ಮೇ 2ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಫಿಕ್ಸ್..?

ಈ ಸುದ್ದಿಯನ್ನು ಶೇರ್ ಮಾಡಿ

bjp--congres-jds

ನವದೆಹಲಿ, ಅ.25- 2018ರ ವರ್ಷದ ಮಹಾನ್ ತೀರ್ಪು ಎಂದೇ ಬಿಂಬಿತವಾಗಿ ರಾಷ್ಟ್ರ ರಾಜಕಾರಣಕ್ಕೆ ಹೊಸ ದಿಕ್ಸೂಚಿಯಾಗಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಮೇ 2ರಂದು ನಡೆಯುವ ಸಾಧ್ಯತೆ ನಿಚ್ಚಳವಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಒಂದೇ ಹಂತದಲ್ಲಿ ಮೇ 2ರಂದು ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಆಗೆ ಪತ್ರ ಬರೆಯಲಾಗಿದೆ.

ಕೇಂದ್ರ ಮುಖ್ಯಚುನಾವಣಾ ಆಯುಕ್ತ ಅಚಲ್‍ಕುಮಾರ್ ಜ್ಯೋತಿ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಅಲೌಪಚಾರಿಕ ಮಾತುಕತೆ ನಡೆಸಿದ್ದು, ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆ ವರ್ಷಾದಾದ್ಯಂತದಲ್ಲಿ ನಡೆಯಲಿದ್ದು, ಯಾವುದೇ ಸಂದರ್ಭದಲ್ಲೂ ಆಯೋಗ ದಿನಾಂಕವನ್ನು ಘೋಷಣೆ ಮಾಡುವ ಸಂಭವವಿದೆ.  ಗುಜರಾತ್ ಹಾಗೂ ಹಿಮಾಚಲಪ್ರದೇಶಗಳ ವಿಧಾನಸಭೆ ಚುನಾವಣೆ ಮುಗಿದರೆ ಮುಂದಿನ ಡಿಸೆಂಬರ್ ವರೆಗೂ ಕರ್ನಾಟಕ ಹೊರತುಪಡಿಸಿದರೆ ಯಾವುದೇ ರಾಜ್ಯಗಳ ಚುನಾವಣೆ ಎದುರಾಗುವುದಿಲ್ಲ. ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಗಢ ರಾಜ್ಯಗಳಿಗೆ ಚುನಾವಣೆ ಜರುಗಲಿದೆ.

ಮೇ ತಿಂಗಳಿನಲ್ಲಿ ಚುನಾವಣೆ ನಡೆಸಲು ಭದ್ರತಾ ಪಡೆ, ಇವಿಎಂ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಗ ಇಂತಹ ತೀರ್ಮಾನ ಕೈಗೊಂಡಿದೆ. ಮಾರ್ಚ್, ಏಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಹಂತದ ಪರೀಕ್ಷೆಗಳನ್ನು ಮುಗಿಸುವಂತೆ ಪರೀಕ್ಷಾ ಮಂಡಳಿಗೂ ಸೂಚನೆ ಕೊಡಲಾಗಿದೆ. ಇದರ ಜತೆಗೆ ವೃತ್ತಿಪರ ಕೋರ್ಸ್‍ಗಳಾದ ಎಂಜನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ ಮತ್ತಿತರ ಕೋರ್ಸ್‍ಗಳಿಗೆ ಮಾರ್ಚ್ ಇಲ್ಲವೇ ಏಪ್ರಿಲ್ ತಿಂಗಳ ಮಧ್ಯದಲ್ಲಿ ಸಿಟಿ ಪರೀಕ್ಷೆಯನ್ನು ಮುಗಿಸುವಂತೆ ಸೂಚಿಸಲಾಗಿದೆ.
ಮೇ ತಿಂಗಳ ಮಧ್ಯ ಭಾಗದಲ್ಲಿ ಕರಾವಳಿ, ಮಲೆನಾಡು ಸೇರಿದಂತೆ ಮತ್ತಿತರ ಕಡೆ ಮಳೆಗಾಲ ಆರಂಭವಾಗುವುದರಿಂದ ಮೇ 2ರಂದು ಮತದಾನ ನಡೆಸಿ ಮೊದಲ ವಾರದಲ್ಲೇ ಮತ ಎಣಿಕೆ ನಡೆಸಲು ಆಯೋಗ ಮುಂದಾಗಿದೆ.

2013ರ ವಿಧಾನಸಭೆ ಚುನಾವಣೆಯನ್ನು ಮೇ 5ರಂದು ನಡೆಸಲಾಗಿತ್ತು. 2018ರ ಮೇ 5ರವರೆಗೆ ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿ ಪೂರ್ಣಗೊಳ್ಳುವುದರಿಂದ ಚುನಾವಣೆ ಪ್ರಕ್ರಿಯೆಯನ್ನು ನಡೆಸುವ ಹೊಣೆಗಾರಿಕೆ ಆಯೋಗದ ಮೇಲಿದೆ.  ಕೇಂದ್ರ ಚುನಾವಣಾ ಆಯೋಗ 2018ರ ಮೇ 2ರಂದು ಚುನಾವಣೆ ನಡೆಸಬಹುದೇ ? ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. ಆದರೆ, ಅಧಿಕೃತವಾದ ಯಾವುದೇ ದಿನಾಂಕವನ್ನು ನಿಗದಿ ಮಾಡಿಲ್ಲ. ಮೇ ಮೊದಲ ವಾರದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಆದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇನ್ನೂ ಆಯೋಗಕ್ಕೆ ಉತ್ತರ ನೀಡಿಲ್ಲ.

ಚುನಾವಣೆ ಪ್ರಕ್ರಿಯೆಯಲ್ಲಿ ಶಿಕ್ಷಕರು ಪಾಲ್ಗೊಳ್ಳುವುದರಿಂದ ಅದೇ ಸಮಯದಲ್ಲಿ ಪರೀಕ್ಷೆ ನಡೆಸಿದರೆ ಉಂಟಾಗುವ ತೊಂದರೆಗಳ ಬಗ್ಗೆ ಶಿಕ್ಷಣ ಇಲಾಖೆ ಪರಾಮರ್ಶೆ ನಡೆಸಿತ್ತು. ಪ್ರಸಕ್ತ ವಿಧಾನಸಭೆಯ ಅವಧಿ ಮೇ 28 ಕ್ಕೆ ಕೊನೆಗಳೊಳ್ಳಲಿದೆ. ಆಯೋಗವು ಅದಕ್ಕೂ ಬಹಳ ಮುನ್ನವೇ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾಗಿದೆ. ಹಾಗಾಗಿ ಪರೀಕ್ಷೆಗಳಿಗೆ ತೊಂದರೆಯಾಗದಂತೆ ವೇಳಾಪಟ್ಟಿ ನಿಗದಿಪಡಿಸುವ ಸಂಬಂಧ ಚುನಾವಣೆ ಆಯೋಗದಿಂದ ಸ್ಪಷ್ಟನೆ ಬಯಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಎಸ್‍ಎಸ್‍ಎಲ್ ಸಿ ಹಾಗೂ ಪಿಯುಸಿ ವೇಳಾಪಟ್ಟಿ ನಿಗದಿಪಡಿಸುವ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಸಿದ್ಧತೆಗಳನ್ನು ಆರಂಭಿಸಿವೆ. ಬಿಜೆಪಿ ನವೆಂಬರ್ 2ರಿಂದ ಕರ್ನಾಟಕ ಪ್ರವಾಸ ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ನಲ್ಲಿ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಹ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

Facebook Comments

Sri Raghav

Admin