ಮೈಸೂರು ಅರಸರ ಕಲಾ ವಿಲಾಸಕ್ಕೆ ಸಾಕ್ಷಿ ಈ ‘ಅಂಬಾ ವಿಲಾಸ’
ನಾಡಿನ ರಾಜಮನೆತನಗಳಲ್ಲಿ ವಿಶೇಷ ಸ್ಥಾನಮಾನ ಮೈಸೂರಿನ ಅರಸರಿಗೆ ಲಭಿಸಿದೆ. ಇವರ ಆಡಳಿತ ಕೇಂದ್ರ ಬಿಂದುವಾದ ಅಂಬಾವಿಲಾಸ ಅರಮನೆ ಇಂದಿನ ಆಧುನಿಕ, ತಾಂತ್ರಿಕ, ವೈಜ್ಞಾನಿಕ ಯುಗದಲ್ಲೂ ಎಲ್ಲರ ಗಮನ ಸೆಳೆಯುವಲ್ಲಿ ಹಿಂದೆ ಬೀಳದೆ ಈ ಅರಮನೆ ಕಲೆ, ಸಾಂಸ್ಕೃತಿ ತೊಟ್ಟಿಲು ಎಂದರೂ ತಪ್ಪಾಗದು. ಅಂದಿನ ಮೈಸೂರು ಅರಸರ ಕಲೆಗಳ ಮೇಲಿನ ಆಸಕ್ತಿಗೆ ಪೂರಕವಾಗಿ ನಿರ್ಮಾಣವಾಗಿದೆ. ರಾಜಕುಮಾರಿಯ ವಿವಾಹ ಸಂದರ್ಭದಲ್ಲಿ ಹಿಂದಿನ ಅರಮನೆ ಅಗ್ನಿಗೆ ಆಹುತಿಯಾದ ನಂತರ ನಿರ್ಮಾಣವಾದ ಅಂಬಾವಿಲಾಸ ಕಲಾತ್ಮಕತೆಯನ್ನೇ ಹೊತ್ತು ನಿಂತಿದೆ.
ಈ ಅರಮನೆ ಪ್ರವೇಶಿಸಲು ನಾಲ್ಕು ಕಡೆಗಳಲ್ಲಿ ಬಾಗಿಲುಗಳಿದ್ದು , ಉತ್ತರ ಭಾಗದ ಅಂಚಿನ ಬಾಗಿಲು ದರ್ಬಾರ್ ಹಾಲ್ಗೆ ತೆಗೆದುಕೊಂಡರೆ ಪೂರ್ವದಲ್ಲಿ ಮೂರು ಬಾಗಿಲುಗಳಿವೆ. ಬೆಳ್ಳಿ ಬಾಗಿಲು ಪ್ರಭುಗಳ ಪ್ರವೇಶಕ್ಕೆ ಮಾತ್ರ ಬಳಸಲಾಗುತ್ತಿದ್ದು, ಉಳಿದೆರಡು ಬಾಗಿಲುಗಳು ಅರಮನೆಯ ಉಳಿದವರ ಅಂತಸ್ತನ್ನು ಅನುಸರಿಸಿ ಕೆಲವರು ಬಲ ಮತ್ತು ಕೆಲವರು ಎಡ ಬಾಗಿಲಿನಿಂದ ಪ್ರವೇಶ ಮಾಡುವುದು ಪದ್ಧತಿ. ಮೊಗಸಾಲೆಯ ಐದು ಮೆಟ್ಟಿಲುಗಳು ಅಂಬಾವಿಲಾಸಕ್ಕೆ ತೆಗೆದುಕೊಳ್ಳುವ ಮೂರು ಬಾಗಿಲುಗಳಲ್ಲಿ ಕೊನೆಯಾಗುತ್ತದೆ. ಅವುಗಳಲ್ಲಿ ಮಧ್ಯದ ಬಾಗಿಲು ಬೇಲಿಯ ಬಾಗಿಲುಗಳಾಗಿದ್ದು, ಇದರ ಮೇಲೆ ಐದು ಚಚ್ಚೌಕಾದ ವಿನ್ಯಾಸವಿದೆ.
ಪ್ರತಿ ಚೌಕದಲ್ಲೂ ವಿವಿಧ ದೇವತೆಗಳ ಉಬ್ಬು ಚಿತ್ರಗಳು ಬೆಳ್ಳಿ ಬಾಗಿಲಿನ ಅಕ್ಕಪಕ್ಕಗಳಲ್ಲಿ ದಂತದ ಕುಸುರಿ ಕಣ್ಣು ಕುಕ್ಕಿಸುತ್ತವೆ. ಪಶ್ಚಿಮ ಭಾಗದ ಬಾಗಿಲುಗಳ ಮೂಲಕ ಗೋಡೆಗಳ ಮೇಲಿನ ಸುಂದರ ವರ್ಣ ಚಿತ್ರಗಳು, ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಹೇಳುತ್ತವೆ. ಅರಮನೆಯ ಬಗ್ಗೆ ಭಾರತಕ್ಕೆ ಭೇಟಿ ನೀಡಿದ ಹೆಸರಾಂತ ಕಲಾವಿದರು ಹೊಗಳಿರುವುದೇ ಅದಕ್ಕೆ ಸಿಕ್ಕ ಮಾನ್ಯತೆ. ಅರಮನೆಯಲ್ಲಿ ಪ್ರಮುಖವಾಗಿ ಕಲ್ಯಾಣ ಮಂಟಪ, ದರ್ಬಾರ್ ಹಾಲ್, ಶಸ್ತ್ರಗಾರ ಹಾಗೂ ಸಂಗೀತ ಕೊಠಡಿ ಹೀಗೆ ವಿವಿಧ ಕೊಠಡಿಗಳಿವೆ.
ಕಲ್ಯಾಣ ಮಂಟಪ:
ಅರಮನೆಯ ಒಳತೊಟ್ಟಿಯ ಪಶ್ಚಿಮ ಭಾಗದಲ್ಲಿರುವ ಹಳೇ ಅರಮನೆಯ ಮಾದರಿಯಲ್ಲೇ ರಾಜರ ಕುಟುಂಬದವರು ವಾಸಿಸುವ ಕೊಠಡಿಗಳು ರಾಣಿ ವಾಸದ ಅಂತಃಪುರಗಳು ಇದ್ದರೆ ಇದರ ದಕ್ಷಿಣಕ್ಕೆ ಕಲ್ಯಾಣ ಮಂಟಪವಿದೆ. ಅಷ್ಠ ಭುಜಾಕೃತಿಯಲ್ಲಿ ನಿರ್ಮಿಸಲಾಗಿರುವ ಇದು ವಾಸ್ತುಶಿಲ್ಪ, ವರ್ಣಚಿತ್ರಗಳಿಂದ ಅಲಂಕೃತಗೊಂಡು ಗಾಜಿನ ಮೇಲ್ಛಾವಣಿ ಹೊಂದಿದೆ. ಇಲ್ಲಿನ ವಿನ್ಯಾಸವನ್ನು ಮಾಡಿರುವುದು ಮೈಸೂರಿನ ಕಲಾವಿದರೇ ಕಲೆ ಎಂಬುದು ಇಲ್ಲಿನ ಹಿರಿಮೆ. ಇದನ್ನು ನವಿಲುತೊಟ್ಟಿ ಎಂದು ಕರೆಯುವುದು ವಾಡಿಕೆ. ಕಾರಣ ಈ ಸಭಾಂಗಣದ ಅಮೃತ ಶಿಲೆಯ ಮೇಲೆ ಚಿತ್ರಿಸಲ್ಪಟ್ಟಿರುವ ವೈವಿಧ್ಯಪೂರ್ಣ ನವಿಲುಗಳ ಚಿತ್ರ ಅಮೋಘವಾಗಿದ್ದು, ಇಡೀ ಕಲ್ಯಾಣಮಂಟಪದಾದ್ಯಂತ ರಚಿಸಿರುವ ಹಲವಾರು ನವಿಲುಗಳಲ್ಲಿ ಯಾವುದೇ ಸಾಮ್ಯತೆ ಇಲ್ಲ. ಒಂದೊಂದು ನವಿಲುಭಿನ್ನವಾಗಿದ್ದು ಗಮನ ಸೆಳೆಯುತ್ತವೆ.
ಕಲ್ಯಾಣ ಮಂಟಪದ ಮೇಲಿನ ಸಭಾಂಗಣದ ಸುತ್ತ ನಾಲ್ಕು ಕಡೆ ಚಿನ್ನದ ರೇಖೆಯ ಸರಳುಗಳ ಪಟ್ಟಿಕೆಗಳ ಕಟಕಟೆಯೊಂದಿಗೆ ಮೊಗಸಾಲೆ ನಿರ್ಮಿಸಲಾಗಿದೆ. ಬಣ್ಣಗಳ ಚಿತ್ತಾರದಲ್ಲಿ ಮತ್ತಷ್ಟು ಸೊಗಸುಗೊಂಡಿರುವ ಈ ಮೊಗಸಾಲೆ ರಾಣಿ ವಾಸದವರ ವೀಕ್ಷಣಾ ಸ್ಥಳ. ಕೆಳಗಿನ ಸಭಾಂಗಣದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳನ್ನು ರಾಣಿವಾಸದವರು ನೋಡುವಾಗ ಅವರನ್ನು ಬೇರೆಯವರು ನೋಡಲಾಗದಂತೆ ಚಿನ್ನದ ಎಳೆಗಳ ಬಟ್ಟೆ ಅಥವಾ ರೇಷ್ಮೆ ವಸ್ತ್ರದ ತೆಳುವಾದ ಪರದೆ ಅಳವಡಿಸಲಾಗಿರುತ್ತದೆ. ಯಾರಿಗೂ ಕಾಣದೆ ಸಭಾಂಗಣದ ಕಾರ್ಯಕ್ರಮಗಳನ್ನು ವೀಕ್ಷಿಸುವ ರೀತಿಯಲ್ಲಿ ಇಲ್ಲಿ ವ್ಯವಸ್ಥೆ ಮಾಡಲಾಗಿರುವುದು ವಿಶೇಷ.
ದರ್ಬಾರ್ಹಾಲ್: ಅರಮನೆಗಳಲ್ಲಿ ದರ್ಬಾರ್ ಹಾಲ್ನದೇ ವಿಶೇಷ ಗತ್ತು. ಅದರ ಗಾಂಭೀರ್ಯತೆಯೊಂದಿಗೆ ಬಣ್ಣಗಳ ವಿನ್ಯಾಸ, ಚಿತ್ರ ವೈವಿಧ್ಯಗಳು, ಕಂಬಗಳ ಸೊಗಸು, ಮೇಲ್ಛಾವಣಿಯ ವೈಭವ, ವಾಸ್ತುಶಿಲ್ಪ ಎಲ್ಲವೂ ಮೇಳೈಸಿ ಆಯಾ ರಾಜ್ಯದ ಭವ್ಯತೆಯನ್ನೇ ಸಾರಿ ಹೇಳುತ್ತವೆ. ಅದರಂತೆ ಇಲ್ಲಿನ ಸಭಾಂಗಣವೂ ಸಹ ಸುಮಾರು 155 ಅಡಿ ಉದ್ದ, 42 ಅಡಿ ಅಗಲ, 100 ಅಡಿ ಎತ್ತರ ಹೊಂದಿ ಬೃಹತ್ ಸಭಾಂಗಣ ಎನಿಸಿದೆ.ಇಲ್ಲಿನ ಪ್ರತಿಯೊಂದು ವೈಶಿಷ್ಟ್ಯತೆಯನ್ನು ವರ್ಣಿಸುವುದು ಕಷ್ಟ ಸಾಧ್ಯ. ಗೋಡೆಗಳು ಮೇಲ್ಛಾವಣಿಗಳೊಡನೆ, ಕಂಬಗಳು ಬಾಗಿಲಿನೊಡನೆ ಸ್ಪರ್ಧಿಸುವ ರೀತಿಯಲ್ಲಿ ಒಂದಕ್ಕಿಂತ ಒಂದು ವಿಶಿಷ್ಟ ರೀತಿಯಲ್ಲಿ ರೂಪಿಸಿರುವುದು ಕಲಾಕಾರನ ವಾಸ್ತುಶಿಲ್ಪಿಯ ನೈಪುಣ್ಯತೆಯನ್ನು ಸೂಚಿಸುತ್ತಿವೆ. ಶಸ್ತ್ರಾಗಾರ: ಶಸ್ತ್ರಾಗಾರ ಆಯುಧಗಳ ಸಂಗ್ರಹವಿರುವ ತಾಣ.
ಇದನ್ನು 4ನೇ ಚಾಮರಾಜ ಒಡೆಯರ್ 1575ರಲ್ಲಿ ಸ್ಥಾಪಿಸಿದ್ದರು. ಆ ಸಂದರ್ಭದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿವಿಧ ಆಯುಧಗಳು ಇಲ್ಲಿತ್ತು. ಮುಮ್ಮಡಿಕೃಷ್ಣರಾಜಯ ಒಡೆಯರ್ ಅವರ ಕಾಲಾವಧಿಯಲ್ಲಿ ಈ ಎಲ್ಲಾ ಆಯುಧಗಳ ಪಟ್ಟಿ ತಯಾರಿಸಿ ಕ್ರಮಸಂಖ್ಯೆ ನೀಡಲಾಗಿತ್ತು. ಇಲ್ಲಿದ್ದ ಎಲ್ಲಾ ಆಯುಧಗಳಿಗೂ ಅದರದೇ ಆದ ಇತಿಹಾಸವೂ ಇತ್ತು. ಕಾಲ ಕ್ರಮೇಣ ಕಣ್ಮರೆಯಾಗಿ ಇದೀಗ 725 ಮಾತ್ರ ಉಳಿದಿದೆ. ಪ್ರತಿ ಆಯುಧದ ಮೇಲೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಅಂಕಿತವಾಗಿದ್ದ ಶ್ರೀ ಕೃಷ್ಣ ಎಂಬ ಹೆಸರನ್ನು ಕೊರೆಸಲಾಗಿತ್ತು. ಹಿಂದಿನ ಕಾಲದಲ್ಲಿ ಯುದ್ಧಗಳಲ್ಲಿ ಬಳಸಲಾಗುತ್ತಿದ್ದ ಎಲ್ಲಾ ಮಾದರಿಯ ಆಯುಧಗಳು ಅದರಲ್ಲೂ ಇತಿಹಾಸ ಪ್ರಸಿದ್ದವಾಗಿದ್ದ ನಿಮ್ಚಾ ಆಯುಧವನ್ನು ಸಹ ಇಲ್ಲಿ ಸಂಗ್ರಹಿಸಲಾಗಿತ್ತು. ವಜ್ರ ಮುಷ್ಠಿ ಕಾಳಗ, ಎಮ್ಮೆಯ ಕೊಂಬಿನ ಅಭ್ಯಾಸದ ಆಯುಧಗಳು, ಇನ್ನಿತರ ಆಯುಧಗಳು ಇಲ್ಲಿವೆ. ಅರೇಳು ಬೃಹತ್ ಪಿರಂಗಿಗಳು ಜೊತೆಗೆ ಮುಮ್ಮಡಿಯವರ ಪಟ್ಟಾಭಿಷೇಕದ ವೇಳೆ ನೀಡಲಾಗಿದ್ದ ಸ್ನೇಹ ಕೊಡುಗೆಗಳು ಇನ್ನಿತರ ಅಲಂಕಾರಿಕ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ಸಂಗೀತ ಕೊಠಡಿ: ಮೈಸೂರಿನ ಮಹರಾಜರು ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಲೆಗಳಿಗೆ ಸಾಕಷ್ಟು ಒತ್ತು ನೀಡಿದ್ದರು ಎಂಬುದಕ್ಕೆ ಈ ಸಂಗೀತ ಕೊಠಡಿಯೇ ಸಾಕ್ಷಿಯಾಗಿ ನಿಲ್ಲುತ್ತದೆ. ನಮ್ಮ ನಾಡನ್ನಾಳಿದ ಮೈಸೂರಿನ ಅರಸರ ಪೈಕಿ ಹಲವರಿಗೆ ಸಾಕಷ್ಟು ಸಂಗೀತ ಜ್ಞಾನವಿದ್ದುದಲ್ಲದೆ ಸಂಗೀತ ಪ್ರೊ ತ್ಸಾಹಿಸಿ ಬೆಳೆಸಿದ್ದರು. ಕಂಠೀರವ ನರಸಿಂಹರಾಜ ಒಡೆಯರ್ಗೆ ಪಾಶ್ಚಾತ್ಯ ಸಂಗೀತದಲ್ಲಿ ಸಾಕಷ್ಟು ಪರಿಣಿತಿ ಇತ್ತು. ಪಿಯಾನೊ ಜೊತೆಗೆ ವಯಲಿನ್ ಕಲಿತ್ತಿದ್ದರು. ಪುತ್ರಿಯಾದ ರಾಜಕುಮಾರಿ ವಿಜಯಾ ದೇವಿ, ಲಂಡನ್ನ ಟ್ರಿನಿಟಿ ಕಾಲೇಜಿನಲ್ಲಿ ಸಂಗೀತ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು. ಅರಮನೆಯಲ್ಲಿ ವಾದ್ಯಗೋಷ್ಠಿ ನಡೆಸಿ ಸಂಗೀತ ಕಲಾವಿದರನ್ನು ಉತ್ತೇಜಿಸುತ್ತಿದ್ದರು. ಸಂಗೀತ ಕೊಠಡಿಯಲ್ಲಿ ಪಾಶ್ಚತ್ಯ ವಾದ್ಯಗಳಿಗೆ ಆದ್ಯತೆ ನೀಡಿದ್ದರು. ಆರ್ಗನ್, ಪಿಯಾನೊ, ಸೆಲ್ಲೋ, ಜಲತರಂಗ, ಯೂರೋಪಿಯನ್ ಬ್ಯಾಂಡ್ಸೆಟ್, ಬ್ಯಾಗ್ಪೈಪ್, ಇನ್ನಿತರ ವಾದ್ಯಗಳು ಎಲ್ಲವೂ ಅಂದಿನ ಕಾಲದಲ್ಲೇ ಅರಮನೆಯಲ್ಲಿ ಕಾಣ ಸಿಗುತಿತ್ತು.
ಜಲತರಂಗ ವಾದ್ಯ ಮೊದಲಿಗೆ ಮೈಸೂರು ಸಂಸ್ಥಾನದಲ್ಲಿ ಪರಿಚಯವಿಲ್ಲದಿದ್ದರೂ ನಮ್ಮಲ್ಲಿದ್ದ ಸಂಗೀತ ವಿದ್ವಾಂಸರ ಕೌಶಲ್ಯತೆಯಿಂದ ಆ ವಾದ್ಯವು ಸಂಗೀತ ಕೊಠಡಿಗೆ ಸೇರುವಂತಾಗಿದ್ದು ಒಂದು ಕುತೂಹಲಕಾರಿ ಕತೆ. ಮೈಸೂರಿನ ಮಹಾರಾಜರಿಗೆ ಸಂಗೀತ ಕಲೆಗಳ ಬಗ್ಗೆ ಆಸಕ್ತಿಇರುವ ಜೊತೆಗೆ ಹಚ್ಚಿನ ಪ್ರೊ ತ್ಸಾಹವನ್ನೂ ನೀಡುತ್ತಿದ್ದರು. ಹಾಗಾಗಿ ಸಂಗೀತ ಅರಮನೆಯಲ್ಲಿ ಮಾರ್ದನಿಸುತ್ತಿತ್ತು.
ಉತ್ತರ ಭಾರತದಿಂದ ಬಂದಿದ್ದ ಜಲತರಂಗ್ನಲ್ಲಿ ಪ್ರಾವೀಣ್ಯತೆ ಪಡೆದಿದ್ದ ವಿದ್ವಾಂಸನೊಬ್ಬ ನಾಲ್ವಡಿ ಕೃಷ್ಣರಾಜ ಒಡೆಯರ್ ಆಸ್ಥಾನಕ್ಕೆ ಬಂದು ಮಹರಾಜರು ಮತ್ತು ಆಸ್ಥಾನ ಕಲಾವಿದರ ಸಮ್ಮುಖದಲ್ಲಿ ಜಲತರಂಗ್ ಸಂಗೀತ ಕಚೇರಿ ನಡೆಸಿದ ನಂತರ ಅಲ್ಲಿನ ವಿದ್ವಾಂಸರಿಗೆ ಯಾರಾದರೂ ಈ ಜಲತರಂಗ್ ವಾದ್ಯ ನುಡಿಸಬಲ್ಲಿರಾ ಎಂದು ಯಾರು ಇದನ್ನು ಸರಿಗಟ್ಟಲಾರರು ಎಂದು ಹುಮ್ಮಸ್ಸಿನಿಂದ ಸವಾಲು ಹಾಕಿದ? ಇದಕ್ಕೆ ಮಹಾರಾಜರು ಆಸ್ಥಾನ ವಿದ್ವಾಂಸರಲ್ಲೇ ಅನುಭವಿ ಹಾಗೂ ಹಿರಿಯರಾಗಿದ್ದ ವೀಣೆ ಶೇಷಣ್ಣನವರನ್ನು ಕುರಿತು ಏನು ಹೇಳುತ್ತೀರಿ ಎಂದಾಗ ಆಗಬಹುದು ಸ್ವಾಮಿ ಇಂತಹ ಉದರವಾದ್ಯವನ್ನು ನಾನೆಂದು ನುಡಿಸಿಲ್ಲ. ಆದರೂ ಎರಡು ದಿನ ಕಾಲಾವಕಾಶ ನೀಡಿದರೆ ಅಭ್ಯಾಸ ಮಾಡಿ ನುಡಿಸುತ್ತೇನೆ ಎಂದಿದ್ದರು. ಅದಕ್ಕೆ ಸಮ್ಮಿತಿಸಿದ್ದ ಮಹಾರಾಜರು 3ನೇ ದಿನ ಎಲ್ಲ ಆಸ್ಥಾನ ಪಂಡಿತರು ಹಾಗೂ ಜಲತರಂಗ್ ಪಂಡಿತ ಅಲ್ಲಾಭಕ್ಷ್ ಎದುರಲ್ಲಿ ನುಡಿಸುವಂತೆ ಹೇಳಿದಾಗ ಅದೆಷ್ಟೋ ವರ್ಷಗಳಿಂದ ಪರಿಣಿತಿ ಪಡೆದು ಈ ವಾದ್ಯ ನುಡಿಸುತ್ತಿರುವಂತೆ ಶೇಷಣ್ಣನವರು ಒಮ್ಮೊಮ್ಮೆ ವೇಗದ ಗತಿಯಲ್ಲಿ ಮತ್ತೋರ್ವ ಗಂಭೀರ ಸ್ವರದಲ್ಲಿ ಚಿಟ್ಟೆಯ ಚಂಚಲತೆಯಂತೆ ಹೀಗೆ ನಾನಾ ಪ್ರಕಾರಗಳಲ್ಲಿ ನುಡಿಸಿ ಸಭೆನ್ನೇ ಮೂಕ ವಿಸ್ಮಿತವನ್ನಾಗಿ ಮಾಡಿದ್ದಲ್ಲದೆ.ಅಲ್ಲಾಬಕ್ಷ್ ಬಕ್ಕಾಸ್ ಬೆಗಾಗುವಂತೆ ಮಾಡಿದ್ದರು.
ಇಂಗ್ಲಿಷ್ ಬ್ಯಾಂಡ್ ಎಂಬ ವಾದ್ಯ ವೃಂದವನ್ನು ಸೃಷ್ಟಿಸಿ ಪಾಶ್ಚಾತ್ಯ ಹಾಗೂ ಪೌರಾತ್ಯ ಸಂಗೀತ ತೌಲನಿಕ ಅಧ್ಯಯನಕ್ಕೆ ಪ್ರಚೋದನೆ ನೀಡಿದ್ದರು. ನಾಡಿನ ಬಗ್ಗೆ ಸಾಕಷ್ಟು ಕಾಳಜಿ ಇದ್ದ ಕಾರಣ ಮೈಸೂರಿನ ಅರಸರು ಅಂದಿನ ದಿನಗಳಲ್ಲೇ ರಾಜ್ಯ ಗೀತೆಯನ್ನು ರಚಿಸಿ ಅದಕ್ಕೆ ರಾಗ ಸಂಯೋಜಿಸಿ ಶಾಲಾ ವಿದ್ಯಾರ್ಥಿಗಳು ಅದನ್ನು ಹಾಡುವಂತೆ ಬಳಕೆಗೆ ತಂದಿದ್ದರು ಎಂಬುದು ಅವರು ನಾಡಿಗೆ ನೀಡಿದ್ದ ಪ್ರಾಶಸ್ತ್ಯಕ್ಕೆ ಕೈಗನ್ನಡಿ.
– ಪುಷ್ಪ /ಗಣೇಶ್
► Follow us on – Facebook / Twitter / Google+