ಮೈತ್ರಿ ಸರ್ಕಾರ ಉರುಳಿಸಲು ಯಾರೂ ಷಡ್ಯಂತ್ರ ಮಾಡಿಲ್ಲ ; ಜಮೀರ್
ಹುಬ್ಬಳ್ಳಿ, ಆ.28-ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಲು ಯಾರೂ ಷಡ್ಯಂತ್ರ ಮಾಡಿಲ್ಲ. ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಇಂದಿಲ್ಲಿ ಹೇಳಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದ ಹೇಳಿಕೆಯಿಂದ ಗೊಂದಲ ಉಂಟಾಗಿದೆ. ಅವರು ಮುಂದಿನ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರ ಸರ್ಕಾರ ಬೀಳಿಸಿ ಸಿಎಂ ಆಗುತ್ತೇನೆ ಎಂದು ಹೇಳಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಯಾವತ್ತಿದ್ದರೂ ಅವರೇ ನಮ್ಮ ನಾಯಕರು. ಅವರು ಕೈಗೊಂಡಿರುವ ಯುರೋಪ್ ಪ್ರವಾಸ ಪೂರ್ವ ನಿಗದಿಯಾದದ್ದು. ಅದರಲ್ಲೇನು ವಿಶೇಷತೆ ಇಲ್ಲ. ಅವರ ಜೊತೆ ಸಚಿವರು ಹೋಗುತ್ತಿದ್ದಾರೆ. ಕರೆದಿದ್ದರೆ ನಾನೂ ಹೋಗುತ್ತಿದ್ದೆ ಎಂದು ತಿಳಿಸಿದರು.
ಹಾವೇರಿ ಜಿಲ್ಲೆ ಉಸ್ತುವಾರಿಯಾಗಿರುವುದರಿಂದ ಹಾವೇರಿ ಜಿಲ್ಲೆಗೆ ಪ್ರಚಾರಕ್ಕೆ ಆಗಮಿಸಿದ್ದೇನೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.