ಮೇವಿನಜೋಳ ವಿತರಣೆಯಲ್ಲಿ ಅವ್ಯವಹಾರ : ತಪ್ಪಿತಸ್ಥರ ವಿರುದ್ಧ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

kanakapura
ಕನಕಪುರ, ಆ.27- ಬರಪರಿಹಾರ ಕಾಮಗಾರಿ ಯೋಜನೆಯಡಿ ರೈತರಿಗೆ ಮೇವಿನಜೋಳ ವಿತರಿಸುವ ಯೋಜನೆಯಲ್ಲಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ಶಿವನಹಳ್ಳಿ ಗ್ರಾಮದ ಪಶುವೈದ್ಯ ಆಸ್ಪತ್ರೆಯಲ್ಲಿ ಜಾನುವಾರು ಮತ್ತು ನೀರಾವರಿ ಹೊಂದಿರುವ ರೈತರಿಗೆ ಸರ್ಕಾರ ಪಶು ಇಲಾಖೆಯಿಂದ ವಿತರಿಸುವ ಜೋಳದ ಚೀಲಗಳನ್ನು ಸರ್ಕಾರದ ನಿಯಮದಂತೆ ವಿತರಿಸದೇ ಮನಬಂದಂತೆ ವಿತರಿಸುತ್ತಿದ್ದಾರೆ. ಪ್ರತಿಯೊಬ್ಬ ರೈತನಿಗೆ ಜಮೀನಿನ ಪಹಣಿಯನ್ನು ಪಡೆದು 5 ಕೆಜಿ ಜೋಳದ ಚೀಲವನ್ನು ವಿತರಿಸುವಂತೆ ನಿಯಮವಿದ್ದರೂ ಅದನ್ನು ಉಲ್ಲಂಘಿಸಿ ರೈತರಿಂದ 5 ಕೆಜಿ ಪಡೆಯಲಾಗಿದೆ ಎಂಬ ಸಹಿ ಪಡೆದು 3 ಕೆಜಿ ಜೋಳದ ಚೀಲವನ್ನು ವಿತರಿಸುತ್ತಿದ್ದಾರೆ.

ಸುದ್ದಿ ತಿಳಿದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರು, ಪಕ್ಷದ ಮುಖಂಡರು ಶಿವನಹಳ್ಳಿ ಪಶು ಇಲಾಖೆಗೆ ಹಠಾತ್ ಭೇಟಿ ನೀಡಿ ಅಲ್ಲಿನ ಅವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.  ಜಿಪಂ ಸದಸ್ಯರು ಶಿವನಹಳ್ಳಿ ಪಂಚಾಯತಿ ವ್ಯಾಪ್ತಿಯ ಅಣಜವಾಡಿದೊಡ್ಡಿ, ಗಡಸಳ್ಳಿ, ಸೀಗೇಕೋಟೆ ಸೇರಿದಂತೆ ಬಹುತೇಕ ಊರುಗಳ ರೈತರನ್ನು ಸಂಪರ್ಕಿಸಿದಾಗ 5 ಕೆಜಿಯ ಬದಲು 3 ಕೆಜಿ ನೀಡುವುದು ಕಂಡುಬಂದಿದೆ. ಚೀಲದ ಮೇಲೆ 5 ಕೆಜಿ ಎಂದು ಮುದ್ರಿಸಿರುವ ಇದನ್ನು ತೂಕ ಮಾಡಿದರೆ 4.5 ಕೆಜಿ, 3 ಕೆಜಿಯ ಬ್ಯಾಗ್, 2.6 ಕೆಜಿ ಇರುವುದು ಕಂಡುಬಂದಿದೆ. ಇದರಿಂದ ಸಿಟ್ಟಿಗೆದ್ದ ಸದಸ್ಯರು ಕನಕಪುರ ಪಶು ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಕಡತ, ಇನ್ನಿತರೆ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು.

ಬರ ಕಾಮಗಾರಿ ಜೋಳ ವಿತರಣೆಯಲ್ಲಿ ನಡೆಸುತ್ತಿರುವ ಅನ್ಯಾಯ, ಅಕ್ರಮ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಸದಸ್ಯರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಶೈಲಜ, ಉಪನಿರ್ದೇಶಕ ಸಿದ್ದರಾಮಯ್ಯ ಹಾಗೂ ತಾಪಂ ಅಧಿಕಾರಿಗಳು ಭೇಟಿ ನೀಡಿ ಪಶು ಇಲಾಖೆಯಲ್ಲಿನ ಜೋಳದ ಚೀಲ ಮತ್ತು ಕಡತಗಳನ್ನು ಪರಿಶೀಲನೆ ನಡೆಸಿದರು.ನಂತರ ಮಾತನಾಡಿದ ಸಿಇಒ,ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

ಈಗಾಗಲೇ ವಿತರಣೆಯಲ್ಲಾಗಿರುವ ವ್ಯತ್ಯಾಸವನ್ನು ಸರಿಪಡಿಸಿ ಕಡಿಮೆ ಪಡೆದಿರುವ ರೈತರಿಗೆ ಉಳಿದ ಜೋಳವನ್ನು ಕೂಡಲೇ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.ತುಂಗಣಿ ಜಿಪಂ ಸದಸ್ಯೆ ಉಷಾರವಿ, ಶಿವನಹಳ್ಳಿ ಜಿಪಂ ಸದಸ್ಯೆ ಭಾಗ್ಯಶಾಂತರಾಜ್, ತಾಪಂ ಸದಸ್ಯರಾದ ಜಗದೀಶ್, ಶ್ರೀನಿವಾಸ್ ಮತ್ತು ತಾಪಂ ಮಾಜಿ ಉಪಾಧ್ಯಕ್ಷ ರಾಜಶೇಖರ್, ಗ್ರಾಪಂ ಸದಸ್ಯ ವೀರಪ್ಪ ಸೇರಿದಂತೆ ಅನೇಕ ಮುಖಂಡರು ಬರಪರಿಹಾರ ಕಾಮಗಾರಿಯಲ್ಲಿ ಪಶು ವೈದ್ಯ ಇಲಾಖೆ ನಡೆಸುತ್ತಿರುವ ಅನ್ಯಾಯ ಮತ್ತು ವಂಚನೆಯನ್ನು ಕೂಡಲೇ ಸರಿಪಡಿಸುವಂತೆ ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin