುನಾಡು ಸರ್ಕಾರ ತಗಾದೆ ತೆಗೆದಿದೆ.

ದೆಹಲಿಯ ಶ್ರಮಿಕ ಭವದಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ತಮಿಳುನಾಡು ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದೆಂದು ಆಗ್ರಹಿಸಿದೆ.   ಮೇಕೆದಾಟು ಯೋಜನೆಯನ್ನು 5,912 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸುವ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಸಭೆ ಮೊನ್ನೆ ತಾತ್ವಿಕ ಅನುಮೋದನೆ ನೀಡಿತ್ತು.   ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪಿನಂತೆ ಒಂದು ಜಲವರ್ಷದಲ್ಲಿ 192 ಟಿಎಂಸಿ ಅಡಿ ನೀರು ಹರಿಸಬೇಕು. ಹೆಚ್ಚು ಮಳೆಯಾದ ವರ್ಷದಲ್ಲಿ 220 ಟಿಎಂಸಿ ಅಡಿಯಿಂದ 265 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿದು ಹೋಗಿದ್ದು, ರಾಜ್ಯದ ಪಾಲಿನ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಈ ಯೋಜನೆ ಕಾರ್ಯಗತಕ್ಕೆ ಸರ್ಕಾರ ಮುಂದಾಗಿತ್ತು. ಈ ಯೋಜನೆಯಿಂದ 66 ಟಿಎಂಸಿ ಅಡಿ ನೀರು ಸಂಗ್ರಹ ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಸಾಧ್ಯವಾಗಲಿದೆ.

ತಮಿಳುನಾಡು ವಾದ ಏನು:

ಕಾವೇರಿ ನ್ಯಾಯಾಧೀಕರಣದಲ್ಲಿ ನೀರು ಹಂಚಿಕೆ ವಿಚಾರಣೆ ನಡೆಯುವ ವೇಳೆ ಮೇಕೆದಾಟು ವಿಚಾರ ಪ್ರಸ್ತಾಪವಾಗಿಲ್ಲ. ಆದರೆ, ಸರ್ಕಾರ ಈಗ ಯೋಜನೆಗೆ ಮುಂದಾಗಿದ್ದು, ನ್ಯಾಯ ಮಂಡಳಿಯ ತೀರ್ಪನ್ನು ಉಲ್ಲಂಘಿಸಿದೆ. ತಮಿಳುನಾಡಿಗೆ ನೈಸರ್ಗಿಕವಾಗಿಯೇ ಮಳೆ ಮೂಲಕ ಹೆಚ್ಚುವರಿ ನೀರು ಲಭಿಸುತ್ತದೆ. ಆದರೆ, ಈ ಅಣೆಕಟ್ಟು ನಿರ್ಮಿಸುವ ಮೂಲಕ ಕರ್ನಾಟಕ ತಮಿಳುನಾಡಿನ ರೈತರ ಕೃಷಿಗೆ ಅಡ್ಡಗಾಲು ಹಾಕುತ್ತಿದೆ ಎಂಬುದು ತಮಿಳುನಾಡಿನ ವಾದವಾಗಿದೆ.

ಕರ್ನಾಟಕದ ವಾದ ಏನು:

ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ಪ್ರತಿವರ್ಷ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದು ನಮ್ಮ ಹೊಣೆ. ಒಂದು ವೇಳೆ ನಾವು ಅಷ್ಟು ಪ್ರಮಾಣದ ನೀರನ್ನು ಬಿಡದಿದ್ದರೆ ತಮಿಳುನಾಡು ಪ್ರಶ್ನಿಸುವುದು ಸರಿ. ನಾವು ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟತ್ತೇವೆಯೇ ಹೊರತು ವಿದ್ಯುತ್ ಉತ್ಪಾದನೆಗಾಗಿ ಅಲ್ಲ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲು ಅದ್ಯತೆ ನೀಡಬೇಕೆಂದು ಅಂತಾರಾಷ್ಟ್ರೀಯ ಜಲ ನೀತಿಯೇ ಹೇಳಿದೆ. ಹೀಗಾಗಿ ನಾವು ಕೈಗೆತ್ತಿಕೊಂಡಿರುವ ಮೇಕೆದಾಟು ಯೋಜನೆ ನ್ಯಾಯ ಸಮ್ಮತವಾಗಿದೆ ಎಂಬುದು ಕರ್ನಾಟಕದ ವಾದ.

ಕಾವೇರಿ ನೀರಿಗಾಗಿ ಯಾವಾಗಲೂ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ಈಗ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದೆ. ಕರ್ನಾಟಕ ಸರ್ಕಾರವು ಕುಡಿಯುವ ನೀರಿಗಾಗಿ ಮೇಕೆದಾಟು ಎಂಬಲ್ಲಿ ಕಿರು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗುತ್ತಿರುವುದಕ್ಕೆ ತಮಿಳುನಾಡು ರೈತರು ತಗಾದೆ ಈ ಹಿಂದೆ ತೆಗೆದಿದ್ದರು. ಸದಾ ಕಾವೇರಿ ವಿವಾದವನ್ನು ಬಂಡವಾಳವನ್ನಾಗಿ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ತಮಿಳುನಾಡಿನ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆ ವಿರೋಧಿಸಿ ಪ್ರತಿಭಟನೆ, ಬಂದ್ ಸಹ ಮಾಡಿ, ಕರುನಾಡು ಮಂದಿಯ ಸ್ವಾಭಿಮಾನವನ್ನು ಕೆರಳಿಸಿದ್ದವು. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಹಲವಾರು ಸಂಘ-ಸಂಸ್ಥೆ-ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿ, ಬಂದ್ ಸಂಪೂರ್ಣ ಯಶಸ್ವಿಯಾಗಿರುವುದು ತಮಿಳುನಾಡಿಗೆ ತಿರುಗೇಟು ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ನಮ್ಮ ರಾಜ್ಯದಿಂದ ಯಾವುದೇ ತಪ್ಪಿಲ್ಲದಿದ್ದರೂ ನಮ್ಮ ನೀರಿಗೆ ಕಲ್ಲು ಹಾಕುತ್ತಿರುವ ತಮಿಳುನಾಡು ವಿರುದ್ಧ ಕರ್ನಾಟಕದ ಕನ್ನಡ ಪರ ಸಂಘಟನೆಗಳು, ರಾಜಕೀಯ ಪಕ್ಷಗಳು, ಚಿತ್ರರಂಗದ ಗಣ್ಯರು, ವಕೀಲರು, ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ತಮಿಳುನಾಡಿನ ವಿತಂಡವಾದದ ವಿರುದ್ಧ ರಾಜ್ಯದಲ್ಲೂ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin