ಮೇಟಿ ಮಾಡಿದ ಮುಖಭಂಗ : ಡ್ಯಾಮೇಜ್ ಕಂಟ್ರೋಲ್‍ನತ್ತ ಕೈ ನಾಯಕರ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

Meti-01

ಬೆಂಗಳೂರು, ಡಿ.15- ಎಚ್.ವೈ.ಮೇಟಿಯವರ ರಾಸಲೀಲೆ ಪ್ರಕರಣದಿಂದ ಕಂಗಾಲಾಗಿರುವ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳುವ ಸಂಬಂಧ ಸದ್ಯದಲ್ಲೇ ಪದಾಧಿಕಾರಿಗಳ ಸಭೆ ಕರೆಯಲು ನಿರ್ಧರಿಸಿದೆ.  ಎಚ್.ವೈ.ಮೇಟಿಯವರ ವಿರುದ್ಧ ಆರೋಪ ಕೇಳಿಬಂದಾಗಲೇ ಅವರ ರಾಜೀನಾಮೆ ಪಡೆದಿದ್ದರೆ ಪಕ್ಷದ ವರ್ಚಸ್ಸು ಉಳಿಯುತ್ತಿತ್ತು. ಸಿಡಿ ಬಿಡುಗಡೆಯಾಗುವವರೆಗೂ ಕಾದು ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸದ್ಯದಲ್ಲೇ ಪದಾಧಿಕಾರಿಗಳ ಸಭೆ ಕರೆಯಲು ತೀರ್ಮಾನಿಸಲಾಗಿದೆ.

ಇನ್ನೂ ಕೆಲವು ಸಚಿವರು ಹಾಗೂ ಶಾಸಕರ ವಿರುದ್ಧ ಇಂಥ ಆರೋಪಗಳು ಇವೆ ಎಂಬ ಮಾತುಗಳು ಕೇಳಿಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದಲ್ಲಿ ಆಂತರಿಕ ತನಿಖೆ ನಡೆಸಿ ಅಂಥವರನ್ನು ಸಂಪುಟದಿಂದ ಗೌರವಯುತವಾಗಿ ಕೈಬಿಡಬೇಕು. ನಿರ್ಲಕ್ಷ್ಯ, ಮೊಂಡುತನ ಮಾಡಬಾರದು. ಭ್ರಷ್ಟಾಚಾರದ ಆರೋಪಗಳನ್ನು ಹೇಗಾದರೂ ಎದುರಿಸಬಹುದು.
ಆದರೆ, ನೈತಿಕತೆಯ ಪ್ರಶ್ನೆ ಬಂದಾಗ ಕಾಂಗ್ರೆಸ್ ಮೊದಲಿನಿಂದಲೂ ಕಾಪಾಡಿಕೊಂಡು ಬಂದಿರುವ ಸಿದ್ಧಾಂತಗಳನ್ನು ಎತ್ತಿ ಹಿಡಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಮುಂದಾಗಬೇಕು. ನಿರ್ಲಕ್ಷ್ಯ ಧೋರಣೆ ಕೈಬಿಡಬೇಕು ಎಂದು ಹಿರಿಯ ಕಾಂಗ್ರೆಸಿಗರು ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣೆ ಸಂದರ್ಭದಲ್ಲೇನಾದರೂ ಇಂತಹ ಸಿಡಿಗಳು ಮತ್ತೆ ಬಿಡುಗಡೆಯಾದರೆ ಏನು ಎಂಬ ತಳಮಳ ಶುರುವಾಗಿದೆ. ಪಕ್ಷ ನೆಲ ಕಚ್ಚಬೇಕಾಗುತ್ತದೆ. ಮೊದಲೇ ಎಚ್ಚೆತ್ತುಕೊಳ್ಳಬೇಕು. ಹೀಗಾಗಿ ಮುಖ್ಯಮಂತ್ರಿಗಳು ಸೂಕ್ತ ಗಮನ ಹರಿಸಿ ಸಂಪುಟಕ್ಕೆ ಉತ್ತಮರನ್ನು ಸೇರಿಸಿಕೊಳ್ಳಬೇಕು. ಪಕ್ಷ ಹಾಗೂ ಸರ್ಕಾರದ ಘನತೆಯನ್ನು ಎತ್ತಿ ಹಿಡಿಯುವಂತವರಾಗಬೇಕು ಎಂದು ಅವರು ತಿಳಿಸಿದ್ದಾರೆ. ಈ ವಿಷಯವನ್ನು ಹೈಕಮಾಂಡ್ ಗಮನಕ್ಕೂ ಕೂಡ ಹಿರಿಯ ನಾಯಕರು ತರಲಿದ್ದಾರೆ ಎಂದು ತಿಳಿದುಬಂದಿದೆ.

Eesanje News App

Facebook Comments

Sri Raghav

Admin