ಮೇಕೆದಾಟು ಯೋಜನೆ ಬಗ್ಗೆ  ತಮಿಳುನಾಡು ಮನವೊಲಿಕೆಗೆ ಸರ್ಕಾರ ಸಿದ್ದ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

Mekedaatui
ಬೆಂಗಳೂರು, ಫೆ.21-ಮೇಕೆದಾಟು ಜಲಾಶಯ ನಿರ್ಮಾಣದ ಬಗ್ಗೆ ತಕರಾರು ತೆಗೆದಿರುವ ತಮಿಳುನಾಡು ರಾಜ್ಯದ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರ ಸಿದ್ದವಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.  ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ- ತಮಿಳುನಾಡು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಉಭಯ ರಾಜ್ಯಗಳ ಜಲಸಂಪನ್ಮೂಲ ಸಚಿವರು ಹಾಗೂ ಮುಖ್ಯಮಂತ್ರಿಗಳ ಮಟ್ಟದಲ್ಲಿ ಸಭೆ ನಡೆಸಿ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಮನವರಿಕೆ ಮಾಡಿಕೊಡಲು ಸಿದ್ದವಿರುವುದಾಗಿ ತಿಳಿಸಿದರು.

ಉದ್ದೇಶಿತ ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಪರಿಸರ ಮತ್ತು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗದ ಮೇಲುಸ್ತುವಾರಿ ಸಮಿತಿ, ಕಾವೇರಿ ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲಾ ಸಂಸ್ಥೆಗಳಿಗೂ ಮನವರಿಕೆ ಮಾಡಿಕೊಡಲು ಸಿದ್ದವಿದ್ದೇವೆ. ಇದರಿಂದ ಉಭಯ ರಾಜ್ಯಗಳಿಗೂ ಅನುಕೂಲವಾಗಲಿದೆ. ಇದು ಉಭಯ ರಾಜ್ಯಗಳ ವಿಷಯವಾಗಿರುವುದರಿಂದ ಕೇಂದ್ರ ಈ ಬಗ್ಗೆ ಮಧ್ಯಪ್ರವೇಶಿಸಿದರೆ ತಪ್ಪಿಲ್ಲ ಎಂದರು.

ಈ ಯೋಜನೆಗೆ ಅನುಮತಿ ಕೋರಿ 2014ರಲ್ಲೇ ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ಕೆಆರ್‍ಎಸ್ ಮತ್ತು ಕಬಿನಿ ಜಲಾಶಯದ ಕೆಳಭಾಗದಲ್ಲಿ 67 ಟಿಎಂಸಿಯಡಿ ನೀರು ಸಂಗ್ರಹದ ಜಲಾಶಯ ನಿರ್ಮಿಸಲು ವಿಸ್ತೃತ ಯೋಜನಾ ವರದಿ   ಸಿದ್ಧಪಡಿಸಲಾಗಿದೆ. ಇದಕ್ಕಾಗಿ 5,900 ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ವಿವರಿಸಿದರು.  ಬೆಂಗಳೂರಿನ ಕುಡಿಯುವ ನೀರಿಗೆ 17 ಟಿಎಂಸಿ ಅಡಿ ನೀರು ಬಳಕೆಯಾಗುತ್ತಿದೆ. ಈ ಜಲಾಶಯದ ವ್ಯಾಪ್ತಿಯಲ್ಲಿ ಖಾಸಗಿ ಜಮೀನು ಬರುವುದಿಲ್ಲ. ಕಂದಾಯ ಮತ್ತು ಅರಣ್ಯ ಇಲಾಖೆ ಜಮೀನು ಮಾತ್ರ ªಜಲಾಶಯದ ವ್ಯಾಪ್ತಿಗೆ ಬರುತ್ತದೆ.   ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ಸ್ವಾಭಾವಿಕವಾಗಿ ವರ್ಷದಲ್ಲಿ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ಬಿಡುತ್ತೇವೆ. ಆದರೆ ಸಂಕಷ್ಟ ಸಂದರ್ಭದಲ್ಲಿ ಉಭಯ ರಾಜ್ಯಗಳು ಸಂಕಷ್ಟ ಹಂಚಿಕೊಳ್ಳಬೇಕಾಗುತ್ತದೆ ಎಂದು ಮನವಿ ಮಾಡಿದರು.  ರಾಜ್ಯ ಸರ್ಕಾರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಮನವರಿಕೆ ಮಾಡಿಕೊಡಲು ಸಿದ್ಧವಿರುವುದರಿಂದ ಜಲಾಶಯ ನಿರ್ಮಾಣಕ್ಕೆ ಅಡೆತಡೆ ಕಂಡುಬರುವುದಿಲ್ಲ. ಕುಡಿಯುವ ನೀರಿನ ಉದ್ದೇಶದ ಜಲಾಶಯ ವಾಗಿರುವುದರಿಂದ ಅರಣ್ಯ ಇಲಾಖೆ ಅನುಮತಿ ಕೂಡ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin