ಮೇಲುಕೋಟೆಗೆ ಐದು ಶುದ್ಧ ನೀರಿನ ಘಟಕ ಆವಶ್ಯಕ

ಈ ಸುದ್ದಿಯನ್ನು ಶೇರ್ ಮಾಡಿ

melukote

ಮೇಲುಕೋಟೆ, ಆ.22- ಮಂಡ್ಯ ಜಿಲ್ಲೆಯ ಪ್ರಖ್ಯಾತ ಪ್ರವಾಸಿತಾಣವಾದ ಮೇಲುಕೋಟೆಗೆ ಶುದ್ಧ ಕುಡಿಯುವ ನೀರಿನ ಐದು ಘಟಕಗಳ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್ ತ್ಯಾಗರಾಜು ತಿಳಿಸಿದರು.ಮೇಲುಕೋಟೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆಗೆ ಕ್ರೀಯಾಯೋಜನೆ ರೂಪಿಸುವ ಸಂಬಂಧ ನಡೆದ ಕೊರ್ ಕಮಿಟಿ ಸಭೆಯಲ್ಲಿ ಮಾತನಾಡಿದರು.  ಮೇಲುಕೋಟೆ ಜಿಲ್ಲೆಯಲ್ಲೇ ಅತಿಹೆಚ್ಚು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿತಾಣವಾಗಿದೆ ಜೊತೆಗೆ ಈ ವರ್ಷ ಆಚಾರ್ಯ ರಾಮಾನುಜರ ಸಹಸ್ರಮಾನೋತ್ಸವ ಸಹ ನಡೆಯಲಿದೆ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಚೆಲುವನಾರಾಯಣಸ್ವಾಮಿ ದೇವಾಲಯ ಮತ್ತು ಬೆಟ್ಟದ ತಪ್ಪಲಿನಲ್ಲಿ ಭಕ್ತರಿಗಾಗಿ ಮತ್ತು ಮೂರು ಶುದ್ಧಕುಡಿಯುವ ನೀರಿನ ಘಟಕಗಳನ್ನು ನಾಗರಿಕರ ಬಳಕೆಗೆ ಸ್ಥಾಪಿಸಬೇಕಿದೆ ಎಂದರು.

ಕೆರೆತೊಣ್ಣೂರಿನಿಂದ ಮೇಲುಕೋಟೆಗೆ ಮಾಡಿದ ಕುಡಿಯುವ ನೀರಿನ ಪೂರೈಕೆಯ ಯೋಜನೆ ಇದೀಗ ಬಹುಗ್ರಾಮದ ಯೋಜನೆಯಾಗಿ ಪರಿವರ್ತನೆಗೊಂಡು ಸಮರ್ಪಕವಾಗಿ ಅನುಷ್ಠಾನವಾಗದೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದರಿಂದಾಗಿ ನಾಗರೀಕರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಪಟ್ಟಣಕ್ಕೆ ಮಾತ್ರ ಸೀಮಿತವಾಗುವಂತೆ ಬೋರ್ ವೆಲ್ ಕೊರೆಸಿ ಬದಲಿ ನೀರಿನ ಸರಬರಾಜು ಸ್ಥಾಪಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.  ಇನ್ನು ಒಳಚರಂಡಿ ವ್ಯವಸ್ಥೆ, ಸ್ವಚ್ಛತೆಯ ಕಾರ್ಯಕ್ರಮ, ರಸ್ತೆ ಅಗಲೀಕರಣ, ಪ್ರಾಥಮಿಕ ಆರೋಗ್ಯಕೇಂದ್ರವನ್ನು ಮೇಲ್ದರ್ಜೆಗೇರಿಸುವುದು, ಮುಂತಾದ ಅಗತ್ಯ ಕೆಲಸಗಳನ್ನು ಜಿಪಂ ವತಿಯಿಂದ ಮಾಡಿಕೊಡಲು ಇದೇ 26 ರಂದು ನಡೆಯುವ ಜಿಪಂಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು ಸರ್ಕಾರದ ಅನುದಾನ ಬೇಕು. ಮೇಲುಕೋಟೆ ಅಭಿವೃದ್ಧಿಗೆ ಸರ್ಕಾರವೇ ವಿಶೇಷ ಅನುದಾನ ನೀಡುವ ಅವಶ್ಯಕತೆಯಿದೆ. ಇದಕ್ಕಾಗಿ ಪಂಚಾಯಿತಿ ಮಟ್ಟಗಳಲ್ಲಿ ಕೈಗೊಳ್ಳಬಹುದಾದ ಯೋಜನೆಯ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಿ ಎಂದರು.

ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಶಾಲೆಯ ಶೌಚಾಲಯಗಳನ್ನು ದುರಸ್ಥಿ ಮಾಡಿಸಿ, ಮೂತ್ರಾಲಯಗಳನ್ನು ನಿರ್ಮಿಸಿಕೊಡಿ, ಕುಡಿಯುವ ನೀರು ಮತ್ತು ಇತರ ಬಳಕೆಗೆ ಎರಡು ಸಾವಿರ ಲೀಟರ್ ಸಾಮಥ್ರ್ಯದ ಟ್ಯಾಂಕ್ ನೀಡಿ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲು ತಕ್ಷಣ ಕ್ರಮ ಜರುಗಿಸಿ ಎಂದು ಮನವಿ ಮಾಡಿದರು.ಪಿಡಿಒ ಶೈಲಜಾ, ಗ್ರಾಪಂ ಅಧ್ಯಕ್ಷ ಎಸ್. ನಾರಾಯಣಭಟ್ಟರ್, ಅಧ್ಯಕ್ಷೆ ಮಮತಾ, ಸದಸ್ಯರಾದ ಬಲರಾಮೇಗೌಡ, ಅವ್ವಗಂಗಾ, ಶ್ರೀನಿವಾಸ್(ರಾಜಿ) ರಂಜಿತ, ಶೋಭ, ಸಾಕಮ್ಮ, ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರಾದ ಸಂತಾನರಾಮನ್, ಶಿವರಾಮು, ಹಿರಿಯ ಆರೋಗ್ಯ ಸಹಾಯಕ ನಟರಾಜು, ವಿಜಯಕುಮಾರ್, ಅಂಗನವಾಡಿ ಕಾರ್ಯಕರ್ತೆ ಪಾರ್ವತಿ, ಆಶಾಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin