ಮೈಸೂರಲ್ಲಿ ಶ್ರೀಗಂಧದ ಕಳ್ಳರ ಮೇಲೆ ಶೂಟೌಟ್ : ಓರ್ವ ಸಾವು, 7 ಮಂದಿ ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Mysurtu-Shootout

ಮೈಸೂರು, ಫೆ.11- ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಗಂಧದ ಮರಗಳ್ಳನೊಬ್ಬ ಬಲಿಯಾಗಿದ್ದು, ಇತರೆ 7 ಮಂದಿ ಪರಾರಿಯಾಗಿರುವ ಘಟನೆ ಇಂದು ಮುಂಜಾನೆ ಜರುಗಿದೆ. ನಗರ ಹೊರವಲಯದ ರಾಮಕೃಷ್ಣ ನಗರ ಬಳಿಯ ಲಿಂಗಾಂಬುದಿ ಕೆರೆಯ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ.  ಈ ಅರಣ್ಯ ಪ್ರದೇಶಕ್ಕೆ ಚಿರತೆ ಬಂದಿರುವ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯವರು ಕಳೆದ ಎರಡು ದಿನಗಳಿಂದ ಬೋನು ಇಟ್ಟು ಕಾಯುತ್ತಿದ್ದರು. ಇಂದು ಮುಂಜಾನೆ ಮೂರು ಗಂಟೆ ಸುಮಾರಿನಲ್ಲಿ ಚಿರತೆ ಬಂದಿರಬಹುದು ಎಂದು ಅರಣ್ಯದಲ್ಲಿ ಶೋಧ ನಡೆಸುವಾಗ ಗಂಧದ ಮರ ಕಳ್ಳರು ಮರಗಳನ್ನು ಕತ್ತರಿಸುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಮರಗಳ್ಳರನ್ನು ಸುತ್ತುವರೆದು ಶರಣಾಗುವಂತೆ ಸೂಚಿಸಿದ್ದಾರೆ.
ಈ ವೇಳೆ ಮರಗಳ್ಳರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದ್ದಾರೆ. ಕೂಡಲೇ ಅರಣ್ಯ ಸಿಬ್ಬಂದಿ ಕಳ್ಳರತ್ತ ಗುಂಡಿನ ದಾಳಿ ನಡೆಸಿದ್ದಾರೆ.

Mysurtu-Shootout-1

ಗುಂಡಿನ ದಾಳಿಗೆ ಒಬ್ಬ ಮರಗಳ್ಳ ಬಲಿಯಾಗಿದ್ದು, ಇತರೆ 7 ಮಂದಿ ಪರಾರಿಯಾಗಿದ್ದಾರೆ. ಗುಂಡೇಟಿಗೆ ಬಲಿಯಾಗಿರುವ ಶ್ರೀಗಂಧಮರಕಳ್ಳನ ಗುರುತು ಪತ್ತೆಯಾಗಿಲ್ಲ. ಆತನ ಕೈ ಮೇಲೆ ರವಿಕೃಷ್ಣ ಹೆಸರಿನ ಹಚ್ಚೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.  ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯರಾವ್, ಡಿಎಫ್‍ಒ ಕರಿಕಾಳನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.  ಈ ಸಂಬಂಧ ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನಾ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರು ಕತ್ತರಿಸಿದ್ದ ಶ್ರೀಗಂಧ ಮರದ ತುಂಡುಗಳು, ಮರಕತ್ತರಿಸಲು ಬಳಸಿದ್ದ ಸಾಧನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Mysurtu-Shootout-3

Facebook Comments

Sri Raghav

Admin