ಮೇಯರ್ ಮಂಜುನಾಥರೆಡ್ಡಿ ಸಮ್ಮುಖದಲ್ಲೇ ಪೂರ್ವಂಕರ ಸಂಸ್ಥೆ ಒತ್ತುವರಿ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

Mayor

ಬೆಂಗಳೂರು, ಆ.16-ಪ್ರತಿಷ್ಠಿತ ಪೂರ್ವಂಕರ ಸಂಸ್ಥೆಯವರು ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿಯನ್ನು ಮೇಯರ್ ಮಂಜುನಾಥರೆಡ್ಡಿ ಸಮ್ಮುಖದಲ್ಲಿ ನಿರ್ದಾಕ್ಷಿಣ್ಯವಾಗಿ ಇಂದು ತೆರವುಗೊಳಿಸಲಾಯಿತು.  ಪೂರ್ವಂಕರ ಸಂಸ್ಥೆಯವರು ಬೊಮ್ಮನಹಳ್ಳಿ ವಲಯದ ಕೂಡ್ಲು ಗ್ರಾಮದಲ್ಲಿ ಸಾವಿರಾರು ಫ್ಲ್ಯಾಟ್‍ಗಳನ್ನು ಹೊಂದಿರುವ ಪೂರ್ವ ಸ್ಕೈ ಡೆಲ್ ಅಪಾರ್ಟ್‍ಮೆಂಟ್ ನಿರ್ಮಿಸುತ್ತಿದ್ದರು. ಆದರೆ ಸಂಸ್ಥೆ ನಿರ್ಮಿಸುತ್ತಿರುವ ಅಪಾರ್ಟ್‍ಮೆಂಟ್ ಜಾಗ ತಮಗೆ ಸೇರಿದ್ದು ಎಂದು ಸ್ಥಳೀಯ ನಿವಾಸಿ ವೆಂಕಟಸ್ವಾಮಿ ರೆಡ್ಡಿ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಜಾಗ ತಮ್ಮದೆಂಬುದನ್ನು ಸಾಬೀತುಪಡಿಸಿಕೊಂಡಿದ್ದರು.  ಆದರೂ ಪೂರ್ವಂಕರ ಸಂಸ್ಥೆಯವರು ರಾಜಾರೋಷವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರು.

de1556fc-c2eb-42b0-b600-90e85b70255c

ಈ ಕುರಿತಂತೆ ವೆಂಕಟಸ್ವಾಮಿಯವರು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಸ್ವತಃ ಮೇಯರ್ ಮಂಜುನಾಥರೆಡ್ಡಿಯವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಈ ಸಂದರ್ಭದಲ್ಲಿ ಪೂರ್ವಂಕರ ಸಂಸ್ಥೆಯವರು ಹರಳೂರು ಕೆರೆ ಸಮೀಪ 33 ಅಡಿಯಿದ್ದ ರಾಜಕಾಲುವೆಯಲ್ಲಿ 15 ಅಡಿ ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿದ್ದರು.   ಮೇಯರ್ ಅವರು ಸ್ಥಳಕ್ಕೆ ಆಗಮಿಸಿದರೂ ಯಾವೊಬ್ಬ ಅಧಿಕಾರಿಯೂ ಬಾರದಿರುವುದರಿಂದ ಗರಂ ಆದ ಮೇಯರ್ ಮಂಜುನಾಥರೆಡ್ಡಿ ಅವರು ಎಇಇ ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡರು.

daf951a7-c954-4315-84d8-579c2293c1b5

ನಾನು ಸ್ಥಳಕ್ಕೆ ಬಂದು ಒತ್ತುವರಿಯಾಗಿರುವುದನ್ನು ಕಣ್ಣಾರೆ ಕಂಡರೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಯೂ ಸ್ಥಳಕ್ಕೆ ಬಾರದಿರುವುದನ್ನು ಗಮನಿಸಿದರೆ ಒತ್ತುವರಿದಾರರೊಂದಿಗೆ ನೀವು ಕೂಡ ಶಾಮೀಲಾಗಿದ್ದೀರ ಎಂಬ ಗುಮಾನಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲ, ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರನ್ನು ಹೊರಕಳುಹಿಸಿ ಒತ್ತುವರಿಯಾಗಿರುವ ಪ್ರದೇಶವನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಪಾಲಿಕೆ ಸಿಬ್ಬಂದಿಗೆ ಸೂಚನೆ ನೀಡಿದರು. ಪೂರ್ವಂಕರ ಸಂಸ್ಥೆಯವರಿಗೆ ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ನಂತರ ಸರ್ಜಾಪುರ ರಸ್ತೆಯಲ್ಲಿ ಸಲಾರ್‍ಪುರಿಯ ಸಂಸ್ಥೆಯವರು ಒತ್ತುವರಿ ಮಾಡಿಕೊಂಡಿದ್ದ ರಾಜಕಾಲುವೆಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮೇಯರ್ ಖಡಕ್ ಆದೇಶ ನೀಡಿದರು.

4c3cc530-6001-422e-b99c-cdf3a911afa1

ಭಾರೀ ದಂಡ:
ನಗರದಲ್ಲಿ ಅಪಾರ್ಟ್‍ಮೆಂಟ್ ನಿರ್ಮಾಣ ಮಾಡುತ್ತಿರುವವರಲ್ಲಿ ಪೂರ್ವಂಕರ ಮತ್ತು ಸಲಾರ್‍ಪುರಿಯ ಸಂಸ್ಥೆಗಳೇ ಮುಂದಿರುವುದು. ಈ ಸಂಸ್ಥೆಗಳೇ ಅತಿ ಹೆಚ್ಚು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು. ಈ ಎಲ್ಲಾ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಮೇಯರ್ ಮಂಜುನಾಥರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.  ಈ ಮಧ್ಯೆ ಪೂರ್ವಂಕರ ಸಂಸ್ಥೆಯವರು ನಗರದ ಹಲವಾರು ಪ್ರದೇಶಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು 4 ವರ್ಷಗಳಿಂದ ಜಾಹೀರಾತು ತೆರಿಗೆ ಪಾವತಿಸಿಲ್ಲ. ಹೀಗಾಗಿ ನಾಲ್ಕು ವರ್ಷಗಳ ತೆರಿಗೆಯನ್ನು ಭಾರೀ ದಂಡದೊಂದಿಗೆ ಪಾವತಿಸುವಂತೆ ಆ ಸಂಸ್ಥೆಯವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗುವುದು ಎಂದು ಅವರು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin