ಮೈಸೂರಿಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತದಿಂದ ‘ಟೆಲಿಸ್ಕೋಪ್’ ಪ್ಲಾನ್
ಮೈಸೂರು, ಜು.11-ಮೈಸೂರಿಗೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಚಾಮುಂಡಿ ಬೆಟ್ಟದ ಗೋಪುರದಲ್ಲಿ ದೂರದರ್ಶಕ ಅಳವಡಿಸಲು ಮುಂದಾಗಿದೆ.
ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಈ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ದಸರಾ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದರು.
ಗೋಪುರದ ಮೇಲಿರುವ ತಡೆಗೋಡೆಗಳನ್ನು ಎತ್ತರಕ್ಕೆ ಏರಿಸಲಾಗುತ್ತಿದ್ದು, ಸುತ್ತಲೂ ಬೇಲಿ ಅಳವಡಿಸಿ ಗೋಪುರದ ಮೆಟ್ಟಿಲುಗಳನ್ನು ದುರಸ್ತಿಗೊಳಿಸುವುದರಿಂದ ಉದ್ಯಾನವನ ನಿರ್ಮಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಚಾಮುಂಡಿ ಬೆಟ್ಟದ ಗೋಪುರ ವೀಕ್ಷಣೆಗೆ ನೂರಾರು ಮಂದಿ ಆಗಮಿಸುತ್ತಿದ್ದಾರೆ. ಗೋಪುರದ ಮೇಲಿಂದ ಮೈಸೂರು ನಗರದ ಸೌಂದರ್ಯ ಸವಿಯುತ್ತಿದ್ದಾರೆ. ಯು ಆಕಾರದಲ್ಲಿ ಉದ್ಯಾನವನ ನಿರ್ಮಿಸಿ ವಿವಿಧ ಬಣ್ಣದ ಹೂಗಿಡಗಳನ್ನು ಬೆಳೆಸಲಾಗುತ್ತದೆ. ಇದಕ್ಕೂ ಮುನ್ನ ಗೋಪುರ ಅಭಿವೃದ್ದಿ ಕಾಮಗಾರಿ ಮುಗಿಸಿ ನಂತರ ಟೆಲಿಸ್ಕೋಪ್ ಅಳವಡಿಸಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಹಾಗೆಯೇ ವೀಕ್ಷಣಾಗೋಪುರಕ್ಕೆ ತೆರಳುವ ಸಮಯವನ್ನು ನಿಗದಿಪಡಿಸಲಾಗುತ್ತದೆ ಎಂದು ಹೇಳಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS