ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಮತ್ತೊಂದು ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Jaganmohana-palce

ಬೆಂಗಳೂರು, ಜ.28- ಜ್ವರದ ಭೀತಿಯಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಮೃಗಾಲಯ ಬಂದ್ ಆಗಿರುವ ಬೆನ್ನಲ್ಲೇ ಇದೀಗ ಮೈಸೂರಿಗೆ ಪ್ರವಾಸಕ್ಕೆಂದು ಆಗಮಿಸಿವು ಪ್ರವಾಸಿಗರಿಗೆ ಮತ್ತೊಂದು ಶಾಕ್ ಎದುರಾಗಿದೆ. ಮೈಸೂರಿನ ಮತ್ತೊಂದು ಪ್ರವಾಸಿ ತಾಣವಾದ ಜಗನ್ಮೋಹನ ಅರಮನೆಯನ್ನ ದುರಸ್ತಿ ಕಾರಣಕ್ಕಾಗಿ ಸದ್ಯವೇ ಒಂದು ತಿಂಗಳು ಕಾಲ ಮುಚ್ಚಲು ಸಿದ್ಧತೆ ನಡೆದಿದೆ. ಸುಮಾರು 156 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಜಗನ್ ಮೋಹನ ಅರಮನೆಯ ಕಲಾ ಗ್ಯಾಲರಿ, ಸಭಾಂಗಣ ಸೇರಿದಂತೆ ಇಡೀ ಕಟ್ಟಡದ ಗೋಡೆ, ಚಾವಣಿ ಶಿಥಿಲಗೊಂಡಿರುವುದರಿಂದ ದುರಸ್ತಿ ಮಾಡಿಸಲು, ಅದರ ಮಾಲೀಕತ್ವ ಹೊಂದಿರುವ ರಾಜವಂಶಸ್ಥರು ನಿರ್ಧರಿಸಿದ್ದಾರೆ.

ಹೀಗಾಗಿ, ಸದ್ಯದಲ್ಲಿಯೇ ಅರಮನೆ ಪ್ರವಾಸಿಗರಿಗೆ ಅಲಭ್ಯವಾಗಲಿದೆ ಎಂದು ಅರಮನೆಯ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಮೈಸೂರಿಗೆ ನಿತ್ಯ ಬರುವ ಎಲ್ಲ ಪ್ರವಾಸಿಗರು ಅಂಬಾವಿಲಾಸ ಅರಮನೆ ನೋಡಿದ ಬಳಿಕ, ಅದರ ಹಿಂದೆಯೇ ಇರುವ ಜಗನ್ಮೋಹನ ಅರಮನೆಗೆ ಭೈೀಟಿ ನೀಡುವುದು ವಾಡಿಕೆ. ಈ ಗ್ಯಾಲರಿಯಲ್ಲಿ ಅಪರೂಪದ ಎರಡು ಸಾವಿರಕ್ಕೂ ಹೆಚ್ಚು ಚಿತ್ರಣಗಳನ್ನು ಪ್ರದರ್ಶಿಸಲಾಗಿದೆ. ಪ್ರದರ್ಶನದಲ್ಲಿ ರಾಜ ರವಿವರ್ಮ, ರಾಜ ರಾಮವರ್ಮಾ (ಸಹೋದರರು) ಹಾಗೂ ಇನ್ನಿತರ ಪ್ರಖ್ಯಾತ ಕಲಾವಿದರ ಕೈ ಚಳಕದಿಂದ ಮೂಡಿಬಂದಿರುವ ಚಿತ್ರಗಳಿವೆ. ಅಲ್ಲದೆ ಹಲ್ದೆಂಕರ್ ಅವರ ತೈಲಚಿತ್ರ ಲೈಟ್ ಆಫ್ ಹೋಪ್ (ಭರವಸೆಯ ಬೆಳಕು) ಚಿತ್ರಣ ಕೂಡ ಇಲ್ಲಿದೆ.

ನಗರದ ಹೃದಯಭಾಗದಲ್ಲಿರುವ ಈ ಅರಮನೆ ಪ್ರವಾಸಿ ತಾಣವೂ ಆಗಿರುವುದರಿಂದ ಪ್ರತಿದಿನ ವಿವಿಧೆಡೆಗಳಿಂದ ನೂರಾರು ಮಂದಿ ಪ್ರವಾಸಿಗರು, ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಆರ್ಟ್ ಗ್ಯಾಲರಿಗೆ ಭೇಟಿ ನೀಡಿ ಇಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದರು. ಇದರ ಜೊತೆಗೆ ಸಭಾಂಗಣದಲ್ಲಿ ಪ್ರತಿದಿನ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ವಾರ್ಷಿಕೋತ್ಸವ, ಗೀತಗಾಯನ ಕಾರ್ಯಕ್ರಮಗಳು, ಸರಕಾರಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದೀಗ ದುರಸ್ತಿಗಾಗಿ ಜಗನ್ ಮೋಹನ ಅರಮನೆಯನ್ನು ಬಂದ್ ಮಾಡುವ ಅನಿವಾರ್ಯತೆ ಎದುರಾಗಿರುವುದರಿಂದ ಈ ಎಲ್ಲಾ ಚಟುವಟಿಕೆಗಳಿಗೂ ತಿಂಗಳ ಕಾಲ ಸಭಾಂಗಣ ಲಭ್ಯವಾಗದು.

ಮೈಸೂರು ಸಂಸ್ಥಾನವನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇದನ್ನು 1 861ರಲ್ಲಿ ನಿರ್ಮಿಸಿದ್ದರು. ಈ ನಡುವೆ ಮೈಸೂರಿನ ಹಳೆಯ ಅರಮನೆ ಬೆಂಕಿಗೆ ಆಹುತಿಯಾದ ವೇಳೆ 1897ರಲ್ಲಿ ರಾಜವಂಶಸ್ಥರು ಜಗನ್ಮೋಹನ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಹಾಲಿ ಇರುವ ಅರಮನೆ ನಿರ್ಮಾಣವಾದ ನಂತರ 1915ರಲ್ಲಿ ಜಗನ್ಮೋಹನ ಅರಮನೆಯಲ್ಲಿದ್ದ ರಾಜವಂಶಸ್ಥರು ಹೊಸ ಅರಮನೆಗೆ ಸ್ಥಳಾಂತರಗೊಂಡರು. ಬಳಿಕ ರಾಜವಂಶಸ್ಥರು ವಾಸಿಸುತ್ತಿದ್ದ ಅರಮನೆಯನ್ನು 1955ರಲ್ಲಿ ಶ್ರೀ ಜಯಚಾಮರಾಜೇಂದ್ರ ಕಲಾ ಗ್ಯಾಲರಿ ಎಂದು ನಾಮಕರಣ ಮಾಡಿ ಸಾರ್ವಜನಿಕರು ಹಾಗೂ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಈ ಹಿಂದೆ ಮೈಸೂರು ವಿಶ್ವವಿದ್ಯಾನಿಯದ ಘಟಿಕೋತ್ಸವವೂ ನಡೆದಿತ್ತು.ಇದರ ಜೊತೆಗೆ 1907ರಲ್ಲಿ ವಿಧಾನ ಪರಿಷತ್‍ನ ಮೊದಲ ಅಧಿವೇಶನವೂ ಇದೇ ಸಭಾಂಗಣದಲ್ಲಿ ನೆರವೇರಿದ್ದನ್ನು ಸ್ಮರಿಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin