ಮೇವಿನ ಬರ : ಸಾಕಲಾಗದೆ ಜಾನುವಾರುಗಳನ್ನು ಮಾರಾಟಮಾಡುತ್ತಿರುವ ರೈತರು

ಈ ಸುದ್ದಿಯನ್ನು ಶೇರ್ ಮಾಡಿ

Januvaru-002

ಬೆಂಗಳೂರು,ನ.4-ಭೀಕರ ಬರದಿಂದ ತತ್ತರಿಸಿರುವ ರಾಜ್ಯದಲ್ಲಿ ಹೈನುಗಾರಿಕೆ ಮೇಲೆ ಗಂಭೀರ ಪರಿಣಾಮ ಬೀರತೊಡಗಿದೆ. ಬರದ ಕರಾಳ ಛಾಯೆಗೆ ಸಿಲುಕಿದ ರೈತ ಸಮುದಾಯ ತಮ್ಮ ಜಾನುವಾರುಗಳ ಮೇವಿಗೆ ಪರದಾಡುವ ಪರಿಸ್ಥಿತಿ ಕಂಡುಬಂದಿದೆ.  ಜಾನುವಾರುಗಳ ಪಾಲಿಗೆ ಸುಗ್ಗಿಯಾಗಬೇಕಿದ್ದ ನವೆಂಬರ್ ತಿಂಗಳಲ್ಲೇ ಮೇವಿಗೆ ಬರ ಉಂಟಾಗಿದೆ. ಇದರಿಂದ ರೈತರು ಜಾನುವಾರುಗಳನ್ನು ಸಾಕಲಾಗದೆ ಮಾರಾಟ ಮಾಡಲು ಮುಂದಾಗಿದ್ದಾರೆ. ಮೇವಿನ ಅಭಾವದ ಹಿನ್ನೆಲೆಯಲ್ಲಿ ಬಹುತೇಕ ರೈತರು ತಮ್ಮ ಹಸು, ಎಮ್ಮೆಗಳನ್ನು ಮಾರುತ್ತಿದ್ದಾರೆ. ಆದರೆ ಖರೀದಿಸುವವರೇ ಇಲ್ಲದಂತಾಗಿದೆ. ಇದರ ಪರಿಣಾಮ ಬೆಲೆ ಅರ್ಧದಷ್ಟು ಕುಸಿತ ಕಂಡಿದೆ. ರಾಜ್ಯದಲ್ಲಿ ಕ್ಷೀರ ಕ್ರಾಂತಿ ಉಂಟಾಗಿ ರೈತರ ಪಾಲಿಗೆ ಹೈನುಗಾರಿಕೆ ವರವಾಗಿತ್ತು.

ನಿತ್ಯ ರಾಜ್ಯದ 13 ಹಾಲು ಉತ್ಪಾದಕರ ಒಕ್ಕೂಟಗಳಿಂದ ಸುಮಾರು 70 ಲಕ್ಷ ಲೀಟರ್ ಮಾರುಕಟ್ಟೆಗೆ ಬರುತ್ತಿದೆ. ಇನ್ನು ಮುಂದೆ ಗಣನೀಯವಾಗಿ ಹಾಲಿನ ಉತ್ಪಾದನೆಯಾಗಲಿದೆ. ಮುಂಗಾರು ಮಳೆಗಾಲ ಮುಗಿದಿದ್ದು ಹಿಂಗಾರು ಮಳೆ ಕೂಡ ಆಶಾದಾಯಕವಾಗಿಲ್ಲ. ಹೀಗಾಗಿ ಜಾನುವಾರುಗಳಿಗೆ ಅಗತ್ಯವಿರುವ ಮೇವು ಉತ್ಪಾದನೆ ಮಾಡಿಕೊಳ್ಳುವುದು ರೈತರ ಪಾಲಿಗೆ ಸಾಧ್ಯವಾಗುತ್ತಿಲ್ಲ. ಹೀಗಿರುವ ಮೇವು ಹೆಚ್ಚೆಂದರೆ ಸಂಕ್ರಾಂತಿವರೆಗೆ ಮಾತ್ರ ಸಾಕಾಗಬಹುದು.   ಮುಂದಿನ 5 ತಿಂಗಳುಗಳ ಕಾಲ ಬೇಸಿಗೆಯಲ್ಲಿ ಜಾನುವಾರುಗಳನ್ನು ಸಾಕುವುದು ರೈತರ ಪಾಲಿಗೆ ಭಾರೀ ಸವಾಲಾಗಿದೆ. ಈ ಬಾರಿ ಜಲಾಶಯಗಳಲ್ಲೂ ನೀರಿನ ಕೊರತೆ ಕಾಡತೊಡಗಿದೆ. ನೀರಾವರಿ ಪ್ರದೇಶದಲ್ಲೂ ಕೂಡ ಮೇವಿನ ಉತ್ಪಾದನೆ ಇಲ್ಲ. ಇದರಿಂದ ನೀರಾವರಿ ಪ್ರದೇಶಗಳಿಂದಲೂ ಮೇವನ್ನು ಖರೀದಿ ಮಾಡಿ ತಂದು ಜಾನುವಾರುಗಳ ಜೀವ ಉಳಿಸಬಹುದು ಎಂಬ ಆಸೆಯೂ ಉಳಿದಿಲ್ಲ.

ಜಾನುವಾರುಗಳು ಕಸಾಯಿಖಾನೆಗಳ ಪಾಲಾಗುವುದೇ ಹೆಚ್ಚಲಿದೆ ಎಂಬುದು ಬಹುತೇಕ ರೈತರ ಆತಂಕ. ಅಂತರ್ಜಲವು ಪಾತಾಳ ತಲುಪಿದ್ದು , ಬೋರ್‍ವೆಲ್‍ಗಳು ಕೂಡ ಒಂದರ ಹಿಂದೆ ಮತ್ತೊಂದು ಎಂಬಂತೆ ಬರಿದಾಗತೊಡಗಿವೆ.  ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಒಣಗಿವೆ. ಒಂದೆಡೆ ಮೇವಿನ ಸಮಸ್ಯೆಯಾದರೆ ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆಯು ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ಜಾನುವಾರುಗಳ ಪಾಲಿಗೆ ಈ ಬಾರಿಯ ಬರ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.  ರಾಜ್ಯದಲ್ಲಿ ಈಗಾಗಲೇ 139 ತಾಲ್ಲೂಕುಗಳು ಬರ ಪೀಡಿತ ಪ್ರದೇಶಗಳಲ್ಲೂ ಘೋಷಿತವಾಗಿದ್ದು ಇಡೀ ರಾಜ್ಯವನ್ನೇ ಬರ ಪ್ರದೇಶವೆಂದು ಘೋಷಣೆ ಮಾಡುವ ದಿನಗಳು ದೂರ ಉಳಿದಿಲ್ಲ. ಸರಕಾರ ರೈತರ ನೆರವಿಗೆ ಧಾವಿಸಿ ಬರಪೀಡಿತ ಪ್ರದೇಶಗಳಲ್ಲಿ ಮೇವು ಬ್ಯಾಂಕ್‍ಗಳನ್ನು ಸ್ಥಾಪನೆ ಮಾಡದಿದ್ದರೆ ಜಾನುವಾರುಗಳು ಉಳಿಯುವುದು ಕಷ್ಟ ಎಂಬುದು ರೈತರ ಆತಂಕವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin