ಮೇಕೆದಾಟು ಹೋರಾಟ ಸಮಿತಿ ಕೇಂದ್ರ ಕಚೇರಿ ಉದ್ಘಾಟನೆ

ಈ ಸುದ್ದಿಯನ್ನು ಶೇರ್ ಮಾಡಿ

mekedau

ಕನಕಪುರ, ಅ.22- ಆರೇಳು ಜಿಲ್ಲೆಗಳ ಕುಡಿಯುವ ನೀರಿನ ಬವಣೆ ನೀಗಿಸುವ ದೃಷ್ಟಿಯಲ್ಲಿ ರಚನೆಗೊಂಡಿರುವ ಮೇಕೆದಾಟು ಹೋರಾಟ ಸಮಿತಿಯ ಕೇಂದ್ರ ಕಚೇರಿ ಪಟ್ಟಣದ ಚನ್ನಬಸಪ್ಪ ಸರ್ಕಲ್‍ನಲ್ಲಿ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ನೆರವೇರಿತು. ತಾಲ್ಲೂಕಿನ ಮರಳೇಗವಿ ಮಠದ ಶಿವರುದ್ರ ಸ್ವಾಮೀಜಿ, ದೇಗುಲಮಠದ ನಿರ್ವಾಣಸ್ವಾಮೀಜಿ, ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶಾಖಾಮಠದ ವಿದ್ಯಾಧರನಾಥ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಉದ್ಘಾಟನೆ ನೆರವೇರಿತು.ಆಶೀರ್ವಚನ ನೀಡಿದ ಮಠಾಧೀಶರು, ಮೇಕೆದಾಟು ಅಣೆಕಟ್ಟು ಯೋಜನೆ ಆಗಲೇಬೇಕಾಗಿದೆ. ಇದಕ್ಕಾಗಿ ಸರ್ಕಾರ ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ಕಾರ್ಯಕ್ರಮವನ್ನು ರೂಪಿಸಿದಾಗ ರೈತರಿಗೆ ನೀರಾವರಿ ಸೌಲಭ್ಯ ಮತ್ತು ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಬಹುದಾಗಿದೆ ಎಂದರು.

ವ್ಯವಸಾಯಕ್ಕೆ ನೀರನ್ನು ಕಲ್ಪಿಸಿದಾಗ ಬಲಿಷ್ಠ ಮತ್ತು ಸಮೃದ್ಧ ನಾಡು ಕಟ್ಟಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತೀವ್ರ ಬರಗಾಲ ಮತ್ತು ಅಂತರ್ಜಲ ಬತ್ತಿರುವುದರಿಂದ ನೀರಿಗಾಗಿ ಆಹಾಕಾರ ಉಂಟಾಗಿದೆ. ಇದನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಮೂಲಕ ಇಲ್ಲಿನ ವಸ್ತುಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಬೇಕಿದೆ ಎಂದರು.ಮಾಗಡಿ ಹೋರಾಟ ಸಮಿತಿಯ ಕಲ್ಪನ ಶಿವಣ್ಣ ಮಾತನಾಡಿ, ಹಿಂದೆ ಗ್ರಾಮಕ್ಕೊಂದು ಕೆರೆ ಕಟ್ಟೆಯನ್ನು ಕಾಣುತ್ತಿದ್ದೆವು. ಅದೇ ರೀತಿ ನೀರಾವರಿ ಮತ್ತು ಅಂತರ್ಜಲದ ಮೂಲಕ ಸುಭಿಕ್ಷವಾದ ನೀರಾವರಿ ಸೌಲಭ್ಯದ ಮೂಲಕ ರೈತರ ಬದುಕು ಅಸನಾಗುತ್ತಿತ್ತು.

ಇಂದು ಕೆರೆಕಟ್ಟೆಗಳನ್ನು ಮುಚ್ಚಿ ಸರ್ವನಾಶ ಮಾಡಲಾಗುತ್ತಿದೆ. ಜನಜಾನುವಾರುಗಳು ಕುಡಿಯುವ ನೀರಿಗೂ ಆಹಾಕಾರ ಉಂಟಾಗಿರುವುದರಿಂದ ಸರ್ಕಾರ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಮೀನಾಮೇಷ ಎಣಿಸದೇ ಸಚಿವರು, ಶಾಸಕರು ಸಮನ್ವಯದಿಂದ ಈ ಯೋಜನೆಯನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಬೇಕಿದೆ. ಹಾಗೊಂದುವೇಳೆ ವಿಳಂಬ ಮಾಡಿದ್ದಲ್ಲಿ ಜಿಲ್ಲೆಯಾದ್ಯಂತ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಕೇಂದ್ರ ಸಮಿತಿಯ ಅಧ್ಯಕ್ಷ ಹೋಟೆಲ್‍ನಾಗರಾಜ್, ರೈತರಸಂಘದ ಮುಖಂಡರಾದ ಲಕ್ಷ್ಮಣ್‍ಸ್ವಾಮಿ, ಸಂಪತ್‍ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಬಿ.ನಾಗರಾಜು, ಜೆಡಿಎಸ್ ಯುವಮುಖಂಡ ಚಿನ್ನಸ್ವಾಮಿ, ಹಾರೋಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲಪ್ಪ, ರೈತಸಂಘದ ಜಿಲ್ಲಾ ಮುಖಂಡ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ಅನಂತ್‍ರಾಂ ಪ್ರಸಾದ್, ಮುನಿರಾಜು, ಕರವೇ ಅಧ್ಯಕ್ಷ ಕಬ್ಬಾಳೇಗೌಡ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin